ADVERTISEMENT

ಇಂದಿನಿಂದ ಹೈಸ್ಕೂಲ್ ಮೈದಾನದಲ್ಲಿ ‘ಖಾದಿ ಉತ್ಸವ’

ವಲಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 9:36 IST
Last Updated 9 ಡಿಸೆಂಬರ್ 2017, 9:36 IST
ಇಂದಿನಿಂದ ಹೈಸ್ಕೂಲ್ ಮೈದಾನದಲ್ಲಿ ‘ಖಾದಿ ಉತ್ಸವ’
ಇಂದಿನಿಂದ ಹೈಸ್ಕೂಲ್ ಮೈದಾನದಲ್ಲಿ ‘ಖಾದಿ ಉತ್ಸವ’   

ದಾವಣಗೆರೆ: ವಲಯದ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ‘ಖಾದಿ ಉತ್ಸವ’ವನ್ನು ಇದೇ 9ರಿಂದ 28ರವರೆಗೆ 20 ದಿನಗಳ ಕಾಲ ನಗರದ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿಸಲಾಗಿದೆ.

ವಸ್ತು ಪ್ರದರ್ಶನವನ್ನು 9ರಂದು ಸಂಜೆ 5ಕ್ಕೆ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಉದ್ಘಾಟಿಸುವರು. ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಖಾತೆ ಸಚಿವೆ ಎಂ.ಸಿ.ಮೋಹನಕುಮಾರಿ ಗಾಂಧೀಜಿ ಪ್ರತಿಮೆ ಆನಾವರಣಗೊಳಿಸುವರು. ಅವರು ಸಚಿವ ಎಚ್‌.ಆಂಜನೇಯ ಖಾದಿ ಪ್ರಾತ್ಯಕ್ಷಿಕೆ ಉದ್ಘಾಟಿಸುವರು ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ 8 ಖಾದಿ ಘಟಕಗಳಿದ್ದು, 1,150 ಮಂದಿಗೆ ಉದ್ಯೋಗ ನೀಡಲಾಗಿದೆ. 920 ಗುಡಿ ಕೈಗಾರಿಕೆಗಳಿದ್ದು, 4,904 ಉದ್ಯೋಗನಿರತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಸಾಲ ಕಟ್ಟಲಾಗದೇ ರಾಜ್ಯದಲ್ಲಿ ಬಹಳಷ್ಟು ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಗಳು ನಷ್ಟದಲ್ಲಿದ್ದವು. ಇದನ್ನು ಮನಗಂಡ ಮಂಡಳಿ ‘ಒನ್‌ ಟೈಮ್‌ ಸೆಟ್ಲ್‌ಮೆಂಟ್‌’ ಯೋಜನೆ ಜಾರಿಗೊಳಿಸಿ, ಕಳೆದ ಎರಡೂವರೆ ವರ್ಷಗಳಲ್ಲಿ ₹ 27 ಕೋಟಿ ವಸೂಲು ಮಾಡಲಾಗಿದೆ. ಕೈಗಾರಿಕೆಗಳಿಗೆ ₹ 33 ಕೋಟಿ ಬಡ್ಡಿ ಬಿಟ್ಟು ಕೊಡಲಾಗಿದೆ ಎಂದು ಹೇಳಿದರು.

‘ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆ’ ಸದ್ಯಕ್ಕೆ ಮುಕ್ತಾಯಗೊಂಡಿದ್ದು, ಇನ್ನೂ ಬಹಳಷ್ಟು ಖಾದಿ ಘಟಕಗಳು ದಿನಾಂಕ ವಿಸ್ತರಣೆಗೆ ಮನವಿ ಮಾಡಿವೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳು ತಯಾರಿಸುವ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ತಲಾ ₹ 10 ಕೋಟಿ ವೆಚ್ಚದಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಖಾದಿ ಪ್ಲಾಜಾ ತೆರೆಯಲು ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರ ₹ 20 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದರು.

