ADVERTISEMENT

ನಾಟಕ ಮನ ಮುಟ್ಟುವ ಕಲೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:20 IST
Last Updated 16 ಅಕ್ಟೋಬರ್ 2012, 9:20 IST

ದಾವಣಗೆರೆ: ನಾಟಕಗಳಲ್ಲಿ ಜೀವಂತಿಕೆ ಇದೆ. ಹೀಗಾಗಿ ಅದು ಜನಮುಟ್ಟುವ ಕಲೆ ಎಂದು ರಂಗಚಿಂತಕ ಪ್ರೊ.ಎಸ್.ಎಚ್. ಪಟೇಲ್ ಬಣ್ಣಿಸಿದರು.

ನಗರದ ಪಿ.ಬಿ. ರಸ್ತೆಯಲ್ಲಿರುವ ಕೆಬಿಆರ್ ಡ್ರಾಮಾ ಕಂಪೆನಿ ರಂಗಮಂದಿರದಲ್ಲಿ ಈಚೆಗೆ  ಜೇವರ್ಗಿಯ ಶ್ರೀಗುರು ವಿಶ್ವಾರಾಧ್ಯ ನಾಟ್ಯ ಸಂಘ ಹಾಕಿರುವ ನಾಟಕ ಕ್ಯಾಂಪ್ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಮನಸನ್ನು ನಾಟಕಗಳು ಮುಟ್ಟುವಷ್ಟು ನೇರವಾಗಿ ಸಿನಿಮಾಗಳು ಮುಟ್ಟುವುದಿಲ್ಲ. ಸಿನಿಮಾದಲ್ಲಿ ಕೇವಲ ಯಾಂತ್ರಿಕತೆ ಇರುತ್ತದೆ.

ಯಾರೋ ಎಲ್ಲೋ ಕುಳಿತು ಮಾಡಿದ ಚಿತ್ರವನ್ನು ಮತ್ತೊಬ್ಬರ ಮೂಲಕ ಪರದೆಯ ಮೇಲೆ ನಾವು ನೋಡುತ್ತೇವೆ. ಆದರೆ, ನಾಟಕದಲ್ಲಿ ಹೀಗಾಗುವುದಿಲ್ಲ. ಕಲಾವಿದರು ನೇರವಾಗಿ ಜನರ ಮುಂದೆ ಅಭಿನಯಿಸುತ್ತಾರೆ. ಹೀಗಾಗಿ ಅಲ್ಲಿ ಜೀವಂತಿಕೆ ಇರುತ್ತದೆ. ಅಂತೆಯೇ, ರಂಗಭೂಮಿ ಕಲಾವಿದರು ಜನಪ್ರಿಯವಾದಷ್ಟೂ ಜನರ ಮಧ್ಯೆಯೇ ಇರುತ್ತಾರೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಂದಿನ ಒತ್ತಡದ ಜೀವನದಿಂದ ಹೊರಬರಲು ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯ. ನಾಟಕಗಳನ್ನು ನೋಡಿದರೆ ಮನಸ್ಸು ಅರಳುತ್ತದೆ ಎಂದರು. ಪತ್ರಕರ್ತ ಬಿ.ಎಸ್. ಷಣ್ಮುಖಪ್ಪ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ, ರಂಗಚಿಂತಕ ಮಲ್ಲಿಕಾರ್ಜುನ ಕಡಕೋಳ, ಕಂಚಿಕೆರೆ ಶಿವಣ್ಣ, ನಾಟ್ಯ ಸಂಘದ ಮಾಲೀಕ ಅಯ್ಯಣ್ಣಸ್ವಾಮಿ ಹಿರೇಮಠ, ಗುರುಸಿದ್ದಯ್ಯ ಸ್ವಾಮಿ, ರಮೇಶ್, ಮೃತ್ಯುಂಜಯಸ್ವಾಮಿ ಪಾಲ್ಗೊಂಡಿದ್ದರು. ನಂತರ, `ಕಾಳಿಂಗಸರ್ಪ~ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT