ಹರಿಹರ: ತಾಲ್ಲೂಕಿನಲ್ಲಿ ಕೋಕೊ ಬೆಳೆಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳುವುದು. ತಾಳೆ ಬೆಳೆಯುವ ರೈತರಿಗೆ ಖರೀದಿದಾರರಿಂದ ಸಂಪೂರ್ಣ ಭರವಸೆ ದೊರಕಿಸುವುದು. 8 ಮತ್ತು 9ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆಗಳು ತಡವಾಗದಂತೆ ಕ್ರಮ ಕೈಗೊಳ್ಳುವುದು. ಮೀನು ಸಾಗಾಣಿಕೆಯ ಬಗ್ಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ದುರಸ್ತಿಗೊಳಿಸುವುದು. ಸರ್ಕಾರಿ ಆಸ್ಪತ್ರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಕ್ರಮಕ್ಕೆ ಸೂಚನೆ. ತಾಲ್ಲೂಕಿನಲ್ಲಿ ಬಾಲಕರ ವಸತಿನಿಲಯ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆ ಪ್ರಾರಂಭಿಸಿಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಟ್ಟಡವನ್ನು ಶೀಘ್ರವೇ ಉದ್ಘಾಟಿಸುವುದು. ಮಿನಿ ವಿಧಾನಸೌಧ ಕಟ್ಟಡ ಕಾಮಾಗಾರಿಗೆ ಚಾಲನೆ ನೀಡುವುದು.
-ಇವು ತಾ.ಪಂ. ಸಭಾಂಗಣದಲ್ಲಿ ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಮುಖ್ಯಾಂಶಗಳು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಪಿ. ರೇಖಾ ಮಾತನಾಡಿ, ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಕೋಕೊ ಬೆಳೆಯುವುದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ತಾಳೆ ಬೆಳೆಯಲು ಇಲಾಖೆಯಿಂದ ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು.
ಬಿ.ಪಿ. ಹರೀಶ್ ಮಾತನಾಡಿ, ತಾಲ್ಲೂಕಿನಲ್ಲಿ ತಾಳೆ ಬೆಳೆದು ಹಾಳಾದವರೇ ಹೆಚ್ಚು. ತಾಳೆ ಖರೀದಿಸುವ ಕಂಪೆನಿಯವರು ತಮಗೆ ಲಾಭವಾಗುವ ಸಂದರ್ಭದಲ್ಲಿ ಖರೀದಿಸುತ್ತಾರೆ. ನಷ್ಟ ಸಂಭವಿಸುವ ಸಂದರ್ಭದಲ್ಲಿ ಖರೀದಿ ನಿಲ್ಲಿಸುತ್ತಾರೆ. ತೆಂಗು, ಅಡಿಕೆ ಬೆಳೆಗೆ ಮುಕ್ತ ಮಾರುಕಟ್ಟೆ ಇದೆ. ಆದರೆ, ತಾಳೆಗೆ ಮುಕ್ತ ಮಾರುಕಟ್ಟೆ ಇಲ್ಲ. ಇದರಿಂದ ರೈತರು ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ರೈತರ ಹಾಗೂ ಕಂಪೆನಿ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ತಾಳೆಗೆ ಪ್ರೋತ್ಸಾಹ ನೀಡಿರಿ ಎಂದು ಸಲಹೆ ನೀಡಿದರು.
ಮೀನುಗಾರಿಕೆ ಇಲಾಖೆಯಿಂದ ಸಾಕಷ್ಟು ಯೋಜನೆಗಳು ಹಾಗೂ ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆಗಳಿವೆ. ತಾಲ್ಲೂಕಿನಲ್ಲಿ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಅರಿವು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತಾಲ್ಲೂಕಿನ ಜಿ.ಟಿ. ಕಟ್ಟೆ, ಮೂಗಿನಗೊಂದಿ, ಗೋವಿನಾಳು, ಕೋಣನತಲೆ ಪ್ರದೇಶದ ಕೆಲವು ರಸ್ತೆಗಳು ಹಾಳಾಗಿದ್ದು, ಅವುಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಅಧಿಕಾರಿಗಳಿಗೆ ಹೇಳಿದರು.
ವರ್ಷದಿಂದ ವರ್ಷಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ ಬಾಲಕರ ವಿದ್ಯಾರ್ಥಿನಿಲಯದ ಕೊರತೆಯಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯಗಳಿವೆ. ಬಾಲಕರ ವಿದ್ಯಾರ್ಥಿನಿಲಯ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆ ಆರಂಭಿಸಿಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಉತ್ತರಿಸಿದರು.
ಶೀಘ್ರದಲ್ಲೇ ಮಿನಿ ವಿಧಾನಸೌದಕ್ಕೆ ಕಾಮಗಾರಿಗೆ ಚಾಲನೆ ನೀಡುವಂತೆ ಇಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಸರೋಜಮ್ಮ ಶೇಖರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಎ.ಬಿ. ಸವಿತಾ, ಚಂದ್ರಶೇಖರಯ್ಯ ಮತ್ತಿತರರು ಹಾಜರ್ದ್ದಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.