ADVERTISEMENT

ಈ ರೈತರಿಗಿಲ್ಲ ಬಗರ್‌ಹುಕುಂ ಸಕ್ರಮದ ಭಾಗ್ಯ!

ದೊಡ್ಡರಂಗವ್ವನಹಳ್ಳಿ: 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 25 ರೈತ ಕುಟುಂಬಗಳು

ಮಲ್ಲೇಶ್ ನಾಯಕನಹಟ್ಟಿ
Published 6 ಆಗಸ್ಟ್ 2016, 4:41 IST
Last Updated 6 ಆಗಸ್ಟ್ 2016, 4:41 IST
ದೊಡ್ಡರಂಗವ್ವನಹಳ್ಳಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿರುವ ರೈತರು.
ದೊಡ್ಡರಂಗವ್ವನಹಳ್ಳಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿರುವ ರೈತರು.   

ದಾವಣಗೆರೆ:  ‘ಅಜ್ಜನ ಕಾಲದಿಂದಲೂ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಮಳೆಯಾಧಾರಿತ ಈ ಭೂಮಿ ಬಿಟ್ಟರೆ ಗತಿಯಿಲ್ಲ. ಮಳೆಗಾಲ ಮುಗಿದರೆ ಕೂಲಿಯೇ ಜೀವನಾಧಾರ. ಕೂಲಿಯ ಜತೆಗೆ ತುಂಡುಭೂಮಿ ಬದುಕಿಗೆ ಆಸರೆಯಾಗಿದೆ.

ಆದರೆ, ಸುಮಾರು 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ನಮಗೆ ಸರ್ಕಾರ ಹಕ್ಕುಪತ್ರ ನೀಡಿಲ್ಲ. ಈಗ ಭೂಮಿ ನಮಗೆ ದಕ್ಕುತ್ತದೋ ಇಲ್ಲವೋ ಎಂಬ ಭೀತಿ ನಮ್ಮನ್ನು ಉಸಿರು ಬಿಗಿಹಿಡಿಯುವಂತೆ ಮಾಡಿದೆ...’

ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡರಂಗವ್ವನಹಳ್ಳಿ ಗ್ರಾಮದ 25 ರೈತ ಕುಟುಂಬಗಳ ನೋವಿನ ನುಡಿ ಇದು.

ಆನಗೋಡು ಹೋಬಳಿ ನೇರ್‍್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ದೊಡ್ಡರಂಗವ್ವನಹಳ್ಳಿ, ಮಾಯಕೊಂಡ   ಶಾಸಕ ಕೆ.ಶಿವಮೂರ್ತಿ ಅವರ ಸ್ವಗ್ರಾಮ. ಬಗರ್‌ಹುಕುಂ ಸಮಿತಿ ಅಧ್ಯಕ್ಷ ರಾಗಿರುವ ಅವರಿಗೆ ತಮ್ಮ ಊರಿನಲ್ಲಿ ಇಷ್ಟೊಂದು ರೈತ ಕುಟುಂಬಗಳಿಗೆ ಅನ್ಯಾಯವಾಗಿರುವುದು ಗಮನಕ್ಕೆ ಬಂದಿಲ್ಲವೇ ಎಂದು  ಪ್ರಶ್ನಿಸಿದರೆ, ರೈತರು ನಿರುತ್ತರರಾಗುತ್ತಾರೆ!

ಇಲ್ಲಿನ ಬಹುತೇಕ ರೈತರು ಅನಕ್ಷರಸ್ಥರಾಗಿರುವುದು, ಸರ್ಕಾರಕ್ಕೆ ವರದಿ ಸಲ್ಲಿಸುವಲ್ಲಿ ಹಿಂದೆಯಿದ್ದ ಅಧಿಕಾರಿಗಳ ನಿರ್ಲಕ್ಷ್ಯ ಇವೆಲ್ಲ ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಗ್ರಾಮಕ್ಕೆ ಹೊಂದಿಕೊಂಡಂತೆ ಸರ್ವೆ ನಂ. 25 ಮತ್ತು 26ರಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರ್ವೆ ನಂ. 25ರಲ್ಲಿ 7 ಎಕರೆಗಳಷ್ಟು ಗೋಮಾಳದ ಭೂಮಿ ಇದೆ. ಯೋಗೇಂದ್ರ ನಾಯ್ಕ (1 ಎಕರೆ 20 ಗುಂಟೆ), ಸಂತೋಷ ನಾಯ್ಕ (1 ಎಕರೆ), ನಾಗಮ್ಮ (10 ಗುಂಟೆ), ಅಜ್ಜಪ್ಪ (10 ಗುಂಟೆ),

ಮಂಜಪ್ಪ (1.10  ಗುಂಟೆ), ಲಕ್ಷ್ಮಮ್ಮ(1ಎಕರೆ 10 ಗುಂಟೆ), ರಾಜಪ್ಪ (1 ಎಕರೆ) ರಾಮಪ್ಪ (1 ಎಕರೆ) ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಅದೇ ರೀತಿ ಸರ್ವೇ ನಂ 26ರಲ್ಲಿ ಒಟ್ಟು 26 ಎಕರೆ ಗೋಮಾಳ ಭೂಮಿ ಇದೆ. ಹಾಲಪ್ಪ (1 ಎಕರೆ), ಸಿದ್ದಪ್ಪ (1 ಎಕರೆ),

ADVERTISEMENT

ಪಾಪನಾಯ್ಕ (1 ಎಕರೆ), ಭಂಗಿ ಹನುಮಂತಪ್ಪ (15 ಗುಂಟೆ), ಜಯಪ್ಪ (20 ಗುಂಟೆ), ಅಜ್ಜಪ್ಪ (20 ಗುಂಟೆ), ಮಲ್ಲೇಶ್‌ ನಾಯ್ಕ (1 ಎಕರೆ 20 ಗುಂಟೆ), ಸಕ್ರಾನಾಯ್ಕ (1 ಎಕರೆ), ರುದ್ರಾನಾಯ್ಕ (1 ಎಕರೆ), ಚಂದ್ರಪ್ಪ (1 ಎಕರೆ), ಯಶೋದಮ್ಮ  (1 ಎಕರೆ 29 ಗುಂಟೆ), ಹನುಮಂತಪ್ಪ (30 ಗುಂಟೆ) ಕೃಷ್ಣನಾಯ್ಕ (1 ಎಕರೆ) ರಾಮಾನಾಯ್ಕ (1ಎಕರೆ 10 ಗುಂಟೆ) ರೈತರು ಸಾಗುವಳಿ ಮಾಡುತ್ತಿದ್ದಾರೆ.

ಇಷ್ಟೊಂದು ರೈತ ಕುಟುಂಬಗಳಿಗೆ ಇದುವರೆಗೂ ಸಾಗುವಳಿ ಚೀಟಿ ಸಿಕ್ಕಿಲ್ಲ. ಆಗಾಗ ಕಂದಾಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಈ ರೈತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ ಎಂಬುದಾಗಿ ರೈತರು ದೂರುತ್ತಾರೆ.

1993ನೇ ಸಾಲಿನಲ್ಲಿ ಮತ್ತು 1999ನೇ ಸಾಲಿನಲ್ಲಿ ಬಗರ್‌ಹುಕುಂ ಸಕ್ರಮಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿದಾಗ ಮಾಹಿತಿ ಕೊರತೆ ಕಾರಣ ಈ ರೈತ ಕುಟುಂಬಗಳು ಅರ್ಜಿ ಸಲ್ಲಿಸಿಲ್ಲ. ಈಗ ರೈತರು ಮತ್ತಷ್ಟು ದುಗುಡಕ್ಕೆ ಒಳಗಾಗಿದ್ದಾರೆ.

ಸಣ್ಣ ರೈತರಿಗೆ ತೊಂದರೆ ಇಲ್ಲ
ಅರ್ಜಿ ಸಲ್ಲಿಸದ ರೈತರ ಭೂಮಿಯನ್ನು ಒತ್ತುವರಿ ಎಂದೇ ತೀರ್ಮಾನಿಸಲಾಗುತ್ತದೆ. 5 ಎಕರೆಗಿಂತ ಹೆಚ್ಚು ಭೂಮಿ ಸಾಗುವಳಿ ಮಾಡಿರುವ ರೈತರ ಪಟ್ಟಿಯನ್ನು ತಯಾರಿಸಲಾಗಿದೆ. ಸದ್ಯ ಅವರಿಗೆ ನೋಟಿಸ್‌ ನೀಡಲಾಗುವುದು. ಆದರೆ, ಸಣ್ಣ ರೈತರಿಗೆ ಯಾವುದೇ ತೊಂದರೆ ಮಾಡಿಲ್ಲ.

ಅವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ  ಕೈಗೊಳ್ಳಬೇಕಾದ ಕ್ರಮ ಹಾಗೂ ಅನುಸರಿಸಬೇಕಾಗಿರುವ ನಿಯಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೇಳಿ ವರದಿ ಸಲ್ಲಿಸಲಾಗಿದೆ. ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು.
–ಬಿ.ಟಿ.ಕುಮಾರಸ್ವಾಮಿ, ಉಪ  ವಿಭಾಗಾಧಿಕಾರಿ, ದಾವಣಗೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.