ADVERTISEMENT

ದೇವರು ಹಿಂದಕ್ಕೆ ಕಳುಹಿಸುವ ಪೂಜೆ

ಹಳದಮ್ಮ ದೇವಿ ಭಕ್ತರ ವಿಶಿಷ್ಟ ಆಚರಣೆ

ಚನ್ನೇಶ ಬಿ.ಇದರಮನಿ
Published 18 ಮೇ 2013, 8:51 IST
Last Updated 18 ಮೇ 2013, 8:51 IST
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾದೇನಹಳ್ಳಿ ಗ್ರಾಮದ ಮುತ್ತೈದೆಯರು ಸೊರಟೂರು ಕ್ರಾಸ್ ಬಳಿ `ದೇವರನ್ನು ಹಿಂದಕ್ಕೆ ಕಳುಹಿಸುವ ವಿಶಿಷ್ಟ ಆಚರಣೆ'ಯಲ್ಲಿ ತೊಡಗಿರುವ ದೃಶ್ಯ.
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾದೇನಹಳ್ಳಿ ಗ್ರಾಮದ ಮುತ್ತೈದೆಯರು ಸೊರಟೂರು ಕ್ರಾಸ್ ಬಳಿ `ದೇವರನ್ನು ಹಿಂದಕ್ಕೆ ಕಳುಹಿಸುವ ವಿಶಿಷ್ಟ ಆಚರಣೆ'ಯಲ್ಲಿ ತೊಡಗಿರುವ ದೃಶ್ಯ.   

ಹೊನ್ನಾಳಿ: ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳ ಭಕ್ತರ ಆರಾಧ್ಯ ದೇವಿ.

ಪ್ರತಿ ಗುರುವಾರ, ಶುಕ್ರವಾರಗಳಂದು ದೇವಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಗುರುವಾರದಂದು ಮಧ್ಯಾಹ್ನವೇ ಮಾರಿಕೊಪ್ಪ ಗ್ರಾಮದ ದೇವಿಯ ಸನ್ನಿಧಿಗೆ ಆಗಮಿಸುವ ಭಕ್ತರು ತಮ್ಮ ಹರಕೆ ತೀರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾರೆ. ಎತ್ತಿನ ಗಾಡಿ, ಬೈಕ್‌ಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ಭಕ್ತರು ಆಗಮಿಸುತ್ತಾರೆ.

ದೇವಿಗೆ ಕುಂಕುಮಾರ್ಚನೆ ಸಹಿತ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಮೊಸರನ್ನದ ಎಡೆ ಅರ್ಪಿಸುತ್ತಾರೆ. ಇದಾದ ಬಳಿಕ ಮಾಂಸಾಹಾರದ ವಿಶೇಷ ಅಡುಗೆ ತಯಾರಿಸಿ, ಕ್ಷೇತ್ರದಲ್ಲಿನ ಚೌಡೇಶ್ವರಿ ಮತ್ತು ಭೂತೇಶ್ವರ ಸ್ವಾಮಿಗೆ ನೈವೇದ್ಯ ಸಮರ್ಪಿಸುತ್ತಾರೆ. ತರುವಾಯ ಎಲ್ಲರೂ ಸಾಮೂಹಿಕವಾಗಿ ಭೋಜನ ಸ್ವೀಕರಿಸುತ್ತಾರೆ. ಗುರುವಾರ ರಾತ್ರಿ ದೇವಿಯ ಸನ್ನಿಧಿಯಲ್ಲೇ ಉಳಿದುಕೊಳ್ಳುತ್ತಾರೆ.

ಶುಕ್ರವಾರ ಬೆಳಿಗ್ಗೆ ತಮ್ಮ ಗ್ರಾಮಗಳಿಗೆ ಹೊರಡುತ್ತಾರೆ. ಹೀಗೆ ತಮ್ಮ ಊರುಗಳಿಗೆ ತೆರಳುವ ಗ್ರಾಮಸ್ಥರು, ದಾರಿಯಲ್ಲಿ `ದೇವರನ್ನು ಹಿಂದಕ್ಕೆ ಕಳುಹಿಸುವ ವಿಶಿಷ್ಟ ಆಚರಣೆ' ನೆರವೇರಿಸುತ್ತಾರೆ.

ರಸ್ತೆಯ ಬದಿಯಲ್ಲಿ ಮಾರಿಕೊಪ್ಪದ ಹಳದಮ್ಮ ದೇವಸ್ಥಾನಕ್ಕೆ ಅಭಿಮುಖವಾಗಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸುತ್ತಾರೆ. ಜನರಿಗೆ ಪ್ರಸಾದ ವಿತರಿಸುತ್ತಾರೆ. ನಂತರ ತಮ್ಮ ಊರುಗಳಿಗೆ ಪ್ರಯಾಣ ಮುಂದುವರೆಸುತ್ತಾರೆ.

ಶುಕ್ರವಾರ ಬೆಳಿಗ್ಗೆ 6.45ರ ಸುಮಾರಿಗೆ ಮಾದೇನಹಳ್ಳಿ ಗ್ರಾಮದ ಮುತ್ತೈದೆಯರು ಸೊರಟೂರು ಕ್ರಾಸ್ ಬಳಿ `ದೇವರನ್ನು ಹಿಂದಕ್ಕೆ ಕಳುಹಿಸುವ ವಿಶಿಷ್ಟ ಆಚರಣೆ' ನಡೆಸಿದರು.

`ದೇವಿಗೆ ತಮ್ಮ ಕಿರು ಹರಕೆ ಸಲ್ಲಿಸುತ್ತೇವೆ. ತಮ್ಮನ್ನು ಅನವರತ ದೇವಿ ರಕ್ಷಿಸುತ್ತಾಳೆ' ಎಂದು ಗ್ರಾಮದ ಮಹಿಳೆ ಶಾಂತಮ್ಮ `ಪತ್ರಿಕೆ'ಗೆ ತಿಳಿಸಿದರು.
ಇಂದಿನ ಯಾಂತ್ರಿಕ, ವೇಗದ ಯುಗದಲ್ಲೂ ಭಕ್ತರು ಎತ್ತಿನ ಗಾಡಿಗಳಲ್ಲಿ ಮಾರಿಕೊಪ್ಪ ಗ್ರಾಮಕ್ಕೆ ಆಗಮಿಸಿ, ಹರಕೆ ಸಲ್ಲಿಸಿ, `ದೇವರನ್ನು ಹಿಂದಕ್ಕೆ ಕಳುಹಿಸುವ' ಆಚರಣೆಯಂತಹ  ವಿಶಿಷ್ಟ ಆಚರಣೆ ನಡೆಸಿಕೊಂಡು ಬರುತ್ತಿರುವುದು ಈ ನಾಡಿನ ಸಂಸ್ಕೃತಿಯ ಪ್ರತೀಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.