ADVERTISEMENT

ಅದ್ದೂರಿ ಯುವಜನೋತ್ಸವಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 6:43 IST
Last Updated 12 ಡಿಸೆಂಬರ್ 2012, 6:43 IST

ಹರಪನಹಳ್ಳಿ: ಮಧ್ಯಕರ್ನಾಟಕ ಇತಿಹಾಸ ಪ್ರಸಿದ್ಧ ಹಾಗೂ ಬಯಲುಸೀಮೆಯ ನೆಲವಾದ ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಡಿ. 15 ಮತ್ತು 16ರಂದು ರಾಜ್ಯಮಟ್ಟದ 17ನೇ ಯುವಜನೋತ್ಸವ ಸಮಾರಂಭವನ್ನು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯವಜನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಈಚೆಗೆ ಯುವಜನಸೇವೆ ಇಲಾಖೆಯ ಅಧಿಕಾರಿಗಳು ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಐತಿಹಾಸಿಕ ಪ್ರಸಿದ್ಧ ಉತ್ಸವಾಂಬೆ ಕ್ಷೇತ್ರದಲ್ಲಿ ನಡೆಯುವ ಯುವಜನೋತ್ಸವದಲ್ಲಿ ಸಮವಸ್ತ್ರ ಧರಿಸಿದ 300ಜನ ಯುವಕರ ತಂಡ, ಬೆಟ್ಟದ ಮೇಲೆ ನೆಲೆಸಿರುವ ಉತ್ಸವಾಂಬೆ ದೇಗುಲದಿಂದ ಜ್ಯೋತಿಯೊಂದಿಗೆ ಆಗಮಿಸಲಿದೆ. ನಂತರ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ, ಯುವಜನೋತ್ಸವದ ವೇದಿಕೆಗೆ ಬರಲಿದೆ. ಡಿ. 15ರಂದು ಸಂಸತ್‌ಸದಸ್ಯ ಜಿ.ಎಂ. ಸಿದ್ದೇಶ್ವರ ಉತ್ಸವವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ಅಧ್ಯಕ್ಷತೆವಹಿಸುವರು. ಡಿ. 16ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಾಡಿನ ಪ್ರಮುಖ ಮಠಾಧೀಶರು ಹಾಗೂ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಪಾಲ್ಗೊಳ್ಳುವರು ಎಂದು ರಾಮಚಂದ್ರ ತಿಳಿಸಿದರು.

ಸುಮಾರು 2ಸಾವಿರ ಕಲಾ ತಂಡಗಳು ಯುವಜನೋತ್ಸವದಲ್ಲಿ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಮಾಡಲಿದ್ದಾರೆ. ಜತೆಗೆ, ಜಿಲ್ಲೆಯ 30ಕಲಾ ತಂಡಗಳು  ಪಾಲ್ಗೊಳ್ಳಲಿವೆ ಎಂದು ಶಾಸಕರು ಮಾಹಿತಿ ನೀಡಿದರು.ಉತ್ಸವಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 10 ಸಾವಿರ ಆಸನಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಕಲಾವಿದರ ವಾಸ್ತವ್ಯಕ್ಕಾಗಿ ಅರಸೀಕೆರೆ ಹಾಗೂ ಉಚ್ಚಂಗಿದುರ್ಗ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಜಗಳೂರು ತಾಲ್ಲೂಕಿನ 7ಗ್ರಾಮ ಪಂಚಾಯ್ತಿಯ ಹಳ್ಳಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಯುವಕರು ಹಾಗೂ ಹಿರಿಯ ಕಲಾವಿದರನ್ನು ಪುರಸ್ಕಾರಿಸಲಾಗುವುದು ಎಂದು ತಿಳಿಸಿದರು.ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತನಾ ನೆಲವಿಗಿ, ರಾಷ್ಟ್ರೀಯ ಯುವಪ್ರಶಸ್ತಿ ಪುರಸ್ಕೃತ ಮಾಗಾನಹಳ್ಳಿ ಮಂಜುನಾಥ, ತಾ.ಪಂ. ಸದಸ್ಯ ಮಹೇಶಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.