ADVERTISEMENT

ಐದು ಗಾಡಿ ಕುಂಬಳಕಾಯಿ ಖರೀದಿಸಿದ ಗ್ರಾಮ!

ಹೊನ್ನಾಳಿ ತಾಲ್ಲೂಕಿನ ಕುಂಬಳೂರಿನಲ್ಲಿ ಸಮಸ್ಯೆಗಳ ಸಾಮ್ರಾಜ್ಯ

ಚನ್ನೇಶ ಬಿ.ಇದರಮನಿ
Published 30 ಮೇ 2014, 8:31 IST
Last Updated 30 ಮೇ 2014, 8:31 IST

ಹಲವು ವರ್ಷಗಳಹಿಂದೆ ಒಮ್ಮೆ ಐದು ಗಾಡಿಗಳಲ್ಲಿ ಕುಂಬಳಕಾಯಿಗಳನ್ನು ತುಂಬಿಕೊಂಡು ಈ ಗ್ರಾಮಕ್ಕೆ ಮಾರಾಟಗಾರರು ಬಂದಿದ್ದರಂತೆ. ಅವುಗಳಲ್ಲಿ ಒಂದು ಕುಂಬಳಕಾಯಿಯೂ ಉಳಿಯದಂತೆ ಮಾರಾಟವಾದವಂತೆ. ಅಂದಿನಿಂದ ಈ ಗ್ರಾಮ ‘ಕುಂಬಳೂರು’ ಎಂದಾಗಿದೆ ಎಂಬುದು ಜನಪದ ಇತಿಹಾಸದಿಂದ ತಿಳಿಯುತ್ತದೆ.

ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದ ಹತ್ತಿರ ಇನ್ನೊಂದು ಕುಂಬಳೂರು ಇರುವುದರಿಂದ ಚಿನ್ಮೂಲಾದ್ರಿ ಬೆಟ್ಟದ ಶ್ರೇಣಿಯ ಗುಡ್ಡ ಪ್ರದೇಶದ ಪಕ್ಕದಲ್ಲಿ ಇರುವ ಈ ಗ್ರಾಮಕ್ಕೆ ಮಲೆಕುಂಬಳೂರು ಎನ್ನುವ ಹೆಸರು ರೂಢಿಯಲ್ಲಿದೆ.

ಹೊನ್ನಾಳಿಯಿಂದ ಪೂರ್ವಕ್ಕೆ ಕುಂದೂರು ಮಾರ್ಗವಾಗಿ 23ಕಿ.ಮೀ., ಹಾಗೂ ಬಸವಾಪಟ್ಟಣ ಮಾರ್ಗವಾಗಿ 28ಕಿ.ಮೀ. ದೂರದಲ್ಲಿದೆ. ನೀರಾವರಿಗೆ ಭದ್ರಾ ಜಲಾಶಯ ಮತ್ತು ಕೊಳವೆ ಬಾವಿಗಳು ಆಧಾರ. ಕುಡಿಯುವ ನೀರಿನ ಅವಶ್ಯಕತೆಯನ್ನೂ ಕೊಳವೆ ಬಾವಿಗಳೇ
ಪೂರೈಸುತ್ತವೆ.

ಕೃಷಿ ಗ್ರಾಮದ ಹೆಚ್ಚಿನ ಜನರ ಜೀವನಾಧಾರದ ಕಸುಬು. ಶೇ 90ರಷ್ಟು ರೈತರು ಬತ್ತ ಬೆಳೆಯುತ್ತಾರೆ. ಶೇ 10ರಷ್ಟು ರೈತರು ಅಡಿಕೆ, ತೆಂಗು, ಮೆಕ್ಕಜೋಳ, ರಾಗಿ, ಮೆಣಸಿನಕಾಯಿ, ದ್ವಿದಳ ಧಾನ್ಯ ಇತ್ಯಾದಿ ಬೆಳೆಯುತ್ತಾರೆ.

ಕೃಷಿ ಜತೆ ಹೈನುಗಾರಿಕೆ ಉಪ ಕಸುಬು ಗ್ರಾಮಸ್ಥರ ಆರ್ಥಿಕತೆಯ ಬೆನ್ನೆಲುಬು. ಪ್ರತಿ ದಿನ 1ಸಾವಿರ ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಇದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಎನ್‌.ದಿಳ್ಳೆಪ್ಪ.

