ADVERTISEMENT

ಜೀವನ್ಮರಣ ಹೋರಾಟಕ್ಕೂ ಸಿಗದ ಸ್ಪಂದನೆ

ದಾವಣಗೆರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 6:53 IST
Last Updated 10 ಡಿಸೆಂಬರ್ 2013, 6:53 IST

ದಾವಣಗೆರೆ: ಅದು ಅಕ್ಷರಶಃ ಸಾವು ಬದುಕಿನ ಹೋರಾಟ; ಸಾವಿನ ಕದತಟ್ಟಿ ವಾಪಸ್‌ ಬಂದ ಕ್ಷಣ. ಅದರ ಮಧ್ಯದಲ್ಲಿ ಜೀವ ಉಳಿಸಿಕೊಂಡೆನ್ನಲ್ಲಾ ಎಂದು ನಿಟ್ಟುಸಿರುಬಿಟ್ಟು ಆಸ್ಪತ್ರೆಗೆ ಬಂದರೆ ಅಲ್ಲಿಯೂ ನರಕಯಾತನೆ ಅನುಭವಿಸಿದ ಕರುಣಾಜನಕ ಕಥೆ ಇದು...

– ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಸಮೀಪದ ಮಲಿಯಮ್ಮ ದೇಗುಲದ ಬಳಿ ಸೋಮವಾರ ಬೆಳಿಗ್ಗೆ ನಡೆದ ಅಪಘಾತದಲ್ಲಿ ಬದುಕುಳಿದು ಬಂದ ಹನುಮಂತಪ್ಪ ಕಬ್ಬಳ್ಳಿ ಅನುಭವಿಸಿದ ಕಷ್ಟ ಯಾರಿಗೂ ಹೇಳತೀರದು! ಆಟೊರಿಕ್ಷಾ ಹಾಗೂ ಟೆಂಪೊಟ್ರ್ಯಾಕ್ಸ್‌ ನಡುವೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಹನುಮಂತಪ್ಪ ಗಂಭೀರಗಾಯಗೊಂಡವರು. ಆತನ ತಲೆ, ಎರಡು ಕಾಲುಗಳಿಗೆ ಬಲವಾದ ಪೆಟ್ಟುಬಿದ್ದಿದೆ.

ಬೆನ್ನುಹುರಿ ಮುರಿದು ಹೋಗಿದೆ. ಸ್ಥಳದಲ್ಲಿ ಆತ ಪಟ್ಟಕಷ್ಟ ಅಷ್ಟಿಷ್ಟಲ್ಲ. ತಕ್ಷಣವೇ ಆತನನ್ನು ಹರಪನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಂದ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಗೆ ದಾಖಲು ಮಾಡಿಕೊಂಡಿಲ್ಲ. ಇಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಯಿಲ್ಲ ಎಂದು ಸಬೂಬು ಹೇಳಿ, ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹನುಮಂತಪ್ಪ ಅವರನ್ನು ಅಲೆದಾಡಿಸಿದ ಘಟನೆ ನಡೆದಿದೆ.

ಆಸ್ಪತ್ರೆಗೆ ಕರೆತಂದರೂ ಕನಿಷ್ಠ ವಾರ್ಡ್‌ ಒಳಗೂ ಸೇರಿಸಿಲ್ಲ. ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಿಲ್ಲ. ಆತನ ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಆಸ್ಪತ್ರೆಯಲ್ಲಿ ನರರೋಗ ತಜ್ಞರಿಲ್ಲ; ವೆಂಟಿಲೇಟರ್‌ ವ್ಯವಸ್ಥೆಯಿಲ್ಲ ಎಂದು ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಸಂಬಂಧಿಕರೂ ದಿಕ್ಕು ತೋಚಾದಂತಾದರು.

ಬಳಿಕ ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಯ ಬಳಿಗೆ ಹೋಗಿದ್ದಾರೆ. ಅಲ್ಲಿಯೂ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಮತ್ತೆ ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ಬಂದಿದ್ದಾರೆ. ಒಟ್ಟು ಆರು ಬಾರಿ ಇತ್ತಿಂದತ್ತ– ಅತ್ತಿಂದಿತ್ತ ಓಡಾಡಿದ್ದಾರೆ. ಆದರೂ, ಸಿಬ್ಬಂದಿ ಸ್ಪಂದಿಸಿಲ್ಲ ಎಂದು ನಾಗರಿಕರು ಹಾಗೂ ಸಾರ್ವಜನಿಕರು ಆರೋಪಿಸಿದರು.
ಆಗ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳುವಂತೆ ಪಟ್ಟು ಹಿಡಿದರು.

ಬಳಿಕ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿ.ಟಿ. ಸ್ಕ್ಯಾನ್‌ ಮಾಡಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅಲ್ಲಿಗೆ ಮೂರು ಗಂಟೆಗಳು ಕಳೆದು ಹೋಗಿದ್ದವು! ಇದೀಗ ದಾವಣಗೆರೆಯ ಮತ್ತೊಂದು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವು– ಬದುಕಿನ ನಡುವೆ ಆತ ಹೋರಾಟ ನಡೆಸುತ್ತಿದ್ದಾರೆ.

ನಿತ್ಯ ದಾವಣಗೆರೆಯತ್ತ..! ಹನುಮಂತಪ್ಪ ಅವರದ್ದು ಹೂವಿನ ವ್ಯಾಪಾರ. ಹಗಲು ಹೂವು ಕೊಂಡು ರಾತ್ರಿ ವೇಳೆಗೆ ದಾವಣಗೆರೆಯ ಮಾರುಕಟ್ಟೆಗೆ ಬರುತ್ತಿದ್ದರು. ಅದರಂತೆಯೇ ಭಾನುವಾರ ರಾತ್ರಿಯೂ ಬಂದಿದ್ದಾರೆ. ರಾತ್ರಿಯಿಡೀ ಖುಷಿಯಿಂದಲೇ ವ್ಯಾಪಾರ ನಡೆಸಿದ್ದಾರೆ. ಒಂದಷ್ಟು ಹಣ ಸಂಪಾದಿಸಿ, ಬೆಳಗ್ಗಿನಜಾವ ಬಸ್‌ ಹತ್ತಿ
ಊರಿನತ್ತ ಹೊರಟಿದ್ದಾರೆ. ಹರಪನಹಳ್ಳಿಯಿಂದ 5 ಕಿ.ಮೀ. ದೂರದ ಶೃಂಗಾರತೋಟಕ್ಕೆ ಹೋಗಲು ಅಟೊರಿಕ್ಷಾ ಹತ್ತಿ ಹೊರಟ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದೆ!

ಮುಗಿಲು ಮುಟ್ಟಿದ ಆಕ್ರಂದನ
ಹರಪನಹಳ್ಳಿ: ಅಪಘಾತದದ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತಿಯೇ ಸಮೀಪದ ಶೃಂಗಾರತೋಟ ಹಾಗೂ ನಂದಿಬೇವೂರು ಗ್ರಾಮದ ಮೃತರ ಸಂಬಂಧಿಕರು ಆಗಮಿಸಿದರು.

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಉಪನ್ಯಾಸಕ ರಾಮಸ್ವಾಮಿ, ಶಿಕ್ಷಕ ಮಿಯಾಸಾಹೇಬ್‌ ಹಾಗೂ ಹೂವಿನ ವ್ಯಾಪಾರ ಮಾಡಿ ಸಂಸಾರ ರಥದ ಸಾರಥ್ಯವಹಿಸಿಕೊಂಡಿದ್ದ ಚಿಕ್ಕಪ್ಪನ ಮೃತದೇಹ ಕಂಡ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.

ಕರಾಳ ಕಾರ್ತೀಕ: ಉಪನ್ಯಾಸಕ ರಾಮಸ್ವಾಮಿ ಅವರ ಸ್ವಗ್ರಾಮ ನಂದಿಬೇವೂರು ಗ್ರಾಮದಲ್ಲಿ ಅರಾಧ್ಯದೈವ ಬಸವೇಶ್ವರ ಕಾರ್ತೀಕೋತ್ಸವ ಸೋಮವಾರ ರಾತ್ರಿ ಇತ್ತು. ಬೆಳಗಿನ ಅವಧಿ ಮುಗಿಸಿಕೊಂಡು ಬರುವುದಾಗಿ ಹೇಳಿಹೋಗಿದ್ದ ರಾಮಸ್ವಾಮಿ ಮತ್ತೆ ವಾಪಸ್‌ ಬಾರದ ಲೋಕಕ್ಕೆ ಹೋಗಿದ್ದಾನೆ. ಪತಿಯ ಮಾತು ಇನ್ನೂ ಸ್ಮೃತಿಪಟಲದಲ್ಲಿ ರಿಂಗಣಿಸುತ್ತಿದ್ದಂತಿಯೇ ಜವರಾಯ ಮರಳಿ ಬಾರದ ಲೋಕಕ್ಕೆ ಅಪಹರಿಸಿಕೊಂಡು ಹೋಗಿದ್ದರಿಂದ ತಬ್ಬಲಿಯಾದ ಪತ್ನಿ ಶಾರದಮ್ಮ ಅವರ ದುಃಖದ ಮಡವಿನಲ್ಲಿ ಮುಳುಗಿದ್ದರು.

ಶಾಲೆಯ ಬಿಸಿಯೂಟಕ್ಕೆ ತರಕಾರಿ ಖರೀದಿಸಿ ಶಾಲೆಯಲ್ಲಿಟ್ಟು, ರಜೆ ಚೀಟಿ ಬರೆದಿಟ್ಟಿದ್ದ ಮಿಯಾಸಾಬ್ ಸ್ವಗ್ರಾಮದಲ್ಲಿ ಮೆಕ್ಕೆಜೋಳದ ಕಟಾವು ಮಾಡಿದ ಕೂಲಿ ಆಳಿನ ಹಣ ಪಾವತಿಸಲು ಹೋಗುವಾಗ ಸಾವಿನ ಮನೆ ಸೇರಿದರೆ, ಸೇವಂತಿಗೆ ಹೂವು ಮಾರಾಟ ಮಾಡಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದ ಚಿಕ್ಕಪ್ಪನೂ ಸಾವಿನ ಕದ ತಟ್ಟಿದ್ದಾರೆ. ಮೂರು ಕುಟುಂಬಗಳ ರೋದನ ಮುಗಿಲುಮುಟ್ಟಿತ್ತು.

‘ಹೆದ್ದಾರಿ ಈ ಸ್ಥಳವನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ. ರಸ್ತೆಯ ಬದಿಯಲ್ಲಿ ಮಲಿಯಮ್ಮ ದೇವಸ್ಥಾನ ಹಾಗೂ ಮರಗಳು ಇವೆ. ಹೀಗಾಗಿ, ಎರಡು ಬದಿಯಿಂದ ಸಂಚರಿಸುವ ವಾಹನಗಳ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕು. ಈ ಕುರಿತು ಇಲಾಖೆ ಸಹ ಎಚ್ಚರಿಕೆವುಳ್ಳ ಮುನ್ಸೂಚನೆ ಫಲಕ ಹಾಗೂ ರಾತ್ರಿ ಸಮಯದಲ್ಲಿ ಉಭಯ ಬದಿಯಲ್ಲಿ ಬ್ಲಿಂಕರ್‌ ಸೂಚನಾ ದೀಪ ಅಳವಡಿಸಿದೆ.

ಆದರೂ, ಚಾಲಕರ ಅಜಾಗರೂಕತೆಯಿಂದ ವಾಹನ ಚಲಿಸುವ ಪರಿಣಾಮ ಇಂಥ ಅವಘಡಗಳು ಸಂಭವಿಸುತ್ತಿವೆ. ಸುಗಮ ಸಂಚಾರ ಹಾಗೂ ಸಂಭವನೀಯ ಅಪಘಾತ ತಪ್ಪಿಸುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಪ್ರಕಾಶ್‌ ತಿಳಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರವಿನಾರಾಯಣ್‌, ಡಿವೈಎಸ್‌ಪಿ ಕೆ. ನಾಗರಾಜ್, ಸಿಪಿಐ ಎಂ.ಎನ್‌. ರುದ್ರಪ್ಪ ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT