ADVERTISEMENT

ನೀರಿನ ಕಂದಾಯ ಮುಂಗಡ ವಸೂಲಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 5:20 IST
Last Updated 9 ಅಕ್ಟೋಬರ್ 2012, 5:20 IST

ದಾವಣಗೆರೆ: ಆಶ್ರಯ ನಿವಾಸಿಗಳ ನೀರಿನ ಕಂದಾಯ ಮುಂಗಡ ಹಣ ವಸೂಲಿ ರದ್ದುಪಡಿಸಬೇಕು ಹಾಗೂ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಎಸ್‌ಒಜಿ ಕಾಲೊನಿಯ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಶಿವಯೋಗಿ ಮಂದಿರದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಮಿತಿಯ ಅಧ್ಯಕ್ಷ ಬಿ. ಕಲ್ಲೇಶಪ್ಪ ಅವರು ತಲೆಯ ಮೇಲೆ ಸೈಜುಗಲ್ಲು ಹೊರುವ ಮೂಲಕ ಪಾಲ್ಗೊಂಡು ಗಮನಸೆಳೆದರು.
ಆಶ್ರಯ ನಿವಾಸಿಗಳು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ.

ಮಕ್ಕಳ ವ್ಯಾಸಂಗಕ್ಕೆ ಖರ್ಚು ಸರಿದೂಗಿಸಲು ಹೆಣಗಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನೀರಿನ ಕಂದಾಯ ಮುಂಗಡ ಹಣ ವಸೂಲಿಗೆ ನಗರಪಾಲಿಕೆ ಮುಂದಾಗಿರುವುದು ಖಂಡನೀಯ. ನೀರನ್ನು ಖರೀದಿಸಿ ಕುಡಿಯುವಂತಹ ಸ್ಥಿತಿಯಲ್ಲಿ ನಾವಿಲ್ಲ. ಮುಂಗಡ ವಸೂಲಿ ನಿರ್ಧಾರ ಪಾಲಿಕೆ ಕೈಬಿಡಬೇಕು. ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರದಲ್ಲಿ 1,450 ಆಶ್ರಯ ಮನೆಗಳಲ್ಲಿ, 1,300 ಮನೆಗಳಲ್ಲಿ ಫಲಾನುಭವಿಗಳು ವಾಸವಿದ್ದಾರೆ. ಈ ಪೈಕಿ ಸಾವಿರ ಮನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಸಾಲ ಪಾವತಿಸಲಾಗಿದೆ. ಇದರಲ್ಲಿ ಶೇ 60ರಷ್ಟು ಮಂದಿಗೆ `ಆಧಾರ ಖುಲಾಸೆ ಪತ್ರ~ ನೀಡಲಾಗಿದೆ. ಉಳಿದವರಿಗೂ ಕೂಡಲೇ `ಆಧಾರ ಖುಲಾಸೆ ಪತ್ರ~ ವಿತರಿಸಬೇಕು ಎಂದು ಆಗ್ರಹಿಸಿದರು.

ನಂತರ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ತಿಮ್ಮಣ್ಣ, ಬಸವರಾಜ್, ಚಲುವರಾಜ್, ಬಸವನಗೌಡ, ಪಿ. ರವಿ, ಪ್ರಕಾಶ್ ಆಟೋ, ಪ್ರಕಾಶ್, ಮುಜೀಬ್‌ಖಾನ್, ಪ್ರಶಾಂತ, ಕಾಂತರಾಜ್, ಆಸೀಫ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.