ADVERTISEMENT

ಕೊಳಚೆ ಪ್ರದೇಶ; ಸಾಂಕ್ರಾಮಿಕ ರೋಗ ಭೀತಿ!

ದಾವಣಗೆರೆ ನಗರದ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆ

ಎಲ್‌.ಮಂಜುನಾಥ
Published 15 ಜೂನ್ 2013, 10:51 IST
Last Updated 15 ಜೂನ್ 2013, 10:51 IST

ದಾವಣಗೆರೆ: ರಸ್ತೆ, ಚರಂಡಿಗೆ ವ್ಯತ್ಯಾಸ ಇಲ್ಲದಂತೆ ಮನೆಗಳ ಮುಂದೆ ಹರಿಯುವ ಕೊಳಚೆ ನೀರು. ರಸ್ತೆಯಲ್ಲೇ ನಿಂತ ನೀರಿನಲ್ಲಿ ಹಂದಿಗಳ ಹೊರಳಾಟ. ಗಾಳಿ, ಬೆಳಕು ಇಲ್ಲದ ಇಕ್ಕಟಿನ ಮನೆಗಳು.

ಅಲ್ಲಲ್ಲಿ ಕಾಣುವ ರಾಶಿ ರಾಶಿ ಬಿದ್ದಿರುವ ಕಸ,  ಗುಂಡಿ/ಮೋರಿಗಳು. ಇದರ ನಡುವೆಯೇ ಮಕ್ಕಳ ಆಟ-ಊಟ! ಚರಂಡಿಗಳು ಕಟ್ಟಿದರಂತೂ ಕೊಳಚೆ ನೀರು ಮನೆಗಳ ಮುಂದೆಯೇ ಹರಿಯುತ್ತದೆ! ಇದರ ನಡುವೆಯೇ ಬೂದಿ ಮಿಶ್ರಿತ ಅನ್ನ ತಿನ್ನುತ್ತಿರುವ ಮಕ್ಕಳು....!

-ಇದು ದಾವಣಗೆರೆ ನಗರದ ಬೂದಾಳ್ ರಸ್ತೆಯ ಬಾಬು ಜಗಜೀವನರಾಂ ನಗರ, ಎಸ್.ಎಂ.ಕೃಷ್ಣ ನಗರ, ಶಿವನಗರ, ಬಾಷಾ ನಗರ, ಕಾರ್ಲ್‌ಮಾರ್ಕ್ಸ್ ನಗರ, ಇಂದಿರಾ ನಗರ, ಸರ್ ಮಿರ್ಜಾ ಇಸ್ಮಾಯಿಲ್ ನಗರ ಮತ್ತು ಬೇತೂರು ರಸ್ತೆಯ ಕೆಲ ಪ್ರದೇಶಗಳು ಸೇರಿದಂತೆ ಈ ಭಾಗದ ಹತ್ತಾರು ಕೊಳಚೆ ಪ್ರದೇಶಗಳು. ಇಲ್ಲಿನ ಜನರಿಗೆ `ಸ್ವಚ್ಛತೆ' ಎನ್ನುವುದು ಗಗನಕುಸುಮ!

ಇಲ್ಲಿ ವಾಸಿಸುವ ಜನರ ಸ್ಥಿತಿಯಂತೂ ಹೇಳತೀರದು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅವುಗಳ ಜೊತೆಯಲ್ಲಿಯೇ ಅನಿವಾರ್ಯವಾಗಿ ಬದುಕಿನ ಬಂಡಿ ದೂಡುತ್ತಿದ್ದಾರೆ.

ಬೇಸಿಗೆ ಬರಲಿ, ಮಳೆ ಬರಲಿ ಇವರ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲ. ಅಂತೆಯೇ ಈ ಭಾಗದಲ್ಲಿ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುವ ಯಾವ ಸದಸ್ಯರೂ ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎನ್ನುವುದು ಈ ಭಾಗದ ಬಹುತೇಕ ನಿವಾಸಿಗಳ ಅಳಲು.

ಇನ್ನು ಬೇಸಿಗೆ ಕಾಲ ಮತ್ತು ಮಳೆಗಾಲದ ಸಮಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಮತ್ತು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಹೊರಡಿಸುವ ಮಾಹಿತಿ ಒಳಗೊಂಡ ಕರಪತ್ರಗಳ ಅರಿವು ಇವರಿಗಿಲ್ಲ. ಅಲ್ಲದೆ ಕೊಳಚೆ ಪ್ರದೇಶದ ಜನರ ಸ್ವಚ್ಛತೆ ಮತ್ತು ಅಭಿವೃದ್ಧಿಗಾಗಿಯೇ ಜಿಲ್ಲಾಧಿಕಾರಿಯಿಂದ ಗ್ರಾಮ ಪಂಚಾಯ್ತಿ ಅಧಿಕಾರಿಗಳವರೆಗೆ ನಡೆಯುವ ಸಭೆಗಳಿಂದಲೂ ಇವರ ಸಮಸ್ಯೆಗಳಿಗೆ ಮುಕ್ತಿ ದೊರೆತ್ತಿಲ್ಲ.

