ADVERTISEMENT

ಅಡಿಕೆ ನಿಷೇಧಿಸಿದರೆ ತೀವ್ರ ಹೋರಾಟ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 5:56 IST
Last Updated 1 ಜನವರಿ 2014, 5:56 IST

ಹೊನ್ನಾಳಿ: ಅಡಿಕೆ ನಿಷೇಧ ಮಾಡಿದರೆ ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೊಡ್ಡೆರೇಹಳ್ಳಿ ಎಚ್‌.ನಾಗರಾಜಪ್ಪ ಎಚ್ಚರಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಎದುರು ಸೋಮವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲ ವಾಗುವಂತೆ ನಿರಂತರ 16 ಗಂಟೆ ಗುಣಮಟ್ಟದ ವಿದ್ಯುತ್‌ ಪೂರೈಸಬೇಕು. ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ಘೋಷಿಸಬೇಕು. ಗೋರಖ್‌ಸಿಂಗ್‌ ವರದಿ ಜಾರಿಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಬೆಳಗುತ್ತಿ ಬಿ.ಎಚ್‌.ಉಮೇಶ್‌ ಮಾತನಾಡಿ, ತಂಬಾಕು ಕಂಪೆನಿಗಳ ಲಾಬಿಗೆ ಮಣಿದು ಕೇಂದ್ರ ಸರ್ಕಾರ ಅಡಿಕೆ ನಿಷೇಧ ಪ್ರಸ್ತಾವ ಮುಂದಿಟ್ಟಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ. ಬದಲಿಗೆ ಅಡಿಕೆಯಲ್ಲಿ ಔಷಧೀಯ ಗುಣಗಳಿವೆ. ಹಲವು ಸಮಾರಂಭಗಳಲ್ಲಿ ಅಡಿಕೆ ಬಳಸಲಾಗುತ್ತದೆ. ಭಾರತೀಯ ಸಂಸ್ಕೃತಿ–ಪರಂಪರೆಯಲ್ಲಿ ಅಡಿಕೆಗೆ ಅಗ್ರ ಸ್ಥಾನ ಇದೆ. ಆದ್ದರಿಂದ, ಕೇಂದ್ರ ಸರ್ಕಾರ ಅಡಿಕೆ ನಿಷೇಧ ಪ್ರಸ್ತಾವ ಕೈಬಿಡಬೇಕು ಎಂದು ಒತ್ತಾಯಿಸಿದರು.

ಆಳುವ ವರ್ಗದವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ವಿವಿಧ ಬೆಳೆಗಳ ಬೆಲೆ ಕುಸಿದು ರೈತ ಆತ್ಮಹತ್ಯೆ ಹಾದಿ ತುಳಿಯುವಂತಹ ಸ್ಥಿತಿ ಇದೆ. ಆದರೆ, ನಮ್ಮ ಸರ್ಕಾರಗಳು ಕಣ್ಣಿದ್ದೂ ಕುರುಡಾಗಿವೆ. ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಾ ರೈತರನ್ನು ಮರೆತಿದ್ದಾರೆ ಎಂದು ದೂರಿದರು.

ರೈತ ಮುಖಂಡ ಹಿರೇಮಠದ ಬಸವರಾಜಪ್ಪ ಮಾತನಾಡಿ, ಉನ್ನತ ವಿಚಾರಧಾರೆಗಳನ್ನು ಮೈಗೂಡಿಸಿ ಕೊಂಡ ರೈತ ಸಂಘ ಕಾರಣಾಂತರ ಗಳಿಂದ ತತ್ವ–ಸಿದ್ಧಾಂತಗಳಿಂದ ವಿಮುಖವಾಯಿತು. ರಾಜಕಾರಣಿಗಳ ಒಡೆದು ಆಳುವ ನೀತಿಗೆ ರೈತ ಸಂಘ ಬಲಿಯಾಗಿದೆ. ಇನ್ನಾದರೂ ರೈತ ಮುಖಂಡರು ಪ್ರಾಮಾಣಿಕ ಹೋರಾಟ ನಡೆಸಿ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದರು.

ರೈತ ನಾಯಕ ಹೊಸಕೊಪ್ಪದ ರುದ್ರಪ್ಪ ಅವರ ಸ್ಮರಣಾರ್ಥ ಹೊನ್ನಾಳಿಯ ಒಂದು ರಸ್ತೆ ಇಲ್ಲವೇ ವೃತ್ತಕ್ಕೆ ಅವರ ಹೆಸರಿಡಬೇಕು. ಅವರ ಪ್ರತಿಮೆ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆರುಂಡಿ ನಾಗರಾಜ್‌, ರೈತ ಮುಖಂಡರಾದ ಎಸ್‌.ಕೆ.ಕೆಂಚಪ್ಪ, ಕೆ.ನಿಂಗಪ್ಪ ಮಾತನಾಡಿದರು.

ರೈತ ಮುಖಂಡರಾದ ಆದಿರಾಜ್‌, ವೈ.ಎಸ್‌.ಚನ್ನೇಶ್‌, ಎಂ.ರಮೇಶ್‌, ಈರಪ್ಪ, ಈಶ್ವರಪ್ಪ ಇದ್ದರು. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.