ಖಾದಿ ನೂಲು ತೆಗೆಯುವ ಕಸುಬುದಾರರಿಗೆ ಒಂದು ಲಡಿ ನೂಲಿಗೆ ₹ 3.50 ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದನ್ನು ₹ 7ಕ್ಕೆ ಹೆಚ್ಚಿಸಬೇಕು ಮತ್ತು ಒಂದು ಮೀಟರ್ ನೇಯ್ಗೆಗೆ ₹ 7 ಬದಲಾಗಿ ₹ 14 ನೀಡಬೇಕು ಎಂದು ಮಂಡಳಿಯ ಕಳೆದ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಖಾದಿ ವಸ್ತುಗಳಿಗೆ ಜಿಎಸ್‌ಟಿ ಇಲ್ಲ:

ಈ ಹಿಂದೆ ಕೇಂದ್ರ ಸರ್ಕಾರ ಖಾದಿ ಮತ್ತು ಕರಕುಶಲ ವಸ್ತುಗಳಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಿತ್ತು. ಇದರಿಂದ ಗ್ರಾಮೀಣ ಕುಶಲ ಕರ್ಮಿಗಳಿಗೆ ಆಘಾತ ಉಂಟಾಗಿತ್ತು. ಸತತ ಮನವಿ ಮೇರೆಗೆ ಕೇಂದ್ರ ಸರ್ಕಾರ ಖಾದಿ ಮತ್ತು ಕರಕುಶಲ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಟ್ಟಿದೆ ಎಂದು ಹೇಳಿದರು.

ಖಾದಿ ಮಂಡಳಿಗೆ 2014–15ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಉತ್ತಮ ‘ಖಾದಿ ಬೋರ್ಡ್’ ಪ್ರಶಸ್ತಿ ನೀಡಿ ಗೌರವಿಸಿದೆ ಎಂದ ಅವರು, ಖಾದಿ ಮತ್ತು ಗ್ರಾಮೋದ್ಯೋಗ ಉದ್ದಿಮೆದಾರರಿಗೆ ತರಬೇತಿ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಕಡೆಗಳಲ್ಲಿ ತಲಾ ₹ 1 ಕೋಟಿ ವೆಚ್ಚದಲ್ಲಿ ತರಬೇತಿ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಖಾದಿ ಸಮವಸ್ತ್ರ?

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಖಾದಿ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಸರ್ಕಾರಕ್ಕೆ ಕೇಳಿ ಕೊಂಡಾಗ ಅಷ್ಟು ಮಟ್ಟದ ಉತ್ಪಾದನೆ ಒದಗಿಸಲು ಸಾಧ್ಯವೆ ಎಂಬ ಸ್ಪಷ್ಟನೆ ಕೇಳಿದೆ. ಈ ಬಗ್ಗೆ ಸಮೀಕ್ಷೆ ಕೈಗೊಂಡಿದ್ದು, ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಎಸ್‌.ಎನ್‌.ಬಾಲಾಜಿ ಅವರೂ ಉಪಸ್ಥಿತರಿದ್ದರು.

***

105 ಮಳಿಗೆಗೆ ಅವಕಾಶ

ಉತ್ಸವದಲ್ಲಿ 105 ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇದುವರೆಗೂ 94 ಮಳಿಗೆಗಳು ಭರ್ತಿಯಾಗಿವೆ. ಜಿಲ್ಲೆಗೆ 18 ಮಳಿಗೆ ಮೀಸಲಿಡಲಾಗಿದೆ. ಇದರಲ್ಲಿ 11 ಖಾದಿ, 7 ಗ್ರಾಮೋದ್ಯೋಗ ಮಳಿಗೆಗಳಿವೆ ಎಂದು ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಸ್‌.ಎಸ್‌.ಬಸವರಾಜ್ ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಸಂಘ, ಸಂಸ್ಥೆ ಹಾಗೂ ಫಲಾನುಭವಿ ಘಟಕಗಳು ಪಾಲ್ಗೊಳ್ಳುತ್ತಿವೆ. ಒಟ್ಟು 33 ಖಾದಿ, 59 ಗ್ರಾಮೋದ್ಯೋಗ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.