ಸಂಗೀತಗಾರರ `ಸ್ವರ'ದ ನಿನಾದ ಸದಾ ಕೇಳಿ ಬರುತ್ತಿದ್ದುದರಿಂದಾಗಿ `ಸ್ವರದೂರು' ಎಂದಿದ್ದುದು ಕ್ರಮೇಣವಾಗಿ `ಸೊರಟೂರು' ಆಗಿದೆ ಎಂಬುದು ಗ್ರಾಮದ ಬಗೆಗಿರುವ ಇತಿಹಾಸದಿಂದ ತಿಳಿದುಬರುತ್ತದೆ.
ಸೊರಟೂರಿನ ಮೂಲ ಜನರು ಗದಗ ತಾಲ್ಲೂಕಿನ ಸೊರಟೂರು ಗ್ರಾಮದಿಂದ ಬಂದವರಾಗಿರುವ ಕಾರಣ ಈ ಗ್ರಾಮಕ್ಕೂ ಸೊರಟೂರು ಎಂಬ ಹೆಸರು ಬಂದಿರಬಹುದು ಎನ್ನಲಾಗುತ್ತದೆ.
ಹೆಳವ ಜನಾಂಗದವರ ಉಲ್ಲೇಖದ ಪ್ರಕಾರ ಇಲ್ಲಿನ ಜನರು ಕೆಲ ಸಮಯದವರೆಗೆ ಸಮೀಪದಲ್ಲೇ ಇರುವ ಬೂದಿಹಾಳು ಬೇಚಾರು ಗ್ರಾಮದಲ್ಲಿ ವಾಸ ಮಾಡಿ, ನಂತರ ಜಾಡರು ವಾಸವಾಗಿದ್ದ ಸೊರಟರು ಗ್ರಾಮಕ್ಕೆ ಬಂದಿದ್ದಾರೆ ಎಂದು ತಿಳಿದುಬರುತ್ತದೆ. ಊರಲ್ಲಿ ಕೆಳಪಾಲು ಹಾಗೂ ಮೇಲ್ಪಾಲುಗಳೆಂಬ ಎರಡು ಭಾಗಗಳಿವೆ. ಕೆಳಪಾಲಿನ ಜನರು ಕೆಳಭಾಗದಲ್ಲೂ, ಮೇಲ್ಪಾಲಿನ ಜನರು ಮೇಲ್ಭಾಗದಲ್ಲೂ ಶವಸಂಸ್ಕಾರ ಮಾಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಎರಡೂ ಭಾಗಗಳಲ್ಲಿ ಒಂದೊಂದು ಕೋಟೆ ಇದೆ. ಕೆಳಭಾಗವನ್ನು ಜಾಡರು, ಮೇಲ್ಭಾಗವನ್ನು ವೀರಶೈವರು ಆಳಿದ್ದಾರೆ ಎಂಬುದು ಇತಿಹಾಸದ ಪುಟಗಳಲ್ಲಿದೆ.
ಹೊನ್ನಾಳಿಯಿಂದ ನೈಋತ್ಯ ದಿಕ್ಕಿಗೆ ಸುಮಾರು 7 ಕಿ.ಮೀ. ದೂರದಲ್ಲಿ ಇರುವ ಸೊರಟೂರು ಗ್ರಾಮ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಎಚ್.ಕಡದಕಟ್ಟೆ ಗ್ರಾಮದಿಂದ 1 ಕಿ.ಮೀ. ದೂರದಲ್ಲಿದೆ. ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಗ್ರಾಮದ ಜನರಿಗೆ ಕೊಳವೆ ಬಾವಿಗಳೇ ಆಸರೆ.
ಕೃಷಿ ಗ್ರಾಮದ ಹೆಚ್ಚಿನ ಜನರ ಜೀವನಾಧಾರದ ಕಸುಬು. ಶೇ 90ರಷ್ಟು ರೈತರು ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಯುತ್ತಾರೆ. ಶೇ 10ರಷ್ಟು ರೈತರು ತರಕಾರಿ, ಅಡಿಕೆ, ತೆಂಗು ಇತರ ಫಸಲು ಬೆಳೆಯುತ್ತಾರೆ.
ಕೃಷಿ ಜತೆ ಹೈನುಗಾರಿಕೆ ಉಪಕಸುಬು ಗ್ರಾಮಸ್ಥರ ಆರ್ಥಿಕತೆಯ ಬೆನ್ನೆಲುಬು. ಪ್ರತಿದಿನ 2,000 ಲೀಟರ್ ಹಾಲು ಸಂಗ್ರಹವಾಗುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ಮಲ್ಲಿಕಾರ್ಜುನ್ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸರ್ಕಾರದ ಹಲವಾರು ಯೋಜನೆಗಳನ್ನು ಗ್ರಾಮದ ಜನರು ಚಾಣಾಕ್ಷತನದಿಂದ ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿದ್ದಾರೆ.
ಗ್ರಾಮದ ಎಲ್ಲಾ ಜನಾಂಗದವರು ಪರಸ್ಪರ ಪ್ರೀತಿ-ಪ್ರೇಮದಿಂದ ಬದುಕುತ್ತಿದ್ದಾರೆ. ಸಾಧು ವೀರಶೈವ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು, ಕುರುಬರು, ವಾಲ್ಮೀಕಿ ನಾಯಕರು, ಕ್ಷತ್ರಿಯ, ದೇವಾಂಗ, ಮರಾಠಾ, ವಿಶ್ವಕರ್ಮ, ಮಡಿವಾಳ, ಪರಿಶಿಷ್ಟ ಜಾತಿ, ಪಂಗಡ ಮತ್ತು 3ಮುಸ್ಲಿಂ ಸಮುದಾಯ ಸೇರಿದಂತೆ ಸೊರಟೂರು ಗ್ರಾಮ ಸುಮಾರು 1,300 ಮನೆಗಳ 6,000 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ 3 ಅಂಗನವಾಡಿ ಕೇಂದ್ರಗಳು, ಒಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಇವೆ.
10 ಸದಸ್ಯ ಬಲದ ಗ್ರಾಮ ಪಂಚಾಯ್ತಿಯಲ್ಲಿ ಸೊರಟೂರು ಗ್ರಾಮದ 9 ಮತ್ತು ತುಗ್ಗಲಹಳ್ಳಿ ಗ್ರಾಮದ ಒಬ್ಬ ಸದಸ್ಯರು ಇದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಬಾಕ್ಸ್ ಚರಂಡಿ, ಕಾಗೆಹಳ್ಳಕ್ಕೆ ಪ್ರವಾಹ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿ.ಶಶಿಕಲಾ ತಿರುಮಲೇಶ್ ಹೇಳುತ್ತಾರೆ.
ಆರಾಧ್ಯ ದೈವ ಆಂಜನೇಯ ಸ್ವಾಮಿ
ಸೊರಟೂರು ಗ್ರಾಮದ ಆರಾಧ್ಯ ದೈವ ಆಂಜನೇಯ ಸ್ವಾಮಿ. ದವನದ ಹುಣ್ಣಿಮೆಯಂದು ಆಂಜನೇಯ ಸ್ವಾಮಿ ರಥೋತ್ಸವ ಸುತ್ತ-ಮುತ್ತಲ ಹಲವಾರು ಗ್ರಾಮಗಳ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ.
ಜಾನಪದ ಕಲೆ
ಗ್ರಾಮದ ಬೀರಲಿಂಗೇಶ್ವರ ಯುವಕರ ಸಂಘದ ಕಲಾವಿದರು ಡೊಳ್ಳು ಕುಣಿತದಲ್ಲಿ ನಿಷ್ಣಾತರು. ರಾಮಾಂಜನೇಯ ಭಜನಾ ಮಂಡಳಿ ಕಲಾವಿದರು ಕಲೆಯ ಪ್ರದರ್ಶನದ ಮೂಲಕ ಗ್ರಾಮದ ಜಾನಪದ ಶ್ರೀಮಂತಿಕೆಯನ್ನು ನಾಡಿಗೆ ಪರಿಚಯಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ
ಗ್ರಾಮದ ಒಂದೆರಡು ರಸ್ತೆಗಳು ಮಾತ್ರ ಸಿಮೆಂಟ್ ರಸ್ತೆಗಳಾಗಿ ಪರಿವರ್ತನೆಗೊಂಡಿವೆ. ಉತ್ತಮ ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿಗಳು ಗ್ರಾಮಕ್ಕೆ ಬೇಕಿದೆ. ಹೊನ್ನಾಳಿ-ಶಿಕಾರಿಪುರ ರಸ್ತೆಯಿಂದ ಗ್ರಾಮ ಸುಮಾರು ಅರ್ಧ ಕಿ.ಮೀ ದೂರ ಇದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಶೀಘ್ರವೇ ಈ ರಸ್ತೆಯನ್ನು ಆಧುನೀಕರಣಗೊಳಿಸಬೇಕಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗಳ ಆಧುನೀಕರಣ ತುರ್ತು ಆಗಬೇಕು ಎನ್ನುತ್ತಾರೆ ಗ್ರಾಮದ ಎನ್.ಚಂದ್ರಾಚಾರಿ.
ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಅವಶ್ಯವಿದೆ. ಈಗ ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಇದೆ. ಆದರೆ, ಅದರಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ. ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಅವಶ್ಯಕತೆ ಇದೆ ಎಂಬುದು ಗ್ರಾಮದ ಕೆ.ಶಿವರಾಜ್ ಅವರ ಅನಿಸಿಕೆ.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಭಾಗದ ಮೂರು ಗ್ರಾಮಗಳ ರೈತರ ಜೀವನಾಡಿಯಾಗಿದೆ. ಸೊರಟೂರು, ಎಚ್.ಕಡದಕಟ್ಟೆ ಮತ್ತು ತುಗ್ಗಲಹಳ್ಳಿ ಗ್ರಾಮಗಳ ರೈತರ ರೂ. 43ಲಕ್ಷ ಸಾಲ ಮನ್ನಾ ಆಗಿದೆ. ಸಂಘ ಒಟ್ಟ್ಙು 1ಕೋಟಿಯ ವಹಿವಾಟು ನಡೆಸುತ್ತಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಜಿ.ರಾಮನಗೌಡ.
ಸ್ಮಶಾನಕ್ಕೆ ಸರ್ಕಾರ ಜಾಗ ಗುರುತಿಸದ ಕಾರಣ ಗ್ರಾಮಸ್ಥರು ತಮ್ಮ ಜಮೀನು, ಹಳ್ಳದ ತೀರದಲ್ಲಿ ಶವ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಇದೆ.
ಸಂಪೂರ್ಣ ಸ್ವಚ್ಛತಾ ಆಂದೋಲನದ ಅಡಿ ಕಾಮಗಾರಿಗಳನ್ನು ನಡೆಸಲಾಗಿದೆಯಾದರೂ ಸ್ವಚ್ಛತೆ ಮರೀಚಿಕೆಯಾಗಿದೆ.
ಗ್ರಾಮದ ಹೊರವಲಯದ `ತುಂಬಿದ ಕೆರೆ'ಯಲ್ಲಿ ನೀರಿನ ಬದಲು ಹೂಳು ತುಂಬಿದೆ!
ಸ್ತ್ರೀ ಶಕ್ತಿ ಸಂಘಗಳ ಸಾಧನೆ
ಸ್ತ್ರೀ ಶಕ್ತಿ ಸಂಘಗಳು ಗ್ರಾಮದ ಎಲ್ಲಾ ವರ್ಗಗಳ ಮಹಿಳೆಯರ ಸ್ವಾವಲಂಬನೆಗೆ ದಾರಿದೀಪವಾಗಿವೆ. ಬನಶಂಕರಿ, ಕೆಳದಿ ಚೆನ್ನಮ್ಮ, ಗೆಳತಿ, ಸ್ನೇಹಾ, ಸಂಕಲ್ಪ, ಸ್ವಾವಲಂಬನಾ, ಆಸರೆ ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ಒಟ್ಟು 20 ಸ್ತ್ರೀ ಶಕ್ತಿ ಸಂಘಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ 20 ಸ್ವ ಸಹಾಯ ಸಂಘಗಳು ಅಸ್ತಿತ್ವದಲ್ಲಿವೆ. ಅರ್ಪಣಾ ಮನೋಭಾವದ ಮಾರ್ಗದರ್ಶಕರ ನೆರವಿನಿಂದ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.