ADVERTISEMENT

ಅಣ್ಣ-ತಮ್ಮಂದಿರ ನೆಲೆವೀಡು ಯಕ್ಕನಹಳ್ಳಿ

ಚನ್ನೇಶ ಬಿ.ಇದರಮನಿ
Published 1 ನವೆಂಬರ್ 2012, 11:20 IST
Last Updated 1 ನವೆಂಬರ್ 2012, 11:20 IST

ಕುಂದೂರು, ಕೂಲಂಬಿ ಗ್ರಾಮಗಳಲ್ಲಿ ನೆಲೆಸಿದ ಅಣ್ಣ-ತಮ್ಮಂದಿರ ಅಕ್ಕ ಯಕ್ಕನಹಳ್ಳಿಯಲ್ಲಿ ನೆಲೆಸಿದ್ದರಿಂದ ಈ ಗ್ರಾಮಕ್ಕೆ `ಅಕ್ಕನಹಳ್ಳಿ~ ಎಂಬ ಹೆಸರು ಬಂತು. ಕಾಲಾನುಕ್ರಮದಲ್ಲಿ ಯಕ್ಕನಹಳ್ಳಿ ಎಂದು ರೂಢಿಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.

ಹೊನ್ನಾಳಿಯಿಂದ ಪೂರ್ವಕ್ಕೆ ಸುಮಾರು 20 ಕಿ.ಮೀ.ಗಳಷ್ಟು ದೂರದಲ್ಲಿ ಇರುವ ಯಕ್ಕನಹಳ್ಳಿ ಗ್ರಾಮ ಕುಂದೂರಿನ ಉತ್ತರಕ್ಕೆ ಮಲೇಬೆನ್ನೂರು ರಸ್ತೆಯಲ್ಲಿ 2 ಕಿ.ಮೀ. ದೂರದಲ್ಲಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯದ ನೀರಾವರಿ ಸೌಲಭ್ಯ ಹೊಂದಿರುವ ಗ್ರಾಮಕ್ಕೆ ಕುಡಿಯಲು ಕೊಳವೆಬಾವಿ ನೀರೇ ಆಸರೆ. ಭದ್ರಾ ಮುಖ್ಯನಾಲೆ ಗ್ರಾಮ ಸುತ್ತುವರಿದಿದ್ದು, ಗ್ರಾಮದ ಸೌಂದರ್ಯ ಇಮ್ಮಡಿಗೊಳಿಸಿದೆ.

ಕೃಷಿ ಗ್ರಾಮದ ಹೆಚ್ಚಿನ ಜನರ ಜೀವನಾಧಾರದ ಕಸುಬು. ಬತ್ತ ಪ್ರಮುಖ ಬೆಳೆ. ಶೇ 90ರಷ್ಟು ರೈತರು ಬತ್ತ ಬೆಳೆಯುತ್ತಾರೆ. ಶೇ 10ರಷ್ಟು ರೈತರು ಅಡಿಕೆ, ತೆಂಗು ಬೆಳೆಯುತ್ತಾರೆ.

ಕೃಷಿ ಜತೆ ಹೈನುಗಾರಿಕೆ ಉಪಕಸುಬು ಗ್ರಾಮಸ್ಥರ ಆರ್ಥಿಕತೆಯ ಬೆನ್ನೆಲುಬು. ಪ್ರತಿದಿನ 800 ಲೀಟರ್ ಹಾಲು ಸಂಗ್ರಹವಾಗುತ್ತದೆ. ಸರ್ಕಾರದ ಹಲವಾರು ಯೋಜನೆಗಳನ್ನು ಗ್ರಾಮದ ಜನರು ಚಾಣಾಕ್ಷತನದಿಂದ ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿದ್ದಾರೆ.

ಲಿಂಗಾಯತರು, ಕುರುಬರು, ವಾಲ್ಮೀಕಿ ನಾಯಕರು, ಜಂಗಮರು, ಪರಿಶಿಷ್ಟ ಜಾತಿ ಸೇರಿದಂತೆ ಯಕ್ಕನಹಳ್ಳಿ ಗ್ರಾಮ ಸುಮಾರು 350-400 ಮನೆಗಳ 2,500 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್. ಬಸವರಾಜಪ್ಪ ಹೇಳುತ್ತಾರೆ.

ಗ್ರಾಮದ ಬಸವೇಶ್ವರ ಆಧುನಿಕ ರೈಸ್‌ಮಿಲ್ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ದೇವಾಂಗದ ದಿ.ಟಿ. ಸಿದ್ದಪ್ಪ ಜ್ಞಾಪಕಾರ್ಥವಾಗಿ ಸಿದ್ದಮ್ಮ ಮತ್ತು ಮಕ್ಕಳು ತಮ್ಮ ಸ್ವಂತ ವೆಚ್ಚದಲ್ಲಿ ಗ್ರಾಮದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಮಾದರಿಯಾಗಿದೆ. 

ಯಕ್ಕನಹಳ್ಳಿ ಮತ್ತು ಯರೇಚಿಕ್ಕನಹಳ್ಳಿ ಗ್ರಾಮಸ್ಥರು ನೆಂಟಸ್ತಿಕೆ ಮಾಡುವುದಿಲ್ಲ. ಅಷ್ಟೇ ಏಕೆ ಎರಡು ಗ್ರಾಮಗಳ ಜನರು ದನ-ಕರು, ಎತ್ತು, ಎಮ್ಮೆ ಮಾರಾಟವನ್ನೂ ಮಾಡುವುದಿಲ್ಲ! ಇಡೀ ರಾಜ್ಯದಲ್ಲಿಯೇ ಇದು ವಿಶೇಷ.

ಆರಾಧ್ಯ ದೈವ ಬಸವೇಶ್ವರ ಸ್ವಾಮಿ
ಗ್ರಾಮದ ಆರಾಧ್ಯ ದೈವ ಬಸವೇಶ್ವರ ಸ್ವಾಮಿ. ಯುಗಾದಿ ಹಬ್ಬ ಕಳೆದು 9 ದಿನಗಳ ನಂತರ ಬಸವೇಶ್ವರ ದೇವರ ರಥೋತ್ಸವ ಸುತ್ತ-ಮುತ್ತಲ ಹಲವಾರು ಗ್ರಾಮಗಳ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ. 

ಗ್ರಾಮದ ಹಾಲುಮತ ಜನಾಂಗದವರ ಆರಾಧ್ಯ ದೇವಿ ಮಾಯಾಂಬಿಕಾ ದೇವಿ ದೇವಸ್ಥಾನ ಅತ್ಯಾಕರ್ಷಕವಾಗಿದೆ. ಬೆಳಗಾವಿ ಜಿಲ್ಲೆಯ ಚಿಂಚಲಿಯಲ್ಲಿರುವ ಮಾಯಾಂಬಿಕಾ ದೇವಿ ಸನ್ನಿಧಿಗೆ ಹೋಗಲು ಆಗದ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತಾದಿಗಳು ಯಕ್ಕನಹಳ್ಳಿಯ ಮಾಯಾಂಬಿಕಾ ದೇವಿ ದೇವಸ್ಥಾನಕ್ಕೆ ಬರುತ್ತಾರೆ. ಸಮುದಾಯ ಭವನ ಕಾಮಗಾರಿ ಪ್ರಗತಿಯಲ್ಲಿದೆ.

ಗ್ರಾಮದ ಮಾತಂಗೆಮ್ಮ, ಚೌಡೇಶ್ವರಿ ದೇವಿ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳಬೇಕಿದೆ. ಬಸವೇಶ್ವರ, ಬೀರಲಿಂಗೇಶ್ವರ ಸ್ವಾಮಿ, ಈಶ್ವರ ದೇವಸ್ಥಾನಗಳನ್ನು ಗ್ರಾಮಸ್ಥರು ನೂತನವಾಗಿ ನಿರ್ಮಿಸುವ ಚಿಂತನೆ ಹೊಂದಿದ್ದಾರೆ. ವಿಘ್ನೇಶ್ವರ, ದುರ್ಗಾಂಬಿಕಾ, ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಗಳು ಗ್ರಾಮದ ಇತರ ದೇವಾಲಯಗಳು.

ಜಾನಪದ ಕಲೆಗಳು
ಗ್ರಾಮದ ಬೀರಲಿಂಗೇಶ್ವರ ಯುವಕರ ಸಂಘದ ಕಲಾವಿದರು ಡೊಳ್ಳು ಕುಣಿತದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದ್ದಾರೆ. ಬಸವೇಶ್ವರ ಭಜನಾ ಮಂಡಳಿ ಕಲಾವಿದರು, ಮಹಿಳಾ ಸಂಘದ ಕಲಾವಿದೆ ಸುವರ್ಣಮ್ಮ ತಮ್ಮ ಕಲೆಯ ಪ್ರದರ್ಶನದ ಮೂಲಕ ಗ್ರಾಮದ ಜಾನಪದ ಶ್ರೀಮಂತಿಕೆಯನ್ನು ನಾಡಿಗೆ ಪರಿಚಯಿಸಿದ್ದಾರೆ.
ವೀರಗಾಸೆ ಕಲಾವಿದರಾದ ತಿಪ್ಪೇಶ್ ಮತ್ತು ನಂಜಪ್ಪ ಮೈಸೂರು, ಗುಲ್ಬರ್ಗಾದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ಉತ್ತಮ ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ತುಂಬಾ ಅನುಕೂಲವಾಗಿದೆ. ಇದೇ ರೀತಿ ಉತ್ತಮ ರಸ್ತೆ-ಚರಂಡಿ ವ್ಯವಸ್ಥೆ ಗ್ರಾಮದ ಎಲ್ಲೆಡೆ ಆಗಬೇಕು. ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಿಸಬೇಕು ಎನ್ನುತ್ತಾರೆ ಗ್ರಾಮದ ಮುಖಂಡರಾದ ಟಿ.ಎಸ್. ಯೋಗೀಶ್.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಇದನ್ನು ಹೋಗಲಾಡಿಸಬೇಕು. ಫ್ಲೋರೈಡ್‌ಯುಕ್ತ ನೀರಿನಿಂದಾಗಿ ಆರೋಗ್ಯ ಹದಗೆಡುತ್ತಿದೆ. ಶುದ್ಧ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಗ್ರಾಮಸ್ಥರಾದ ಎಸ್.ಎಸ್. ತಿಪ್ಪೇಶ್.

ಗ್ರಾಮದ ಮಾತಂಗೆಮ್ಮ ದೇವಸ್ಥಾನದ ಜೀರ್ಣೋದ್ಧಾರ ಆಗಬೇಕು. ಸುಸಜ್ಜಿತ ಸಮುದಾಯ ಭವನ ನಿರ್ಮಾಣಗೊಂಡರೆ ಗ್ರಾಮಸ್ಥರಿಗೆ ಅನುಕೂಲ ಆಗುತ್ತದೆ ಎಂದು ಹೇಳುತ್ತಾರೆ ಗ್ರಾಮ ಪಂಚಾಯ್ತಿ ಜವಾನ ಎಸ್. ಬಸವರಾಜು.

ಗ್ರಾಮದ ಪರಿಶಿಷ್ಟರು ನಿವೇಶನ ಕೊರತೆ ಎದುರಿಸುತ್ತಿದ್ದಾರೆ. ಪರಿಶಿಷ್ಟರಿಗೆ ಮೀಸಲಾದ ಭೂಮಿಯನ್ನು ಬೇರೆಯವರು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಗಮನಹರಿಸಿ ಪರಿಶಿಷ್ಟರಿಗೆ ನಿವೇಶನ ನೀಡಬೇಕು ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯೆ ಮಂಜಮ್ಮ ಶೇಖರಪ್ಪ.

ಸ್ತ್ರೀಶಕ್ತಿ ಸಂಘಗಳ ಸಾಧನೆ
ಸ್ತ್ರೀಶಕ್ತಿ ಸಂಘಗಳು ಗ್ರಾಮದ ಎಲ್ಲಾ ವರ್ಗಗಳ ಮಹಿಳೆಯರ ಸ್ವಾವಲಂಬನೆಗೆ ದಾರಿದೀಪವಾಗಿವೆ. ಬಸವೇಶ್ವರ, ಬನಶಂಕರಿ, ಭದ್ರಾ, ಭುವನೇಶ್ವರಿ, ಅಯ್ಯಪ್ಪಸ್ವಾಮಿ ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ಅನೇಕ ಸಂಘಗಳು ಅಸ್ತಿತ್ವದಲ್ಲಿವೆ. ಅರ್ಪಣಾ ಮನೋಭಾವದ ಮಾರ್ಗದರ್ಶಕರ ನೆರವಿನಿಂದ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮದ ಎಸ್.ಜಿ. ಬಸವರಾಜಪ್ಪ ಗ್ರಾಮಸ್ಥರ ಉಳಿತಾಯದ ಹಣ ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ರೂ 8ಲಕ್ಷ ವೆಚ್ಚದಲ್ಲಿ ಸುಂದರ ಬಸವೇಶ್ವರ ಮಹಾದ್ವಾರ ನಿರ್ಮಿಸಲು ಶ್ರಮಿಸಿದ್ದಾರೆ ಎನ್ನುತ್ತಾರೆ ಬಿ.ಎಂ. ರಾಮಾಂಜನೇಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.