ಹರಿಹರ: ‘ಇನ್‌ಫೋಸಿಸ್ ನಾರಾಯಣಮೂರ್ತಿಗೆ ಕನ್ನಡದ ಪ್ರೀತಿ ಇದ್ದರೆ, ಕನ್ನಡ ಭಾಷೆ ತಂತ್ರಜ್ಞಾನಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದರು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.ನಗರದ ಎಸ್‌ಜೆವಿಪಿ ಕಾಲೇಜಿನಲ್ಲಿ ಬುಧವಾರ ನಡೆದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ತಂತ್ರಜ್ಞಾನದ ಪ್ರಗತಿಯಿಂದ ಕನ್ನಡ ವಿಶ್ವ-ಕನ್ನಡ ಆಗುವ ಸಾಧ್ಯತೆ ಇದೆ. ಆದರೆ, ತಂತ್ರಜ್ಞಾನ ಕ್ಷೇತ್ರದ ಅಧಿಕಾರಸ್ಥರ ನಿರ್ಲಕ್ಷ್ಯದಿಂದ ಕನ್ನಡ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಸಾವಿರಾರು ವರ್ಷಗಳಷ್ಟು ಇತಿಹಾಸ ಹೊಂದಿದ ಭಾಷೆಯಲ್ಲಿ ವೈದ್ಯಕೀಯ ಮತ್ತು ತಂತ್ರಜ್ಞಾನ ಶಿಕ್ಷಣದ ಪಠ್ಯಪುಸ್ತಕಗಳು ತರ್ಜುಮೆಗೊಂಡಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಅಧಿಕಾರಸ್ಥರು ಬಳಸುವ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಬರುತ್ತದೆ. ಅಧಿಕಾರಸ್ಥರು ಆಂಗ್ಲ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಿ ಕನ್ನಡದ ಬಗ್ಗೆ ತಾತ್ಸಾರ ಮಾಡುತ್ತಿರುವುದರಿಂದ ಕನ್ನಡ ಭಾಷೆಗೆ ಗರ ಬಡಿದಿದೆ ಎಂದರು.
70ರ ದಶಕದಲ್ಲಿ ರೈತ, ದಲಿತ, ಬಂಡಾಯ ಹಾಗೂ ಸಾಹಿತ್ಯ ಚಳವಳಿಗಳು ಇತ್ತೀಚೆಗೆ ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ ಕುರಿತು ಪ್ರಶ್ನಿಸಿದ ಪತ್ರಕರ್ತ ಬಿ.ಎನ್. ಮಲ್ಲೇಶ್ ಅವರ ಪ್ರಶ್ನೆಗೆ, 70ರ ದಶಕದಲ್ಲಿ ಚಳವಳಿಗಳ ಮುಖಂಡರಿಗೆ ಸಮುದಾಯ ಕಾಳಜಿ, ಇತ್ತೀಚೆಗೆ ನಡೆಯುತ್ತಿರುವ ಚಳವಳಿಗಳ ಮುಖಂಡರ ವೈಯುಕ್ತಿಕ ಹಿತಾಸಕ್ತಿಗೆ ಸ್ಥಾನಪಲ್ಲಟಗೊಂಡಿದೆ. ಕಾರಣ, ಚಳವಳಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರಬಹುದು ಎಂದರು.
ಪ್ರಾಂಶುಪಾಲ ಎಚ್.ಎ. ಭಿಕ್ಷಾವರ್ತಿಮಠ, ಜಿ. ಸುರೇಶ ಗೌಡ, ಮುದೇನೂರು ನಿಂಗಣ್ಣ, ಸಿ.ವಿ. ಪಾಟೀಲ್, ಡಾ.ಎ.ಬಿ. ರಾಮಚಂದ್ರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.