ಸರ್ಕಾರದ ವಿವಿಧ ಯೋಜನೆಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುವ ಮೂಲಕ ಗ್ರಾಮಸ್ಥರು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ಗ್ರಾಮದ ಎಲ್ಲಾ ಜನಾಂಗದವರು ಪರಸ್ಪರ ಪ್ರೀತಿ–ವಿಶ್ವಾಸದಿಂದ ಬದುಕುತ್ತಿದ್ದಾರೆ. ವೈಷ್ಣವ, ಸಾಧು ವೀರಶೈವ, ಪಂಚಮಸಾಲಿ ವೀರಶೈವ, ಕುಂಚಿಟಿಗ, ಹಾಲುಮತ, ವಾಲ್ಮೀಕಿ, ಲಂಬಾಣಿ, ಹರಿಜನ, ಆದಿ ದ್ರಾವಿಡ, ಬೋವಿ, ದಾಸರು, ಮಡಿವಾಳರು, ಅಕ್ಕಸಾಲಿಗರು, ವಿಶ್ವಕರ್ಮ, ಕುಂಬಾರ, ಕಾಯಕದ ಜನರು ಸೇರಿದಂತೆ ಇತರರು ಇದ್ದಾರೆ. ಕುಂಬಳೂರು ಗ್ರಾಮ ಸುಮಾರು 1200ಕ್ಕೂ ಅಧಿಕ ಮನೆಗಳ 5,500ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ 3 ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅನುದಾನಿತ ಪ್ರೌಢಶಾಲೆ ಇವೆ.

14 ಸದಸ್ಯ ಬಲದ ಕುಂಬಳೂರು ಗ್ರಾಮ ಪಂಚಾಯ್ತಿಯಲ್ಲಿ ಕುಂಬಳೂರು ಗ್ರಾಮದ ಹತ್ತು ಜನ, ನೆಲಹೊನ್ನೆ ಗ್ರಾಮದ ನಾಲ್ವರು ಸದಸ್ಯರು ಇದ್ದಾರೆ. ಗ್ರಾಮದಲ್ಲಿ ‘ನರೇಗಾ’ ಅಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಂಬಳೂರು ಕೆ.ಹಾಲಪ್ಪ.

ಆರಾಧ್ಯ ದೈವ ಆಂಜನೇಯ ಸ್ವಾಮಿ
ಕುಂಬಳೂರು ಗ್ರಾಮದ ಆರಾಧ್ಯ ದೈವ ಆಂಜನೇಯ ಸ್ವಾಮಿ. ಇಲ್ಲಿನ ಆಂಜನೇಯ ಸ್ವಾಮಿಯನ್ನು ವ್ಯಾಸರಾಯ ಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇದೆ. ಫೆಬ್ರುವರಿ ತಿಂಗಳಲ್ಲಿ ಆಂಜನೇಯ ಸ್ವಾಮಿ ರಥೋತ್ಸವ  ಸುತ್ತ–ಮುತ್ತಲ ಹಲವು ಗ್ರಾಮಗಳ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳ, ರಾಜ್ಯದ ಅನೇಕ ಜಿಲ್ಲೆಗಳ ಭಕ್ತರ ಸಮ್ಮುಖದಲ್ಲಿ ನೆರವೇರುತ್ತದೆ.

ಹೆಳವನಕಟ್ಟೆ ಗಿರಿಯಮ್ಮನವರ ಸಂದೇಶದಂತೆ ಪ್ರತಿ ವರ್ಷ ಪಂಚಮಿಯಂದು ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದ ಹೆಳವನಕಟ್ಟೆ ಗಿರಿಯಮ್ಮನವರ ತಾಣದಲ್ಲಿ ಕುಂಬಳೂರು ಆಂಜನೇಯ ಸ್ವಾಮಿಯ ಕಾರ್ಣಿಕೋತ್ಸವ ನಡೆಯುತ್ತದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆ: ಕುಂಬಳೂರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ಯಗತ್ಯವಾಗಿ
ಬೇಕು. ಹೊತ್ತಲ್ಲದ ಹೊತ್ತಿನಲ್ಲಿ ಆರೋಗ್ಯ ಹದಗೆಟ್ಟರೆ ಬಡವರಿಗೆ ತೊಂದರೆ ಆಗುತ್ತದೆ. ಆದ್ದರಿಂದ, ತಕ್ಷಣ ಸಂಬಂಧಪಟ್ಟವರು ಇತ್ತ ಗಮನಹರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.