ADVERTISEMENT

ಕಾಮಗಾರಿಗಳಲ್ಲಿ ಅವ್ಯವಹಾರ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:28 IST
Last Updated 21 ಸೆಪ್ಟೆಂಬರ್ 2013, 8:28 IST

ಚನ್ನಗಿರಿ: ತಾಲ್ಲೂಕಿನ ಸಂತೇಬೆನ್ನೂರು ಹಾಗೂ ವಿವಿಧೆಡೆ ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಪ್ರತಿಪಕ್ಷ  ಸದಸ್ಯರಾದ ಜೆ.ರಂಗನಾಥ್‌, ಶಂಕರ್‌ಪಾಟೀಲ್‌ ಆರೋಪಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ಆರೋಪಿಸಿದರು.

ಸಂತೇಬೆನ್ನೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೊನಿಗಳಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು, ` 27 ಲಕ್ಷ ಗೋಲ್‌ಮಾಲ್‌ ಆಗಿದೆ. ಹಿರೇಕೋಗಲೂರು ಗ್ರಾಮದಿಂದ ಸೋಮಲಾಪುರ ಗ್ರಾಮದವರೆಗೆ ರಸ್ತೆ ಬದಿಯ ಗಿಡಗಂಟೆಗಳನ್ನು ತೆಗೆದು, ಚರಂಡಿ ನಿರ್ಮಿಸಲು ` 6.80 ಲಕ್ಷ ಬಿಲ್‌ನ್ನು ತೆಗೆದುಕೊಂಡಿದ್ದು, ಆದರೆ ಇಲ್ಲಿ ಯಾವುದೇ ಕಾಮಗಾರಿಯೇ ನಡೆದಿರುವುದಿಲ್ಲ.

ಕಾರಿಗನೂರು ಗ್ರಾಮದಲ್ಲಿ ` 17 ಲಕ್ಷ ಅವ್ಯವಹಾರವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಮುಂದಿನ ಸಭೆಯಲ್ಲಿ ಈ ಇಲಾಖೆಯ ಅಧಿಕಾರಿ ಸಭೆಗೆ ಹಾಜರಾಗಬೇಕೆಂದು ಈ ಸದಸ್ಯರು ಒತ್ತಾಯಪಡಿಸಿದರು. ತಾಲ್ಲೂಕಿನಲ್ಲಿ 32,290 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಇದರಲ್ಲಿ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿದೆ. ಇನ್ನು
ಜಂಟಿ ಸಮೀಕ್ಷೆ ಕಾರ್ಯ ನಡೆದಿದ್ದು, ಹಾನಿಯ ಪ್ರಮಾಣ ಹೆಚ್ಚಾಗಲಿದೆ. ಅದೇ ರೀತಿ ತಾಲ್ಲೂಕಿನ 10,262 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಬಿದ್ದಿದ್ದು, ` 98 ಕೋಟಿ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ

ಸಲ್ಲಿಸಲಾಗಿದೆ. ಕೊಳೆರೋಗವನ್ನು ನಿಯಂತ್ರಿಸಲು ಬೋರಾನ್‌ ದ್ರಾವಣವನ್ನು ಅಡಿಕೆ ಬೆಳೆಗಾರರು ಸಿಂಪಡಿಸಬೇಕು. ಕೆಳಗೆ ಬಿದ್ದ ಅಡಿಕೆ ಕಾಯಿಗಳನ್ನು ತೋಟದಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು ಎಂದು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಭೆಗೆ ವರದಿ ನೀಡಿದರು.

ತಾಲ್ಲೂಕಿನಲ್ಲಿ 46 ಉರ್ದು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಕಡ್ಡಾಯವಾಗಿ ಆರಂಭಿಸಬೇಕು. ಆದರೆ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೆ ಆರಂಭಿಸಿಲ್ಲ.ಇದರಿಂದ ಅಲ್ಪಸಂಖ್ಯಾತ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್‌ ಸದಸ್ಯ ಉಸ್ಮಾನ್‌ ಶರೀಫ್‌ ಒತ್ತಾಯಪಡಿಸಿದರು.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೊನಿಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ `  38 ಕೋಟಿ ಅನುದಾನ ನೀರಾವರಿ ನಿಗಮದವರಿಗೆ ಬಿಡುಗಡೆಯಾಗಿತ್ತು. ಆದರೆ ಕಾಂಗ್ರೆಸ್‌
ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಯಾ ಭಾಗದ ಶಾಸಕರು ಈ ಅನುದಾನವನ್ನು ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದು, ಇದರಿಂದ
ತಾಲ್ಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರಾದ ಕೆ.ಜಿ. ಮರುಳಸಿದ್ದಪ್ಪ, ಗಣೇಶ್‌ನಾಯ ಕಾಂಗ್ರೆಸ್‌ ಜನಪ್ರತಿನಿಧಿಗಳ ನಿಲುವನ್ನು ಟೀಕಿಸಿದರು. ಉಪಾಧ್ಯಕ್ಷೆ ಆರ್‌. ಲಲಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಿ. ಶಿವಕುಮಾರ್‌, ಇಒ ಎಸ್‌.ಬಿ. ಶಿವಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT