ADVERTISEMENT

ಗಾಂಧಿ ತತ್ವ ಪಾಲನೆಗೆ ಕರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 5:30 IST
Last Updated 3 ಅಕ್ಟೋಬರ್ 2011, 5:30 IST

ಚನ್ನಗಿರಿ: ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ಇದುವರೆಗೂ ನನಸಾಗಿಲ್ಲ. ಅಹಿಂಸೆಯಿಂದ ಪಡೆದ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದಂತಾಗಿದೆ. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಹಿರಿಯ ಸಮಾಜ ಸೇವಾ ಕಾರ್ಯಕರ್ತ ಡಾ.ಎ. ಬಸವಣ್ಣಯ್ಯ ಮಾತನಾಡಿ, ಹಿಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಜೈಲು ಸೇರುತ್ತಿದ್ದರು. ಆದರೆ, ಇಂದು ಅಧಿಕಾರ ಹಾಗೂ ಹಣದಾಸೆಗೆ ಬಿದ್ದು, ಭ್ರಷ್ಟರಾಗಿ ಜೈಲು ಸೇರುವಂತಾಗಿದೆ. ಗಾಂಧೀಜಿಯವರ ಕನಸು ನನಸಾಗಲು ನಾವೆಲ್ಲಾ ಅಣ್ಣಾ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ ಎಂದರು.

ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ರಹಮತ್ ಉಲ್ಲಾ, ಭಾರತೀ ಪ್ರಸಾದ್, ಫೈಜುನ್ನಿಸಾ, ಬಿಇಒ ಜಿ.ಆರ್. ತಿಪ್ಪೇಶಪ್ಪ, ಪಂಚಾಯತ್ ರಾಜ್ ಇಲಾಖೆ ಎಇಇ ಸೋಮಶೇಖರ್, ರೈತ ಸಂಘದ ಮುಖಂಡ ಸುಣಿಗೆರೆ ಪರಮೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.

ಪೂರ್ವಭಾವಿ ಸಭೆ
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ ಅಂಗವಾಗಿ ಅ. 4ರಂದು ಬೆಳಿಗ್ಗೆ 11ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ.

ತಾಲ್ಲೂಕಿನ ಸಮಾಜದ ಮುಖಂಡರು, ವಿವಿಧ ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಬಂಧುಗಳು ಆಗಮಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು  ಸಮಾಜದ ಪ್ರಧಾನ ಕಾರ್ಯದರ್ಶಿ ಹೊದಿಗೆರೆ ರಮೇಶ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.