ADVERTISEMENT

ಅವ್ಯವಸ್ಥೆಯ ಆಗರವಾದ ಕೇಂದ್ರ

ಚನ್ನೇಶ ಬಿ.ಇದರಮನಿ
Published 5 ಫೆಬ್ರುವರಿ 2014, 7:26 IST
Last Updated 5 ಫೆಬ್ರುವರಿ 2014, 7:26 IST

ಹೊನ್ನಾಳಿ: ಈ ಬಾರಿ ತಾಲ್ಲೂಕಿನ ಶೇ.80ರಷ್ಟು ರೈತರು ಮೆಕ್ಕೆಜೋಳ ಬೆಳೆದಿರುವ ಪರಿಣಾಮ ಹೆಚ್ಚಿನ ಇಳುವರಿ ಬಂದಿದ್ದು, ಎಪಿಎಂಸಿ ಗೋದಾಮುಗಳು ಭರ್ತಿ ಆಗಿರುವುದರಿಂದ ಸಂಗ್ರಹಿಸಿಡುವದೇ ಸಮಸ್ಯೆಯಾಗಿದೆ. ತಾಲ್ಲೂಕಿನ ಚೀ.ಕಡದಕಟ್ಟೆಯ ಡಿಜಿಆರ್‌ ಉಗ್ರಾಣ ನಿಗಮದ ಗೋದಾಮು ಕೂಡ ಭರ್ತಿಯಾಗಿದೆ.

ಪಟ್ಟಣದ ನ್ಯಾಮತಿ ರಸ್ತೆಯಲ್ಲಿನ ಎಪಿಎಂಸಿ ಅವ್ಯವಸ್ಥೆಯ ಆಗರವಾಗಿದೆ. ಎಪಿಎಂಸಿ ಖರೀದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ಈಚೆಗೆ ರೈತ ಸಂಘ ರಸ್ತೆ ತಡೆ ಪ್ರತಿಭಟನೆ ನಡೆಸಿರುವುದೇ ಇದಕ್ಕೆ ಸಾಕ್ಷಿ. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕುರುವ ಗಣೇಶ್‌ ಮತ್ತು ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಬಿದರಗಡ್ಡೆ ಭರ್ಮಪ್ಪಗೌಡ ಇತರರು, ಮೆಕ್ಕೆಜೋಳ ಮತ್ತು ಬತ್ತವನ್ನು ಸಮರ್ಪಕವಾಗಿ ಖರೀದಿಸದಿದ್ದರೆ ಅಧಿಕಾರಿಗಳ ವಿರುದ್ಧ ಅಹೋರಾತ್ರಿ ಧರಣಿ ನಡೆಸ ಲಾಗುವುದು ಎಂದು ಎಚ್ಚರಿಸಿದ್ದಾರೆ.

‘ಎಪಿಎಂಸಿ ಪ್ರಾಂಗಣದಲ್ಲಿನ ಖರೀದಿ ಕೇಂದ್ರದಲ್ಲಿ ಯಾರೂ ಇಲ್ಲ. ಮೆಕ್ಕೆಜೋಳ–ಭತ್ತ ಖರೀದಿಸಿ, ರೈತರಿಗೆ ಸಂಬಂಧಿತ ರಸೀದಿ ನೀಡಬೇಕಾದ ಉಗ್ರಾಣದ ವ್ಯವಸ್ಥಾಪಕ ನೂರ್‌ ಅಹಮ್ಮದ್‌ ನಾಪತ್ತೆಯಾಗಿದ್ದಾರೆ. ಸಂಪರ್ಕ ಮೊಬೈಲ್‌ ಬಂದ್‌ ಆಗಿದೆ.
ರೈತರ ಸಂಕಷ್ಟಕ್ಕೆ ಕಾರಣವಾಗಿರುವ ವ್ಯವಸ್ಥಾಪಕ ನೂರ್‌ ಅಹಮ್ಮದ್‌ ಅವರನ್ನು ಅಮಾನತಿನಲ್ಲಿಡಬೇಕು’ ಎಂದು ರೈತರು ಒತ್ತಾಯಿಸುತ್ತಾರೆ. 

‘ರೈತರು ಮೆಕ್ಕೆಜೋಳ ಮತ್ತು ಬತ್ತವನ್ನು ಎಪಿಎಂಸಿಗೆ ತಂದು ಮೂರು ದಿನವಾದರೂ ಯಾರೊಬ್ಬರೂ ರೈತರತ್ತ ಗಮನಹರಿಸುತ್ತಿಲ್ಲ. ಎಪಿಎಂಸಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳೇ ಇಲ್ಲ. ಹಗಲು–ಇರುಳೆನ್ನದೇ, ಹೊಟ್ಟೆ–ಬಟ್ಟೆಯ ಚಿಂತೆ ಮಾಡದೇ ರೈತರು ಎಪಿಎಂಸಿಯಲ್ಲಿ ಕಾಯುತ್ತಿದ್ದಾರೆ. ಆದರೆ, ಅಧಿಕಾರಿಗಳು ನಮಗೂ ಖರೀದಿ ಕೇಂದ್ರಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ದುರಂತದ ಸಂಗತಿ’ ಎಂಬುದು ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಭರ್ಮಪ್ಪ ಮಾಸಡಿ ಅವರ ಖೇದದ ನುಡಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT