ADVERTISEMENT

ಕಾರ್ಮಿಕರಿಗೆ ವರವಾದ ಅಡಿಕೆ ಕೊಯ್ಲು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:48 IST
Last Updated 12 ಡಿಸೆಂಬರ್ 2013, 8:48 IST
ಬಸವಾಪಟ್ಟಣದಲ್ಲಿ ಅಡಿಕೆ ಸುಲಿಯುವುದರಲ್ಲಿ ನಿರತರಾಗಿದ್ದ ಮಹಿಳೆಯರು.
ಬಸವಾಪಟ್ಟಣದಲ್ಲಿ ಅಡಿಕೆ ಸುಲಿಯುವುದರಲ್ಲಿ ನಿರತರಾಗಿದ್ದ ಮಹಿಳೆಯರು.   

ಬಸವಾಪಟ್ಟಣ: ಈ ಬಾರಿ ಅಡಿಕೆ ಬೆಳೆದ ರೈತರಿಗೆ ಬಂಪರ್‌ ಬೆಲೆ ತಂದುಕೊಟ್ಟ ಅಡಿಕೆ, ಮಹಿಳಾ ಕೂಲಿಕಾರರಿಗೂ ಬಂಪರ್‌ ಲಾಭ ತಂದುಕೊಟ್ಟಿದೆ. ಆಗಸ್ಟ್‌ ತಿಂಗಳಿನಿಂದ ಆರಂಭವಾದ ಅಡಿಕೆ ಕೊಯ್ಲು, ಡಿಸೆಂಬರ್‌ವರೆಗೆ ಐದು ತಿಂಗಳಕಾಲ ನಿರಂತರವಾಗಿ ಅಡಿಕೆ ಸುಲಿಯುವ ಮಹಿಳೆಯರಿಗೆ ಕೂಲಿ ಕೆಲಸ ಒದಗಿಸಿ ಅವರ ನಿರುದ್ಯೋಗ ದೂರಮಾಡಿದೆ.

ಒಂದು ಸೀಮೆಎಣ್ಣೆ ಡಬ್ಬದ ಗಾತ್ರದಲ್ಲಿ ಅಡಿಕೆ ಸುಲಿದರೆ ₨ 80ಕೂಲಿ. ದಿನಕ್ಕೆ ಕನಿಷ್ಠ 5 ಡಬ್ಬ ಅಡಿಕೆ ಸುಲಿಯುವ ಮಹಿಳೆಯರು ಸುಮಾರು ₨ 400 ಗಳಿಸುತ್ತಾರೆ. ಮಳೆಗೆ ನೆನೆಯದೇ, ಬಿಸಿಲಿಗೆ ಬಾಡದೇ ನೆರಳಿನಲ್ಲಿ ಕುಳಿತು ಮಾಡುವ ಈ ಉದ್ಯೋಗ ಮಹಿಳೆಯರ ಪಾಲಿಗಂತೂ ಸುಲಭವಾಗಿ ಹಣ ತರುವ ಕಸುಬು.

ಆದರೂ ಅವರಿಗೆ ಶ್ರಮ ಇರುತ್ತದೆ. ಕೆಲ ಅಡಿಕೆ ಬೆಳೆಗಾರರು ಮಹಿಳಾ ಕೂಲಿಕಾರರಿಗೆ ಊಟ ತಿಂಡಿಯ ಸೌಲಭ್ಯವನ್ನೂ ಒದಗಿಸುತ್ತಾರೆ. ಮುಂಜಾನೆ 6ರಿಂದ ರಾತ್ರಿ 8ರವರೆಗೆ    ಕಾಯಕದಲ್ಲಿ ತೊಡಗುವ ಮಹಿಳೆಯರಿಗೆ ಹಂಗಾಮಿನಲ್ಲಿ ಸರಾಸರಿ ₨ 30ರಿಂದ 40 ಸಾವಿರ ಗಳಿಕೆಗೆ ದಾರಿ ಮಾಡಿಕೊಟ್ಟಿದೆ.

ಈ ಕೆಲಸಕ್ಕಾಗಿ ಇತರ ಹಳ್ಳಿಗಳಿಗೂ ಮಹಿಳೆಯರು ದಿನನಿತ್ಯ ಹೋಗುತ್ತಿರುವುದು ಕಂಡು ಬರುತ್ತಿದೆ. ಈಗ ಅಡಿಕೆ ಸುಲಿಯಲು ಯಂತ್ರಗಳು ಬಂದಿವೆ. ಆದರೆ, ಅವು ಅಷ್ಟೊಂದು ಪರಿಣಾಮಕಾರಿ ಆಗಿಲ್ಲ. ಉತ್ತಮ ಯಂತ್ರಗಳು ಬಂದರೆ ನಮ್ಮ ಕೂಲಿ ಕೆಲಸಕ್ಕೂ ಸಂಚಕಾರ ಬರುವ ದಿನಗಳು ದೂರವಿಲ್ಲ ಎನ್ನುತ್ತಾರೆ ಮಹಿಳೆಯರು.

ಕೆಲ ಪುರುಷರೂ ಈ ಉದ್ಯೋಗದಲ್ಲಿ ತೊಡಗಿರುವುದರಿಂದ ಇತರ ಕೃಷಿ ಕಾರ್ಯಗಳಿಗೆ ಕೂಲಿಕಾರರು ದೊರೆಯದಂತಾಗಿದೆ. ಇದರಿಂದ ಪ್ರತಿದಿನದ ಕೂಲಿಯ ದರ ₨ 300ರಿಂದ ₨ 400ರವರೆಗೆ ಏರಿಕೆ ಆಗಿದೆ ಎನ್ನತ್ತಾರೆ ರೈತರು. ಆದರೆ, ಕೆಲ ಮಹಿಳೆಯರು
ಹಣದ ಆಸೆಗೆ ಬಲಿಯಾಗಿ, ಓದುವ ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು, ಆ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ.
-ಎನ್‌.ವಿ.ರಮೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT