ADVERTISEMENT

ಚೆಡ್ಡಿ, ಲಾಠಿಗಳಿಂದ ದೇಶದ ಅಭಿವೃದ್ಧಿ ಆಗಲ್ಲ

ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 12:08 IST
Last Updated 4 ಏಪ್ರಿಲ್ 2018, 12:08 IST
ರಾಹುಲ್‌ ಗಾಂಧಿ,
ರಾಹುಲ್‌ ಗಾಂಧಿ,   

ದಾವಣಗೆರೆ: ಚೆಡ್ಡಿ, ಲಾಠಿಗಳಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.ನಗರದ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಆರ್‌ಎಸ್‌ಎಸ್‌ ಸುಳ್ಳಿನ ತರಬೇತಿ ನೀಡುತ್ತಿದೆ. ಅದು ಎಡ, ಬಲ ಹೇಳಿಕೊಡುತ್ತದೆಯೇ ಹೊರತು ಜನರ ಸಮಸ್ಯೆಗಳನ್ನು ಗಮನಿಸಲು ತಿಳಿಸುವುದಿಲ್ಲ. ಆರ್‌ಎಸ್‌ಎಸ್‌ನಲ್ಲಿ ತರಬೇತಿ‍ ‍ಪಡೆದ ನರೇಂದ್ರ ಮೋದಿ ಸುಳ್ಳಿನ ದೊಡ್ಡ ಆರಾಧಕ ಎಂದು ಟೀಕಿಸಿದರು.ಬಸವಣ್ಣನ ‘ನುಡಿದಂತೆ ನಡೆ’ ವಚನದ ಸಾಲನ್ನು ‍ಪ್ರಸ್ತಾಪಿಸಿದ ರಾಹುಲ್‌, ‘ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಬಿಜೆಪಿ, ದೇಶದಾದ್ಯಂತ ಸುಳ್ಳನ್ನು ಸೃಷ್ಟಿಸುತ್ತಿದೆ’ ಎಂದರು.

‘ಮೋದಿ ಮನ್‌ಕಿ ಬಾತ್‌ ಮೂಲಕ ತಮ್ಮ ಮನದ ಮಾತುಗಳನ್ನಷ್ಟೇ ಹೇಳುತ್ತಾರೆ. ಆದರೆ, ಜನರ ಭಾವನೆಗಳನ್ನು ಕೇಳುವುದಿಲ್ಲ. ಲೋಕದ ನೋವು, ದುಃಖಗಳು ಅವರಿಗೆ ಬೇಡ. ದೇಶಕ್ಕೆ ಸಂಕಷ್ಟ ಬಂದಾಗಲೆಲ್ಲ ಅವರ ಬಾಯಿ ಬಂದ್‌ ಆಗಿ ಬಿಡುತ್ತದೆ’ ಎಂದು ಲೇವಡಿ ಮಾಡಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಸಡಿಲಗೊಳಿಸುವ ಪ್ರಕ್ರಿಯೆಯಿಂದ ದೇಶದಲ್ಲಿ ಹಿಂಸಾಚಾರ ನಡೆದಿದೆ. ಈ ಬಗ್ಗೆ ಮೋದಿ ಮೌನ ತಾಳಿದ್ದು ಏಕೆ ಎಂದು ಪ್ರಶ್ನಿಸಿದರು.ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಿರಂತರವಾಗಿದ್ದರೂ ಮೋದಿ ಮಾತ್ರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಮೋದಿ ಮನ್‌ಕಿ ಬಾತ್‌ನಲ್ಲಿ ದಲಿತರ ನೋವುಗಳಿಗೆ ಅವಕಾಶ ಇಲ್ಲ ಎಂದು ಕುಟುಕಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ರಾಷ್ಟ್ರದ ಎದುರಿಗೆ ಬಂದು ನ್ಯಾಯಾಲಯದ ಲೋಪದೋಷಗಳನ್ನು ಹೇಳಿಕೊಂಡಿರುವುದು ದೇಶದ ಇತಿ
ಹಾಸದಲ್ಲೇ ಮೊದಲು. ಈ ದೇಶದ ಪ್ರಧಾನಿ ಇದಕ್ಕೆ ಒಂದೇ ಒಂದು ಸಾಲಿನ ಪ್ರತಿಕ್ರಿಯೆಯನ್ನು ಇದುವರೆಗೂ ನೀಡಿಲ್ಲ ಎಂದು ದೂರಿದರು.

ADVERTISEMENT

ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ರೋಷನ್‌ ಬೇಗ್, ಸತೀಶ್‌ ಜಾರಕಿಹೊಳಿ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಕೆ.ಶಿವಮೂರ್ತಿ, ಡಿ.ಜಿ.ಶಾಂತನಗೌಡ, ಎಚ್‌.ಪಿ.ರಾಜೇಶ್, ವಡ್ನಾಳ್‌ ರಾಜಣ್ಣ, ಅಬ್ದುಲ್‌ ಜಬ್ಬಾರ್, ಮೋಹನ್‌ ಕೊಂಡಜ್ಜಿ, ಮಧು ಯಾಸ್ಕಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುಖಂಡ ಕೆ.ಜಿ.ಶಿವಕುಮಾರ್ ಅವರೂ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ವಾಗತಿಸಿದರು.

2 ಗಂಟೆ ತಡವಾದ ಸಮಾವೇಶ

ಸಮಾವೇಶ ಸಂಜೆ 5ಕ್ಕೆ ಆರಂಭವಾಗಬೇಕಿತ್ತು. ಆದರೆ, ರಾತ್ರಿ 7ಕ್ಕೆ ರಾಹುಲ್‌ ಗಾಂಧಿ ವೇದಿಕೆಗೆ ಬಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿ ಬಂದು ಕುಳಿತು ಎರಡು ನಿಮಿಷಗಳ ನಂತರ ರಾಹುಲ್‌ ಗಾಂಧಿ ಬಂದರು. ಸ್ವಾಗತಿಸಲು ನಿಂತಿದ್ದ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಿಗೆ ಹಸ್ತಲಾಘವ ಮಾಡಿ ವೇದಿಕೆ ಹತ್ತಿದರು.

**

ಕರ್ನಾಟಕದ ಜನರು ಎಲ್ಲಡೆ ನನ್ನನ್ನು ಹೃದಯತುಂಬಿ ಸ್ವಾಗತಿಸಿದ್ದಾರೆ. ಜೀವ ಇರುವರೆಗೂ ನಾನು ಇದನ್ನು ಮರೆಯಲ್ಲ –  ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.