ADVERTISEMENT

ದೇಶೀಯ ಕರು ಸಾಕಣೆ ಸಹಾಯಧನ ಯೋಜನೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 10:45 IST
Last Updated 14 ಜನವರಿ 2012, 10:45 IST

ದಾವಣಗೆರೆ: ದೇಶೀಯ ತಳಿಗಳ ಕರು ಸಾಕಾಣಿಕೆಗೆ ಸಹಾಯಧನ ನೀಡಲು ರಾಜ್ಯ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು, ಸಮರ್ಪಕವಾಗಿ ಸಮೀಕ್ಷೆ ನಡೆಯದ ಕಾರಣ ಯೋಜನೆ ಆರಂಭದಲ್ಲೇ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ!

2011-12ನೇ ಸಾಲು ಈ ಯೋಜನೆಗೆ ಮೊದಲ ವರ್ಷವಾಗಿದ್ದು, ಅಮೃತ್‌ಮಹಲ್, ಹಳ್ಳಿಕಾರ್, ಕಿಲಾರ್, ದಿಯೋನ, ಕೃಷ್ಣವ್ಯಾಲಿ ತಳಿಗೆ ಸೇರಿದ ಗಂಡು ಕರುಗಳ ಸಾಕಾಣಿಕೆಗೆ ಸಹಾಯಧನ ನೀಡಲು ಸರ್ಕಾರ ಉದ್ದೇಶಿಸಿತ್ತು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಸಮೀಕ್ಷೆಯೇ ನಡೆದಿಲ್ಲ. ಈ ಕಾರಣಕ್ಕೆ ಯೋಜನೆಗೆ ಸ್ವಲ್ಪಮಟ್ಟಿನ ಹಿನ್ನಡೆ ಉಂಟಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.

ಅಳಿವಿನಂಚಿನಲ್ಲಿರುವ ದೇಶೀಯ ತಳಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಯೋಜನೆ ಸಹಕಾರಿ ಆಗಬೇಕಿತ್ತು. ದೇಶೀಯ ತಳಿಗಳು ಸಾಮಾನ್ಯವಾಗಿ ಕಂಡುಬರುವ ಮೂಲ ಪ್ರದೇಶದಿಂದ ಆಚೆಗೂ ಈ ತಳಿಗಳನ್ನು ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶಗಳಲ್ಲಿ ಒಂದು. ಸಮರ್ಪಕ ಸಮೀಕ್ಷೆ ನಡೆಯದ ಕಾರಣಕ್ಕೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ದೇಶೀಯ ತಳಿ ಸಾಕಿರುವ ರೈತರಿಗೆ ಸಹಾಯಧನ ಮಾತ್ರ ಕೈಸೇರಿಲ್ಲ.

ವ್ಯವಸಾಯಕ್ಕೆ ಯೋಗ್ಯ ತಳಿಯಾದ `ಅಮೃತ್‌ಮಹಲ್~ ಹೋರಿಯ ಮೂಲಸ್ಥಾನ ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ. `ಅಮೃತ್‌ಮಹಲ್~ ಗಂಡು ಕರುಗಳ ಮೈಬಣ್ಣ ಬೂದು, ಬಿಳಿ ಇಲ್ಲವೇ ಕಪ್ಪು. ಬಲಿಷ್ಠ ದೇಹ, ನೀಳ ತಲೆ, ಕಿರಿದಾದ ತಗ್ಗಿರುವ ಹಣೆ ಇರಬೇಕು, ಅದೇ `ಹಳ್ಳಿಕಾರ್~ ಹೋರಿಯ ಮೂಲಸ್ಥಾನ ಮಂಡ್ಯ, ತುಮಕೂರು ಜಿಲ್ಲೆ. ಇದೂ ಸಹ ವ್ಯವಸಾಯಕ್ಕೆ ಯೋಗ್ಯ ತಳಿ.  ಕರುಗಳು ಬೂದು ಬಣ್ಣದ ಶರೀರ, ಕಾಲುಗಳ ನಡುವೆ ಹಾಗೂ ಮುಖದಲ್ಲಿ ಬಿಳಿ ಗುರುತು ಇರುತ್ತದೆ. ಸಮೀಕ್ಷೆಗೆ ಬಂದಾಗ ಅಧಿಕಾರಿಗಳು ಹೀಗೆ ದೇಶೀಯ ತಳಿಗಳ ಕುರುಗಳನ್ನು ಪತ್ತೆ ಮಾಡುವಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸೂಚಿಸಿದೆ.

ಯೋಜನೆ ಏನು- ಎತ್ತ?: ಯೋಜನೆಯಲ್ಲಿ ದೇಶೀಯ ತಳಿಯ 3 ತಿಂಗಳ ಮೇಲ್ಪಟ್ಟು 1 ವರ್ಷದವರೆಗಿನ ಗಂಡು ಕರು ಹೊಂದಿದ ರೈತರು ಈ ಸೌಲಭ್ಯ ಪಡೆಯಲು ಅರ್ಹರು. ಜಿಲ್ಲೆಯಲ್ಲಿರುವ ದೇಶೀಯ ತಳಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗುರಿ ನಿಗದಿಪಡಿಸಲಾಗಿದೆ. ಮೇವು ಖನಿಜ ಮಿಶ್ರಣ, ವಿಮೆ, ಆರೋಗ್ಯ ರಕ್ಷಣೆಗೆ ತಗುಲುವ ವೆಚ್ಚ ರೂ 4,400 ಫಲಾನುಭವಿಯೇ ಭರಿಸಬೇಕು. ಸಮತೋಲನ ಆಹಾರಕ್ಕೆ ತಗಲುವ ವೆಚ್ಚ ರೂ 4,000 ಸಹಾಯಧನ ರೂಪದಲ್ಲಿ ಸರ್ಕಾರ ನೀಡುತ್ತದೆ. ಸಣ್ಣ ರೈತರು, ಅತಿಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಆದ್ಯತೆ. ಅದಕ್ಕಾಗಿ `ಅನುಷ್ಠಾನ ಸಮಿತಿ~ಯನ್ನು ಜಿಲ್ಲೆವಾರು ರಚಿಸಲಾಗಿದ್ದು, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಅಧ್ಯಕ್ಷರು, ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

`ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 86 ದೇಶೀಯ ಕರು ಸಾಕಾಣಿಕೆಗೆ ಸಹಾಯಧನ ನೀಡಲು ಗುರಿ ನಿಗದಿಪಡಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಮಾತ್ರ 86 ಕರುಗಳನ್ನೂ ಗುರುತಿಸಲಾಗಿದೆ. ಈಗಾಗಲೇ ಸರ್ಕಾರ ರೂ 3.40 ಲಕ್ಷದಲ್ಲಿ ರೂ 1.72 ಲಕ್ಷ ಅನುದಾನ ಬಿಡುಗಡೆ ಮಾಡಿದೆ~ ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಮಹೇಶ್ವರಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.