ADVERTISEMENT

ಗ್ರಾಮಸಭೆ ಮುಂದೆ ಮಂಡಿಯೂರಿದ ಜಿ.ಪಂ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 12:52 IST
Last Updated 20 ಜೂನ್ 2013, 12:52 IST

ದಾವಣಗೆರೆ: ಇನ್ನು ಮುಂದೆ ಜಿಲ್ಲಾ ಪಂಚಾಯ್ತಿ ಸದಸ್ಯರು ಗ್ರಾಮಸ್ಥರ ಆಣತಿಯಂತೆ ನಡೆಯಬೇಕು. ಕಾರಣ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ನಡೆಯುವ ಪ್ರತಿ ಕಾಮಗಾರಿಗೂ ಗ್ರಾಮಸಭೆಯ ಅನುಮತಿ ಕಡ್ಡಾಯ!

ಜಿಲ್ಲಾ ಪಂಚಾಯ್ತಿ ಸದಸ್ಯರ ಅಧಿಕಾರವನ್ನು ಹಂತಹಂತವಾಗಿ ಮೊಟುಕುಗೊಳಿಸಿದ ಸರ್ಕಾರ, ಕೆಲ ದಿನಗಳ ಹಿಂದೆ ಮತ್ತೊಂದು ಇಂತಹ ಆದೇಶ ಹೊರಡಿಸಿರುವುದು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಎಲ್ಲ ಸದಸ್ಯರು ಪಕ್ಷಭೇದ ಮರೆತು ಸರ್ಕಾರದ ಈ ನಿರ್ಧಾರ ಖಂಡಿಸಿದರು.

ಯಾವುದೇ ಗ್ರಾಮದ ರಸ್ತೆ, ಶಾಲಾಕೊಠಡಿ, ಕಟ್ಟಡ ಸೇರಿದಂತೆ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಯಾವುದೇ ಕೆಲಸ ಮಾಡಬೇಕಾದರೂ, ಅಲ್ಲಿನ ಗ್ರಾಮಸಭೆಯ ಅನುಮತಿ ಕಡ್ಡಾಯ ಮಾಡಲಾಗಿದೆ. ಶಾಲೆ ದುರಸ್ತಿಗೂ ನೇರವಾಗಿ ಹಣ ಕೊಡುವಂತಿಲ್ಲ. ಇದರಿಂದ ಸದಸ್ಯರ ಅಧಿಕಾರಕ್ಕೆ ಧಕ್ಕೆ ಆಗುವುದಲ್ಲದೇ, ನಿರೀಕ್ಷಿತ ಕಾಮಗಾರಿ ಕೈಗೊಳ್ಳುವುದು ಕಷ್ಟವಾಗುತ್ತದೆ ಎಂದು ಅವಲತ್ತುಕೊಂಡರು.

ಸದಸ್ಯ ಬಿ.ನಾಗೇಂದ್ರಪ್ಪ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಪಠ್ಯಪುಸ್ತಕ ವಿತರಣೆ ವಿಳಂಬ ಮಾಡುತ್ತಿದ್ದಾರೆ. ಶಿಕ್ಷಕರ ಕೊರತೆ ಇದ್ದರೂ, ಬಗೆಹರಿಸದೇ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಸಹಕಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸದಸ್ಯ ಕರಿಬಸಪ್ಪ ಮಾತನಾಡಿ, ಬಿ. ಕಲ್ಪನಹಳ್ಳಿ ಒಂದು ಚಿಕ್ಕ ಗ್ರಾಮ. ಅಲ್ಲಿರುವ ಸರ್ಕಾರಿ ಶಾಲೆ ಚೆನ್ನಾಗಿ ನಡೆಯುತ್ತಿದೆ. ಆದರೆ, ಶಿಕ್ಷಣ ಇಲಾಖೆ ಅಲ್ಲಿ ಖಾಸಗಿ ಶಾಲೆಗೆ ಅನುಮತಿ ನೀಡಿದೆ. ಇದು ಸರ್ಕಾರಿ ಶಾಲೆಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಡಿ.ಕೆ. ಶಿವಕುಮಾರ್, ಅಲ್ಲಿ ಖಾಸಗಿ ಶಾಲೆ ಆರಂಭಿಸಲು ಅನುಮತಿ ನೀಡಿಲ್ಲ. ನಾಳೆಯೇ ಶಾಲೆ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಖಾಸಗಿ ಶಾಲೆಗಳಿಗೆ ಅನುಮತಿ ಬೇಡ: ಅನುಮತಿ ಇಲ್ಲದ, ಕನ್ನಡ ಮಾಧ್ಯಮದ ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳನ್ನು ಕೂಡಲೇ ಮುಚ್ಚಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ತಾಕೀತು ಮಾಡಿದರು. ಇನ್ನು ಮುಂದೆ ಯಾವುದೇ ಖಾಸಗಿ ಶಾಲೆ ಆರಂಭಕ್ಕೆ ಅನುಮತಿ ನೀಡಬಾರದು ಎಂದು ಸೂಚಿಸಿದರು.

ಸರ್ಕಾರಿ ಶಾಲೆಗೆ ದಾನಿಗಳು ಕೊಟ್ಟ ಜಾಗ ಸದುಪಯೋಗ ಆಗಿಲ್ಲ. ಅಂತಹ ಹಲವು ಜಮೀನು ವ್ಯರ್ಥವಾಗಿವೆ ಎಂದು ಸದಸ್ಯರು ದೂರಿದರು. ದಾನಿಗಳು ಕೊಟ್ಟ ಜಾಗವನ್ನು ಅಳತೆ ಮಾಡಿಸಿ, ಸದ್ಬಳಕೆ ಮಾಡಿಕೊಳ್ಳುವಂತೆ ಸಿಇಒ ಹೇಮಚಂದ್ರ ಸೂಚಿಸಿದರು.

ನಡೆಯದ ಸರ್ವಶಿಕ್ಷಣ ಅಭಿಯಾನ ಸಭೆ: ಸರ್ವಶಿಕ್ಷಣ ಅಭಿಯಾನ ಯೋಜನೆ ಅನುಷ್ಠಾನಗೊಳಿಸಲು ಒಂದು ಸಮಿತಿ ಇರುತ್ತದೆ. ಅದಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಸಿಇಒ ಸದಸ್ಯ ಕಾರ್ಯದರ್ಶಿ. ಆದರೆ, ಇದುವರೆಗೂ ಒಮ್ಮೆಯೂ ಸಭೆ ಕರೆದಿಲ್ಲ ಎಂದು ಸದಸ್ಯ ಮೆಳ್ಳೆಕಟ್ಟೆ ಚಿದಾನಂದ ಐಗೂರು ದೂರಿದರು.

ಸರ್ವಶಿಕ್ಷಣ ಅಭಿಯಾನದಲ್ಲಿ ಹೊರಗುತ್ತಿಗೆ ಅಡಿ ನೇಮಕಮಾಡಿದ ಶಿಕ್ಷಕರು ಹಾಗೂ ಇತರ ಸಿಬ್ಬಂದಿಯ ಮಾಹಿತಿ ನೀಡುವಂತೆ ಕೋರಿದರು.
ನಂದಿಗುಡಿ ಮೊರಾರ್ಜಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿ ಸೂಕ್ತ ಮೂಲಸೌಲಭ್ಯ ಕಲ್ಪಿಸಿ ಎಂದು ಹರಿಹರ ತಾಲ್ಲೂಕು ಪಂಚಾಯ್ತಿ ಸದಸ್ಯೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ.ಕೆ.ಮಹಾಂತೇಶ್, 23 ಎಕರೆ ಇರುವ ಶಾಲೆಗೆ ಆವರಣ ಗೋಡೆ ನಿರ್ಮಿಸಲು ್ಙ 70 ಲಕ್ಷದ ಆವಶ್ಯಕತೆ ಇದೆ. ಜತೆಗೆ, ಸಾಕಷ್ಟು ಅನುದಾನ ಬೇಕು. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಅಂಗವಿಕಲರಿಗೆ ಶಿಕ್ಷಣ; ತನಿಖೆಗೆ ಆದೇಶ
ಶ್ರವಣದೋಷ ಸೇರಿದಂತೆ ವಿವಿಧ ನ್ಯೂನತೆಯಿಂದ ಬಳಲುತ್ತಿರುವ ಅಂಗವಿಕಲರಿಗೆ ವಿಶೇಷ ಶಿಕ್ಷಣ ನೀಡಲು ಜಿಲ್ಲೆಯಲ್ಲಿ ಐಇಡಿಎಸ್‌ಎಸ್ ಯೋಜನೆ ಜಾರಿಯಲ್ಲಿದ್ದರೂ, ಎಲ್ಲೂ ಶಿಕ್ಷಕರೇ ಇಲ್ಲ. ಆದರೆ, ಎಲ್ಲೆಡೆ ಶಾಲೆಗಳು ನಡೆಯುತ್ತಿವೆ ಎಂದು ದಾಖಲೆ ನೀಡಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸದಸ್ಯೆ ಸಹನಾ ರವಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.