ADVERTISEMENT

ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿಯುವುದೇ?

ಒಂದೇ ಪಕ್ಷಕ್ಕೆ ಮಣೆ ಹಾಕದ ಮಂದಿ, ಮುಖ್ಯಮಂತ್ರಿಯನ್ನೇ ಸೋಲಿಸಿದ್ದ ಅಡಿಕೆ ನಾಡಿನ ಜನ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 12 ಏಪ್ರಿಲ್ 2018, 7:22 IST
Last Updated 12 ಏಪ್ರಿಲ್ 2018, 7:22 IST

ದಾವಣಗೆರೆ: ಮಧ್ಯ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ದಾವಣಗೆರೆ ಜಿಲ್ಲೆಯು ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ವಿವಿಧ ಸಮುದಾಯದ ಗುರುಪೀಠಗಳ ಪೀಠಾಧ್ಯಕ್ಷರ ನಿರ್ಣಯ, ಜಾತಿ ಲೆಕ್ಕಾಚಾರ ಹಾಗೂ ಅಭಿವೃದ್ಧಿ ಕಾಮಗಾರಿಗಳು ಕೂಡ ಅಭ್ಯರ್ಥಿಯ ಭವಿಷ್ಯವನ್ನು ನಿರ್ಣಯಿಸುತ್ತಾ ಬಂದಿವೆ.

ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಹಾಗೂ ನಿರಂತರವಾಗಿ ಗೆಲುವು ಸಾಧಿಸಿದ್ದ ಶಾಸಕರನ್ನೇ ಮತದಾರರು ಸೋಲಿಸಿ ಮತ್ತೊಂದು ಪಕ್ಷದ ಅಭ್ಯರ್ಥಿಗೆ ಗೆಲುವಿನ ರುಚಿ ಉಣಿಸಿದ ಹಲವು ಉದಾಹರಣೆಗಳು ಜಿಲ್ಲೆಯಲ್ಲಿ ಕಾಣಸಿಗುತ್ತವೆ.

1997ರ ಆಗಸ್ಟ್‌ 15ರಂದು ಅಸ್ತಿತ್ವಕ್ಕೆ ಬಂದ ದಾವಣಗೆರೆ ಜಿಲ್ಲೆಯಲ್ಲಿ 7 ತಾಲ್ಲೂಕು ಕೇಂದ್ರ ಹಾಗೂ 8 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ 6 ಸಾಮಾನ್ಯ ಕ್ಷೇತ್ರಗಳಾದರೆ, 2 ಮೀಸಲು (ಮಾಯಕೊಂಡ–ಎಸ್‌ಸಿ. ಜಗಳೂರು–ಎಸ್‌ಟಿ) ಕ್ಷೇತ್ರಗಳು.

ADVERTISEMENT

1952ರಿಂದ 2013ರತನಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆಯೇ ಪ್ರಬಲ ಪೈಪೋಟಿ ನಡೆಯುತ್ತಾ ಬಂದಿದೆ. ಇದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿರುವುದನ್ನು ಅಂಕಿಅಂಶಗಳು ಹೇಳುತ್ತವೆ.

1952ರಿಂದ 2004ರ ತನಕ ದಾವಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 13 ಚುನಾವಣೆಗಳು ನಡೆದವು. ಇದರಲ್ಲಿ ಕಾಂಗ್ರೆಸ್‌ 9 ಬಾರಿ. ಸಿಪಿಐ 3, ಪಿಎಸ್‌ಪಿ ಒಂದು ಬಾರಿ ಗೆಲುವು ಸಾಧಿಸಿವೆ.

ಕ್ಷೇತ್ರ ವಿಂಗಡಣೆ: ‘2008ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರವು ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣ ಎಂಬ ಎರಡು ಕ್ಷೇತ್ರಗಳಾಗಿ ವಿಂಗಡಣೆ ಆಯಿತು. ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್‌.ಎ. ರವೀಂದ್ರನಾಥ, ಜೆಡಿಎಸ್‌ನಿಂದ ಬಿ.ಎಂ.ಸತೀಶ್‌ ಸ್ಪರ್ಧಿಸುತ್ತಾರೆ. ‘ಬಿ’ ಫಾರಂ ಸಮಸ್ಯೆಯಿಂದಾಗಿ ಕಾಂಗ್ರೆಸ್‌ನಿಂದ ಯಾರೂ ಸ್ಪರ್ಧಿಸಲಿಲ್ಲ. ಇದರ ಲಾಭ ಪಡೆದ ರವೀಂದ್ರನಾಥ ಬಹುಮತದಿಂದ ಆಯ್ಕೆಯಾದರು. ದಕ್ಷಿಣ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯ ಯಶವಂತರಾವ್‌ ವಿರುದ್ಧ ಜಯ ಗಳಿಸಿದರು’ ಎಂದು ಹಿರಿಯ ಪತ್ರಕರ್ತ ನಜೀರ್‌ ಮಾಹಿತಿ ನೀಡುತ್ತಾರೆ.

ಈ ಬಾರಿಯ 2018ರ ಚುನಾವಣೆಯಲ್ಲಿ ಉತ್ತರ ಕ್ಷೇತ್ರಕ್ಕೆ ಎಸ್‌.ಎ. ರವೀಂದ್ರನಾಥ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ಘೋಷಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾಗಬೇಕಿದೆ. ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಇನ್ನೂ ಘೋಷಣೆಯಾಗಿಲ್ಲ.

ಹರಿಹರ–ಕಾಂಗ್ರೆಸ್‌ಗೆ 8 ಬಾರಿ ಗೆಲುವು:  ಹರಿಹರ ಕ್ಷೇತ್ರದಲ್ಲಿ 1952ರಿಂದ 2013ರತನಕ ನಡೆದ 15 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್‌, ಪಕ್ಷೇತರ– 2, ಪಿಎಸ್‌ಪಿ, ಬಿಜೆಪಿ ಹಾಗೂ ಜೆಡಿಎಸ್‌ ತಲಾ ಒಂದೊಂದು ಸ್ಥಾನ ಪಡೆದಿವೆ. ಈ ಬಾರಿ ಜೆಡಿಎಸ್‌ನ ಹಾಲಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಬಿಜೆಪಿಯಿಂದ ಹರೀಶ್‌, ಕಾಂಗ್ರೆಸ್‌ನಿಂದ ರಾಮಪ್ಪ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳು.

ಕಾಂಗ್ರೆಸ್‌ಗೆ 5 ಬಾರಿ ಗೆಲುವು: ಚನ್ನಗಿರಿಯಲ್ಲಿ 2013ರತನಕ ನಡೆದ 13 ಚುನಾವಣೆಗಳಲ್ಲಿ ಕಾಂಗ್ರೆಸ್‌ 5, ಜನತಾ ಪಕ್ಷ 3, ಕೆಎಂಪಿಪಿ, ಎಸ್‌ಎಸ್‌ಪಿ, ಜನತಾ ದಳ, ಜೆಡಿಎಸ್‌, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದೊಂದು ಬಾರಿ ಗೆಲುವು ಸಾಧಿಸಿವೆ. 1957ರಲ್ಲಿ ಕುಂದೂರು ರುದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜನತಾ ಪಕ್ಷದಿಂದ ಜೆ.ಎಚ್‌.ಪಟೇಲ್‌ ಅವರು 1978, 1983, 1985ರ ಚುನಾವಣೆಗಳಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌.ಜಿ.ಹಾಲಪ್ಪ ಅವರ ವಿರುದ್ಧ ಅವರು ಸೋಲು ಅನುಭವಿಸಿದರು. ಪುನಃ 1994ರಲ್ಲಿ ನಡೆದ ಚುನಾವಣೆಯಲ್ಲಿ ಹಾಲಪ್ಪ ಅವರ ವಿರುದ್ಧ ಪಟೇಲರು ಸ್ಪರ್ಧಿಸಿ, ಗೆದ್ದು ಮುಖ್ಯಮಂತ್ರಿ ಆದರು.

ಈ ಚುನಾವಣೆಯಲ್ಲಿ ಹೊದಿಗೆರೆ ರಮೇಶ್‌ ಅವರಿಗೆ ಜೆಡಿಎಸ್‌ನಿಂದ ಟಿಕೆಟ್‌ ಘೋಷಣೆಯಾಗಿದೆ. ಹಾಲಿ ಶಾಸಕ ವಡ್ನಾಳ್‌ ರಾಜಣ್ಣ ಅವರೇ ಈ ಬಾರಿಯೂ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಸಾಧನ ಸಮಾವೇಶದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದರು. ಬಿಜೆಪಿಯಿಂದ ಮಾಡಾಳ್‌ ವಿರೂಪಾಕ್ಷಪ್ಪ, ಜೆಡಿಯುನಿಂದ ಮಹಿಮ ಪಟೇಲ್‌ ಪ್ರಮುಖ ಆಕಾಂಕ್ಷಿಗಳು.

ಕಾಂಗ್ರೆಸ್‌ ಮೇಲುಗೈ: ಹರಪನಹಳ್ಳಿಯಲ್ಲಿ ಕೂಡ ಇದುವರೆಗೂ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸುತ್ತಾ ಬಂದಿದೆ. ಕಾಂಗ್ರೆಸ್‌ 10, ಪಿಎಸ್‌ಪಿ, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದೊಂದು ಬಾರಿ ಗೆಲುವು ಸಾಧಿಸಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಹರಪನಹಳ್ಳಿ ಕ್ಷೇತ್ರವು 2008ರ ನಂತರ ಸಾಮಾನ್ಯ ಕ್ಷೇತ್ರವಾಗಿದೆ. ಈ ಬಾರಿ ಬಿಜೆಪಿಯಿಂದ ಜಿ.ಕರುಣಾಕರ ರೆಡ್ಡಿ, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎಂ.ಪಿ.ರವೀಂದ್ರ ಪ್ರಬಲ ಆಕಾಂಕ್ಷಿಗಳು.

ಕಾಂಗ್ರೆಸ್‌ಗೆ 7 ಬಾರಿ ಜಯ: ಹೊನ್ನಾಳಿ ಕ್ಷೇತ್ರದಲ್ಲಿ ಇಲ್ಲಿಯ ತನಕ ನಡೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 7 ಬಾರಿ ಜಯ ಪಡೆದಿದೆ. ಬಿಜೆಪಿ 2, ಪಕ್ಷೇತರ 2, ಪಿಎಸ್‌ಪಿ, ಜನತಾ ಪಕ್ಷ ಮತ್ತು ಕೆಸಿಪಿ ತಲಾ ಒಂದೊಂದು ಬಾರಿ ಗೆದ್ದಿವೆ. ಈ ಬಾರಿಯೂ ಹಾಲಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ ಅವರ ನಡುವೆ ಪ್ರಬಲ ಪೈಪೋಟಿ ಇದೆ. ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಕೂಡ ಹೆಚ್ಚಿದೆ.

ಬಿಜೆಪಿ ಅಭ್ಯರ್ಥಿಗೆ ಹ್ಯಾಟ್ರಿಕ್ ಗೆಲುವು: ಮಾಯಕೊಂಡ ಕ್ಷೇತ್ರವು 2004ರ ಚುನಾವಣೆಯವರೆಗೂ ಸಾಮಾನ್ಯ ಕ್ಷೇತ್ರವಾಗಿತ್ತು. 2008ರ ಚುನಾವಣೆಯಿಂದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿ 4 ಬಾರಿ ಬಿಜೆಪಿ ಹಾಗೂ 3 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿವೆ. ‘1994, 1999 ಮತ್ತು 2004ರಲ್ಲಿ ಎಸ್‌.ಎ. ರವೀಂದ್ರನಾಥ ಬಿಜೆಪಿಯಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಎಂ. ಬಸವರಾಜನಾಯ್ಕ ಆಯ್ಕೆಗೊಂಡರು. ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2013 ರಲ್ಲಿ ನಡೆದ ಚುನಾವಣೆಯಲ್ಲಿ ಕೆ. ಶಿವಮೂರ್ತಿ ಛಿದ್ರಗೊಳಿಸಿ, ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಖಾತೆ ಮತ್ತೆ ತೆರೆದರು. ಜಗಳೂರಿನಲ್ಲಿ ಇದುವರೆಗೆ ನಡೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 8, ಬಿಜೆಪಿ 2, ಕೆಎಂಪಿಪಿ, ಕೆಸಿಪಿ, ಪಕ್ಷೇತರ, ಜನತಾಪಕ್ಷ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.