ADVERTISEMENT

ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 10:01 IST
Last Updated 9 ಮೇ 2018, 10:01 IST

ಜಗಳೂರು: ಕ್ಷೇತ್ರದಲ್ಲಿ ಈ ಬಾರಿ ಮೇಲ್ನೋಟಕ್ಕೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಂತೆ ಕಂಡರೂ ವಾಸ್ತವದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಪೈಪೋಟಿ ಇದೆ.

ಕಾಂಗ್ರೆಸ್‌ನಿಂದ ಶಾಸಕ ಎಚ್‌.ಪಿ. ರಾಜೇಶ್‌ ಮರು ಆಯ್ಕೆ ಬಯಸಿದ್ದಾರೆ. ಕಳೆದ ಸಲ ಕೆಜೆಪಿಯಿಂದ ಕಣಕ್ಕಿಳಿದಿದ್ದ ಎಸ್‌.ವಿ. ರಾಮಚಂದ್ರ ಈಗ ಬಿಜೆಪಿ ಹುರಿಯಾಳು. ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ಪುಷ್ಪಾ ಲಕ್ಷ್ಮಣಸ್ವಾಮಿ ಹಾಗೂ ಜೆಡಿಎಸ್‌ನಿಂದ ಬಿ. ದೇವೇಂದ್ರಪ್ಪ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾರರನ್ನು ಸೆಳೆಯಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದ್ದಾರೆ. ಬಿಜೆಪಿ ಪರವಾಗಿ ಯಡಿಯೂರಪ್ಪ, ಶ್ರೀರಾಮುಲು, ಭರ್ಜರಿ ರೋಡ್‌ ಷೋ ನಡೆಸಿದ್ದರೆ, ಕುಮಾರಸ್ವಾಮಿ ಸಮಾವೇಶ ನಡೆಸಿ ಹೋಗಿದ್ದಾರೆ. ಸತೀಶ ಜಾರಕಿಹೊಳಿ ಹೊರತುಪಡಿಸಿ ಕಾಂಗ್ರೆಸ್‌ನಿಂದ ಈವರೆಗೆ ಯಾವುದೇ ನಾಯಕರು ಕ್ಷೇತ್ರದತ್ತ ಧಾವಿಸಿಲ್ಲ.

ADVERTISEMENT

ಟಿಕೆಟ್‌ ಹಂಚಿಕೆಗೂ ಮೊದಲು ಕ್ಷೇತ್ರದಲ್ಲಿ ಬೆವರು ಹರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್‌ ಘೋಷಣೆ ನಂತರ ಇತ್ತ ಸುಳಿದಿಲ್ಲ. ಆರಂಭದಲ್ಲಿ ಟಿಕೆಟ್‌ ಕೈತಪ್ಪಿ ತೀವ್ರ ಮುಜುಗರ ಅನುಭವಿಸಿದ ಶಾಸಕ ಎಚ್‌.ಪಿ. ರಾಜೇಶ್‌ ಕೊನೆಗೂ ‘ಬಿ’ ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್‌ ಘೋಷಣೆಯಾದರೂ ‘ಬಿ’ ಫಾರಂ ಸಿಗದೆ ಕುಪಿತರಾದ ಪುಷ್ಪಾ ಲಕ್ಷ್ಮಣಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಜಾತಿ ಪ್ರಮಾಣಪತ್ರ ವಿವಾದ ಪ್ರಹಸನದಿಂದ ಹೊರಬಂದ ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ, ಆತ್ಮವಿಶ್ವಾಸದಿಂದ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಇದೇ ಮೊದಲ ಬಾರಿ ಸ್ಥಳೀಯ ಮ್ಯಾಸನಾಯಕ ಸಮಾಜದವರನ್ನು ಕಣಕ್ಕಿಳಿಸಿರುವ ಜೆಡಿಎಸ್ ಅಭ್ಯರ್ಥಿ ಬಿ. ದೇವೇಂದ್ರಪ್ಪ ಎಲ್ಲರಿಗಿಂತ ಮೊದಲೇ ಬಿರುಸಿನ ಪ್ರಚಾರದಿಂದ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಮುಖ ಜಾತಿಗಳ ಸಮಾವೇಶಗಳನ್ನು ಸಂಘಟಿಸಿ ಮತ ಸೆಳೆಯುತ್ತಿವೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಸರ್ಕಾರದ ಜನಪರ ಯೋಜನೆಗಳು ಈ ಚುನಾವಣೆಯಲ್ಲಿ ಕೈ ಹಿಡಿಯಲಿವೆ ಎನ್ನುವ ವಿಶ್ವಾಸ ಕಾಂಗ್ರೆಸ್‌ ಪಕ್ಷದ್ದು. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ, ಉದ್ಯೋಗಖಾತ್ರಿ ಯೋಜನೆಯಲ್ಲಿ ಅವ್ಯವಹಾರ, ಸಾಲುಸಾಲು ಕ್ರಿಮಿನಲ್‌ ಮೊಕದ್ದಮೆಗಳು, ಸಣ್ಣ ನೀರಾವರಿ ಇಲಾಖೆಯ ತುಂಡು ಗುತ್ತಿಗೆಯಡಿ ವ್ಯಾಪಕ ಭ್ರಷ್ಟಾಚಾರದಿಂದ ಮತದಾರರು ಬೇಸತ್ತಿದ್ದಾರೆ.

ಈ ಹಿಂದೆ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳು ಮತದಾರರನ್ನು ಸೆಳೆಯಲಿವೆ ಎನ್ನುವುದು ಬಿಜೆಪಿಯ ನಿರೀಕ್ಷೆಯಾಗಿದೆ. ಪರಿಶಿಷ್ಟ ಜಾತಿಯ ಉಪ ಜಾತಿಗಳು, ನಾಯಕ ಹಾಗೂ ಲಿಂಗಾಯತ ಮತಗಳು ಹೆಚ್ಚಿವೆ. ಅಲ್ಪಸಂಖ್ಯಾತರು ಮತ್ತು ಮ್ಯಾಸನಾಯಕರ ಕಾಂಗ್ರೆಸ್‌ನ ಮತಬುಟ್ಟಿಗೆ ಈ ಬಾರಿ ಜೆಡಿಎಸ್ ಕೈ ಹಾಕಿದೆ. ತನ್ನ ಮತಬ್ಯಾಂಕ್‌ ಉಳಿಸಿಕೊಳ್ಳಲು ಕಾಂಗ್ರೆಸ್‌ ಯಾವ ತಂತ್ರ ಹೂಡಲಿದೆ ಎನ್ನುವುದು ನಿರ್ಣಾಯಕವಾಗಲಿದೆ.

ಜಗಳೂರು ಕ್ಷೇತ್ರ

ಪುರುಷರು 93,724

ಮಹಿಳೆಯರು 96,319

ಒಟ್ಟು 1,90,053

ಹೊಸ ಮತದಾರರು 2203

2013ರ ಮತ ವಿವರ

ಎಚ್‌.ಪಿ. ರಾಜೇಶ್‌ (ಕಾಂಗ್ರೆಸ್‌) 77,805

ಎಸ್‌.ವಿ. ರಾಮಚಂದ್ರ(ಕೆಜೆಪಿ) 40,915

ಡಾ. ರಂಗಯ್ಯ (ಜೆಡಿಎಸ್‌) 4325

–ಡಿ. ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.