ADVERTISEMENT

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ ಜೂನ್ 1ರಂದು

ದಶಮಾನೋತ್ಸವ ಅಂಗವಾಗಿ ‘ರಾಷ್ಟ್ರೀಯ ಕಲಾ ಸಮ್ಮೇಳನ’

​ಪ್ರಜಾವಾಣಿ ವಾರ್ತೆ
Published 27 ಮೇ 2025, 4:10 IST
Last Updated 27 ಮೇ 2025, 4:10 IST
ಕುರಿಯ ಗಣಪತಿ ಶಾಸ್ತ್ರಿ
ಕುರಿಯ ಗಣಪತಿ ಶಾಸ್ತ್ರಿ   

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಜೂನ್ 1 ರಂದು  ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ‘ರಾಷ್ಟ್ರೀಯ ಕಲಾ ಸಮ್ಮೇಳನ’  ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ, ‘ಕಾರ್ಯಕ್ರಮವು ಬೆಳಗ್ಗೆ 9.30 ರಿಂದ  ಆರಂಭವಾಗಲಿದೆ. ಸಚಿವ ಶಿವರಾಜ ತಂಗಡಗಿ ಸಮ್ಮೇಳನವನ್ನು ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಪೇಜಾವರ ಮಠದ  ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಕ್ರಿಕೆಟ್ ಆಟಗಾರ ರೋಹಿತ್ ಶರ್ಮ ಭಾಗವಹಿಸಲಿದ್ದಾರೆ. ಸಂಜೆ 5.30 ಕ್ಕೆ ನಡೆಯುವ ಸಮಾರೋಪದಲ್ಲಿ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ’ ಎಂದರು. 

ಡಾ. ಎಂ.ಮೋಹನ್ ಆಳ್ವ  ಸಂಯೋಜನೆಯಲ್ಲಿ ದೇಶದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಗಾಗಿ ಯಕ್ಷಗಾನ ಸ್ಪರ್ಧೆ ನಡೆಯಲಿದ್ದು, ಎಂಟು ತಂಡಗಳು ಪಾಲ್ಗೊಳ್ಳಲಿವೆ ಎಂದರು. 

ADVERTISEMENT

 ವೈದ್ಯಕೀಯ ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಅಶಕ್ತ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಲಿದೆ. ಯಕ್ಷಗಾನ,  ರಂಗಭೂಮಿ, ಕಂಬಳ ಮತ್ತು ದೈವಾರಾಧನೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅಪಘಾತ ವಿಮೆಯನ್ನು ಟ್ರಸ್ಟ್‌ ಮೂಲಕ ಉಚಿತವಾಗಿ ಮಾಡಿಸಲಾಗುತ್ತದೆ. ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಈ ಕಾರ್ಯಕ್ರಮದ ಸ್ಥಳದಲ್ಲಿ ನೋಂದಣಿ ಮಾಡಿಸಬಹುದು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು 87 ಶಾಲೆಗಳ 6,500 ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಖಜಾಂಚಿ ಸಿ.ಎ ಸುದೇಶ್ ಕುಮಾರ್ ರೈ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜೊತೆ ಕಾರ್ಯದರ್ಶಿಗಳಾದ ರವಿಚಂದ್ರ ಶೆಟ್ಟಿ ಅಶೋಕನಗರ, ರಾಜೀವ್ ಪೂಜಾರಿ ಕೈಕಂಬ ಮತ್ತು ಉದಯಕುಮಾರ್ ಶೆಟ್ಟಿ  ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಕ್ರಿಕೆಟ್‌ ಆಟಗಾರ ರೋಹಿತ್ ಶರ್ಮಾಗೆ ಆಹ್ವಾನ | ಸಮಾರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಆಹ್ವಾನ | ತೆಂಕು,ಬಡಗು ತಿಟ್ಟುಗಳ 8 ತಂಡಗಳ ನಡುವೆ ಯಕ್ಷಗಾನ ಸ್ಪರ್ಧೆ

‘ಕುರಿಯ ಗಣಪತಿ ಶಾಸ್ತ್ರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ’

‘2025ನೇ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಹಾಗೂ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗೆ ನೀಡಲಿದ್ದೇವೆ. ಪ್ರಶಸ್ತಿ ಜೊತೆಗೆ ₹ 1 ಲಕ್ಷ  ಗೌರವಧನವನ್ನೂ ನೀಡಲಾಗುತ್ತದೆ’ ಎಂದು ಪಟ್ಲ ಸತೀಶ ಶೆಟ್ಟಿ ತಿಳಿಸಿದರು.  ‘ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ 16 ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ ಹಾಗೂ ₹ 20 ಸಾವಿರ ನಗದು ಪುರಸ್ಕಾರ ನೀಡಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.