ADVERTISEMENT

ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ; ತಂಪೆರೆದ ವಾತಾವರಣ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 6:55 IST
Last Updated 11 ಏಪ್ರಿಲ್ 2011, 6:55 IST
ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ; ತಂಪೆರೆದ ವಾತಾವರಣ
ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ; ತಂಪೆರೆದ ವಾತಾವರಣ   

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಮಳೆಯ ವಾತಾವರಣ ಕಂಡುಬಂದಿತು. ಕೆಲವು ಕಡೆ ಮಳೆ ಸುರಿದರೆ ಮತ್ತೆ ಕೆಲವೆಡೆ ಮೋಡ ಕವಿದು ಹವಾಮಾನ ತಂಪಾಗಿತ್ತು.ಚನ್ನಗಿರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಯಿತು. ಇತರ ತಾಲ್ಲೂಕುಗಳಲ್ಲಿ ಮಧ್ಯಾಹ್ನದ ನಂತರ, ಕೆಲವೆಡೆ ಸಂಜೆ ತುಂತುರು ಮಳೆಯಾಯಿತು.

‘ಶನಿವಾರ ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿ ಮಳೆ ಸುರಿಯಿತು. ಭಾನುವಾರ ಚನ್ನಗಿರಿ ತಾಲ್ಲೂಕಿನಲ್ಲಿ ಗಂಟೆಗೆ 50 ಮಿ.ಮೀ. ತೀವ್ರತೆಯಲ್ಲಿ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಆರಂಭವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯುತ್ ಕಡಿತ
ಹೊನ್ನಾಳಿ: ಪಟ್ಟಣದಲ್ಲಿ ಭಾನುವಾರ ಗುಡುಗು-ಸಿಡಿಲು ಸಹಿತ ಮಳೆ ಸುರಿದು, ಬಿಸಿಲಿನ ತಾಪದಿಂದ ಬಸವಳಿದ ಜನತೆಗೆ ತಂಪೆರೆಯಿತು.ಸಂಜೆ 6ರಿಂದಲೇ ಪ್ರಾರಂಭವಾದ ಮಳೆ 7.15ರ ವೇಳೆಯಲ್ಲೂ ಮುಂದುವರಿದಿತ್ತು. ಸಂಜೆ 5.55ರಿಂದಲೇ ವಿದ್ಯುತ್ ಕಡಿತಗೊಂಡಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಶನಿವಾರ ಕೂಡ ಸಂಜೆ ಗುಡುಗು-ಸಿಡಿಲಿನ ವಾತಾವರಣ ಇತ್ತಾದರೂ ಮಳೆ ಸುರಿಯಲಿಲ್ಲ. ಭಾನುವಾರ ಸುರಿದದ್ದು ಈ ಬಾರಿಯ ಮೊದಲ ಮಳೆಯಾಗಿದೆ. ಮಳೆಯಾಶ್ರಿತ ಜಮೀನುಗಳ ರೈತರು ಹರ್ಷಗೊಂಡಿದ್ದಾರೆ.

ಗುಡುಗಿನ ಆರ್ಭಟ
ನ್ಯಾಮತಿ: ಬೆಳಿಗ್ಗೆಯಿಂದ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನತೆಗೆ ಭಾನುವಾರ ಮಧ್ಯಾಹ್ನ ಗುಡುಗಿನ ಆರ್ಭಟದೊಂದಿಗೆ ಮಳೆ ಹನಿ ಸುರಿದು ತಂಪು ವಾತಾವರಣ ಉಂಟು ಮಾಡಿತು.
ಮಧ್ಯಾಹ್ನ 3ರ ವೇಳೆಯಲ್ಲಿ ಗುಡುಗು-ಮಿಂಚಿನಿಂದ ಭಾರೀ ಮಳೆ ಸುರಿಯುವ ವಾತಾವರಣ ಕಂಡುಬಂದಿತು. ಆದರೆ, ಹೆಚ್ಚಿನ ಮಳೆ ಬಾರದೆ ತುಂತುರು ಮಳೆ ಬಂದಿತು. ಹೊಲದಲ್ಲಿ-ಹಿತ್ತಲಲ್ಲಿ ಸಂಗ್ರಹಿಸಿದ್ದ ಮೇವಿನ ಬಣವೆಗಳು ಮಳೆಗೆ ತೊಯ್ಯುತ್ತವೆ ಎಂಬ ಆತಂಕದಿಂದ ರೈತರು ಬಣವೆಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿದ್ದರು.

ತಾಪ ಇಳಿಕೆ
ಚನ್ನಗಿರಿ: ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಭಾನುವಾರ ಸಂಜೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಬಿದ್ದಿದೆ.ಸುಮಾರು ಅರ್ಧ ಗಂಟೆ ಕಾಲ ಮಳೆಯಾಗಿದ್ದು, ಬಿಸಿಲಿನ ತಾಪವನ್ನು ಕೊಂಚ ಕಡಿಮೆಯಾಗುವಂತೆ ಮಾಡಿತು.ತಾಲ್ಲೂಕಿನ ಮುದ್ದೇನಹಳ್ಳಿ, ಬುಸ್ಸೇನಹಳ್ಳಿ, ಗರಗ, ಗುಳ್ಳೇಹಳ್ಳಿ, ಬೆಂಕಿಕೆರೆ, ಹೊದಿಗೆರೆ, ದೇವರಹಳ್ಳಿ, ಹಿರೇಉಡ, ಹಟ್ಟಿ, ಅಜ್ಜಿಹಳ್ಳಿ, ದಿಗ್ಗೇನಹಳ್ಳಿ, ರಾಜಗೊಂಡನಹಳ್ಳಿ, ಲಕ್ಷ್ಮೀಸಾಗರ ಮುಂತಾದ ಗ್ರಾಮಗಳಲ್ಲಿ ಜೋರಾದ ಗಾಳಿ ಬೀಸುವ ಮೂಲಕ ಮಳೆ ಸುರಿದಿದೆ. ಈಗ ಬಿದ್ದಿರುವ ಮಳೆಯಿಂದ ಅಡಿಕೆ ತೋಟಗಳಿಗೆ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.