ADVERTISEMENT

ಜನರ ಪ್ರೀತಿ ಗಳಿಸಲು ದಾಪುಗಾಲು: ಮಹಿಮ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 7:25 IST
Last Updated 10 ಏಪ್ರಿಲ್ 2018, 7:25 IST

ಸಂತೇಬೆನ್ನೂರು: ‘ಜೆಡಿಯು ಜನರ ಪ್ರೀತಿ ಗಳಿಸುವ ಗುರಿಯೊಂದಿಗೆ ದಾಪುಗಾಲು ಹಾಕುತ್ತಿದೆ. ದಿನದಿಂದ ದಿನಕ್ಕೆ ಪ್ರಚಾರ ಅಭಿಯಾನ ಏರುಗತಿಯಲ್ಲಿದೆ’ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಭರವಸೆ ವ್ಯಕ್ತಪಡಿಸಿದರು.

‌ಇಲ್ಲಿನ ಗಣೇಶ ದೇಗುಲದಲ್ಲಿ ಸೋಮವಾರ ಪೂಜೆ ಸಲ್ಲಿಸಿ ‘ಜೆಡಿಯು ಪುನರುತ್ಥಾನ’ ಎಂಬ ವಿಶೇಷ ವಾಹನದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೆಡಿಯು ಚುನಾವಣಾ ನೀತಿ ಸಂಹಿತೆ ಗೌರವಿಸಿ ಪ್ರಚಾರ ನಡೆಸುತ್ತಿದೆ. ಮಹಿಳೆಯರ ಹಾಗೂ ಮಕ್ಕಳಿಂದ ಅಭಿಮಾನದ ಮಹಾಪೂರ ಹರಿದು ಬರುತ್ತಿದೆ. ಭ್ರಷ್ಟಾಚಾರ ಮುಕ್ತ ಪ್ರಾಮಾಣಿಕ ಸೇವೆ ಸಲ್ಲಿಸಲು ಜೆಡಿಯು ಅಧಿಕಾರ ಪಡೆಯಲಿದೆ ಎಂದರು.

ADVERTISEMENT

‘ಎಲ್ಲಾ ಜಿಲ್ಲಾ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿರುವೆ. ಏ.20ರಂದು ನಾಮಪತ್ರ ಸಲ್ಲಿಸುವೆ’ ಎಂದರು. ‘ನಾಮಪತ್ರ ಸಲ್ಲಿಕೆ ಆಗುವವರೆಗೆ ನಿಷೇಧಾಜ್ಞೆ ವಿಧಿಸಬೇಕು. ಗುಂಪಿನ ಪ್ರಚಾರಕ್ಕೆ ತಡೆಯೊಡ್ಡಬೇಕು. ಮತ ಹಾಕುವವರೆಗೆ ಕರ್ಫ್ಯೂ ವಿಧಿಸಬೇಕು. ಇದರಿಂದ ಚುನಾವಣಾ ಅಕ್ರಮಗಳಿಗೆ ತಡೆ ನೀಡಬಹುದು’ ಎಂದು ‘ಪ್ರಜಾವಾಣಿ’ ಜತೆ ವ್ಯಂಗ್ಯವಾಗಿ ಹೇಳಿದರು.

ನೂರಾರು ಕಾರ್ಯಕರ್ತರು ದ್ವಿಚಕ್ರ ವಾಹನ, ಕಾರುಗಳಲ್ಲಿ ಸಾಗಿದರು. ಜೆಡಿಯು ತಾಲ್ಲೂಕು ಅಧ್ಯಕ್ಷ ಆರ್.ಎಂ.ರವಿ, ಜಿಲ್ಲಾಧ್ಯಕ್ಷ ಹರೀಶ್ ನಾಯ್ಕ್, ನಲ್ಲೂರು ಉಸ್ಮಾನ್ ಷರೀಫ್, ಭೋಜರಾಜ್, ದೇವೇಂದ್ರಪ್ಪ, ಮಂಜುನಾಥ್, ಮಲ್ಲೇಶಪ್ಪ, ಕೋಡಿ ಉಮೇಶ್, ರಿಯಾಜ್ ಅಹಮದ್, ಸುಧಾಕರ್, ದೇವರಾಜ್ ಶಿಂಧೆ, ಬಿ.ನಟರಾಜ್‍ ಹಾಜರಿದ್ದರು.

ಬಸವಾಪಟ್ಟಣ ವರದಿ: ಚನ್ನಗಿರಿ ತಾಲ್ಲೂಕಿನ ಸರ್ವಾಂಗೀಣ ವಿಕಾಸ ಹಾಗೂ ಸಾಮಾಜಿಕ ಸಮಾನತೆಗೆ ಜೆ.ಡಿ.ಯು ಪಕ್ಷವನ್ನು ಬೆಂಬಲಿಸಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌ ಮನವಿ ಮಾಡಿದರು.ಸೋಮವಾರ ಸೂಳೆಕೆರೆ ಸಮೀಪ ಅಭಿಮಾನಿಗಳ ಜತೆ ಬೈಕ್‌ ರ‍್ಯಾಲಿ ನಡೆಸಿ ಅವರು ಮಾತನಾಡಿದರು.

‘ಹಿಂದೆಯೂ ಸೂಳೆಕೆರೆ ಬಳಿಯಿಂದಲೇ ಪಾದಯಾತ್ರೆ ಆರಂಭಿಸಿ ಮತ ಯಾಚಿಸಲಾಗಿತ್ತು. ಕ್ಷೇತ್ರದ ಜನ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದರು. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೊಂದಿಗೆ, ಚನ್ನಗಿರಿ ತಾಲ್ಲೂಕಿನ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದೇನೆ. ಈಗಾಗಲೇ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ನಂತರದಲ್ಲಿ ಮತ್ತಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಮಹಿಮ ಪಟೇಲ್‌ ತಿಳಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಆರ್‌.ಎಂ.ರವಿ ಮಾತನಾಡಿ, ಇದೇ 20ರಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಹಿಮ ಪಟೇಲ್‌ ನಾಮಪತ್ರ ಸಲ್ಲಿಸುತ್ತಿದ್ದು, ತಾಲ್ಲೂಕಿನ ಜನರು ಬೆಂಬಲ ಸೂಚಿಸಬೇಕಾಗಿ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್‌, ಪಕ್ಷದ ತಾಲ್ಲೂಕು ಮುಖಂಡರಾದ ಸಂತೇಬೆನ್ನೂರು ರಾಜ ಇದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.