`ಯಾರೇ ಬಂದರೂ, ಎಷ್ಟೇ ಗಲೀಜು ಇದ್ದರೂ, ಏನೇ ಆದರೂ, ಇದೇ ನಮ್ಮ ಬದುಕು. ಇವುಗಳ ನಡುವೆಯೇ ನಾವು ಜೀವಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳಿಗೆ ಕೊನೆ ಇಲ್ಲವೆ' ಎನ್ನುವುದು ಇಲ್ಲಿನ ನಾಗರಿಕರ ಪ್ರಶ್ನೆ.

`ನೋಡಿ, ಮಳೆಗಾಲ ಬಂತೆಂದರೆ ಇಲ್ಲಿನ ಮೋರಿಯ ನೀರು ಮನೆಗಳಿಗೆ ನುಗ್ಗುತ್ತದೆ. ಡ್ರೈನೆಜ್ ಸಮಸ್ಯೆಯಂತೂ ಹೇಳತೀರದು. ಯಾವಾಗಲೂ ಕಟ್ಟಿರುತ್ತದೆ. ಅದರ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರಲ್ಲಿಯೇ ಸಾರ್ವಜನಿಕರು ಓಡಾಡುತ್ತಾರೆ. ಇದರಿಂದ ತುಂಬಾ ಜನರಿಗೆ ಮಲೇರಿಯಾ, ವಿಷಮ ಶೀತಜ್ವರ, ಕಾಲರಾ ಮತ್ತು ಡೆಂಗೆ ಜ್ವರ ಕಾಣಿಸಿಕೊಂಡಿದೆ.

ಈ ಹಿಂದೆ ಒಂದೇ ವರ್ಷದಲ್ಲಿ ಅಕ್ಕ-ತಂಗಿ ಇಬ್ಬರು ಡೆಂಗೆ ಜ್ವರಕ್ಕೆ ತುತ್ತಾಗಿ ಮೃತಪಟ್ಟರು. ಇದೀಗ ಮಳೆಗಾಲ ಆರಂಭವಾಗಿದೆ. ಮತ್ತೆ ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಭಯ ನಮಗೆ ಕಾಡುತ್ತಿದೆ' ಎನ್ನುತ್ತಾರೆ ನಗರದ ಬೂದಾಳ್ ರಸ್ತೆಯ ಬಾಬು ಜಗಜೀವನರಾಂ ನಗರದ ನಿವಾಸಿ ಕೆ.ಸಿ.ನಿರಂಜನಮೂರ್ತಿ. 

ಬೂದಿಯದ್ದೇ ಸಮಸ್ಯೆ!
`ಇಲ್ಲಿನ ಮಂಡಕ್ಕಿ ಮತ್ತು ಅವಲಕ್ಕಿ ಬಟ್ಟಿಗಳ ಬೂದಿ, ಊಟದ ತಟ್ಟೆಯಲ್ಲೇ ಬಂದು ಬೀಳುತ್ತದೆ. ಮಕ್ಕಳು ಅನ್ನದೊಂದಿಗೆ ಅದನ್ನೇ ತಿನ್ನುತ್ತಾರೆ. ಇಲ್ಲಿ ಬರುವ ಕುಡಿಯುವ ನೀರು ಸಹ ಕೊಳಚೆ ನೀರಿನಿಂದ ಮಲೀನವಾಗಿರುತ್ತದೆ. ಅನಿವಾರ್ಯವಾಗಿ ಅದನ್ನೇ ಕುಡಿಯುತ್ತಾರೆ.

ಇದರಿಂದ ಈ ಭಾಗದ ಹಲವಾರು ಮಕ್ಕಳಿಗೆ ಈಗಾಗಲೇ ವಾಂತಿ ಭೇದಿ ಕಾಣಿಸಿಕೊಂಡಿದೆ. ಕಳೆದ ವರ್ಷ ಡೆಂಗೆ ಜ್ವರದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಇಲ್ಲಿನ ಮನೆಗಳಲ್ಲಿನ ಕೆಲ ಮಕ್ಕಳು ಈಗಾಗಲೇ ಅತಿಯಾದ ಜ್ವರದಿಂದ ಬಳಲುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ನಾವು ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಈ ಭಾಗದ ಮಂಡಕ್ಕಿ ಬಟ್ಟಿಗಳಿಂದ ಹೊರಡುವ ಬೂದಿಯಿಂದಾಗಿ ಕೆಲ ಮಕ್ಕಳು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ' ಎಂದು ಸಮಸ್ಯೆಗಳ ಪಟ್ಟಿಯನ್ನೆ ಮುಂದಿಟ್ಟರು ಇಂದಿರಾನಗರದ ಶ್ರೀನಿವಾಸ್ ಮತ್ತು ವೆಂಕಟೇಶ್.

ಆಸ್ಪತ್ರೆ ತೆರೆಯಬೇಕು...:
ಸಾಂಕ್ರಾಮಿಕ ರೋಗಗಳ ಬಗ್ಗೆ ವಿಚಾರಿಸಿದರೆ, `ಸಂಬಂಧಪಟ್ಟ ಇಲಾಖೆಯವರು ಸಾಂಕ್ರಾಮಿಕ ರೋಗಗಳ ಮಾಹಿತಿ/ನಿಯಂತ್ರಣದ ಬಗ್ಗೆ ಕರ ಪತ್ರಗಳನ್ನು ಹಂಚಿದರೆ ಸಾಲದು, ಪ್ರಮುಖವಾಗಿ ಕೊಳಚೆ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಗುರಿಯಾದವರಿಗೆ ತಕ್ಷಣ ಚಿಕಿತ್ಸೆ ದೊರೆಯುವಲ್ಲಿ ಆಯಾ ಕೊಳಚೆ ಪ್ರದೇಶಗಳಲ್ಲಿ ಪರಿಣಿತ ವ್ಯೆದ್ಯರನ್ನೊಳಗೊಂಡ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆದು ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಇದರಿಂದ ರೋಗಗಳು ಹರಡುವುದನ್ನು ತಪ್ಪಿಸಬಹುದು' ಎನ್ನುತ್ತಾರೆ ಶಿವನಗರದ ಮಹಮ್ಮದ್ ಗೌಸ್‌ಫೀರ್

ಅರಿವು ಮೂಡಿಸಿದ್ದೇವೆ:
`ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ನಾವು ಈಗಾಗಲೇ ಸಾರ್ವಜನಿಕರಿಗೆ ಕರಪತ್ರ ಹಂಚುವುದರ ಮೂಲಕ ಅರಿವು ಮೂಡಿಸಿದ್ದೇವೆ. ಅದರಲ್ಲೂ ಕೊಳಚೆ ಪ್ರದೇಶದ ನಿವಾಸಿಗಳು ಹೆಚ್ಚು ಎಚ್ಚರವಹಿಸಬೇಕು. ಜ್ವರ ಕಾಣಿಸಿಕೊಂಡಲ್ಲಿ ತಕ್ಷಣ ಆಸ್ಪತ್ರೆಗೆ ಬರಬೇಕು ಎಂದು ಮನವಿ ಮಾಡಲಾಗಿದೆ.

ಇಷ್ಟಾದರೂ ಪ್ರತಿ ತಿಂಗಳು ಜಿಲ್ಲಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾದವರು ಚಿಕಿತ್ಸೆಗೆ ದಾಖಲಾಗುತ್ತಿರುವುದು ದುರದೃಷ್ಟಕರ ಸಂಗತಿ. ಮಲೇರಿಯಾ ಮತ್ತು ಡೆಂಗೆಗೆ ತುತ್ತಾಗಿರುವ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದೇವೆ' ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್.ಸುಮಿತ್ರಾದೇವಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜೆ.ಎಂ.ಸರೋಜಾಬಾಯಿ.

ದಾಖಲಾಗಿರುವ ಪ್ರಕರಣ
ವಾಂತಿ ಭೇದಿ/ ಕರಳುಬೇನೆ- 2,088, ಟೈಪೈಡ್- 575, ಕಾಲರಾ- 24, ಕಾಮಾಲೆ- 15, ಡೆಂಗೆ- 65 (ಶಂಕಿತ ಪ್ರಕರಣಗಳು-284), ಚಿಕುನ್ ಗುನ್ಯ 1 ಪಾಸಿಟಿವ್ (30 ಶಂಕಿತ), ಮಲೇರಿಯಾ- 8, ಪ್ರಕರಣಗಳು.

ಆದರೆ, ಇತ್ತೀಚಿಗೆ ದೊಡ್ಡ ಮಾಗಡಿಯಲ್ಲಿ ಡೆಂಗೆ ಜ್ವರದಿಂದ ಬಳಲಿ, ಬಾಲಕಿಯೊಬ್ಬಳು ಮೃತಪಟ್ಟಿರುವುದು ವರದಿಯಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಸರ್ವೇಕ್ಷಣಾ ಘಟಕದ ಮಾಹಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.