ADVERTISEMENT

ಪಕ್ಷದ ಒಳಗಿನ ಪಿತೂರಿಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 6:15 IST
Last Updated 13 ಮಾರ್ಚ್ 2012, 6:15 IST

ದಾವಣಗೆರೆ: ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಪಕ್ಷದ ಒಳಗಿನ ಕೆಲವರಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲದಂತೆ ಆಗಿದೆ. ಈಚಿಗೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಅದು ಸಾಬೀತಾಗಿದೆ. ಅಧಿಕಾರದಲ್ಲಿ ಇದ್ದಾಗ ಒಳ್ಳೆಯ ಕೆಲಸ ಮಾಡದಿದ್ದರೆ ಜನತೆ ತಕ್ಕಪಾಠ ಕಲಿಸುತ್ತಾರೆ ಎನ್ನುವುದನ್ನು ಕಲಿಯಬೇಕಿದೆ. ಉತ್ತಮ ಕಾರ್ಯ ಮಾಡಿದ ಕೀರ್ತಿ ಗುಜರಾತ್ ನಂತರ ಕರ್ನಾಟಕಕ್ಕೆ ಸಲ್ಲುತ್ತದೆ. ಅಂತಹ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಲಾಭವಾಗಿಸಿಕೊಳ್ಳಲು ಪಕ್ಷದಲ್ಲಿಯೇ ಕೆಲವರು ಅಡ್ಡಗಾಲು ಹಾಕಿದ್ದಾರೆ. ಆಂತರಿಕ ಕಿತ್ತಾಟದಿಂದ ಇತರೆ ಪಕ್ಷಗಳು ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಈಗಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಬ್ಬರೂ ಒಳ್ಳೆಯ ಕೆಲಸ ಮಾಡಿದ ಕಾರಣ ರಾಜ್ಯದ ಜನತೆ ಬಿಜೆಪಿ ಬಗ್ಗೆ ಗೌರವ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಈಚೆಗೆ ನಿಧನರಾದ ವಿ.ಎಸ್. ಆಚಾರ್ಯ ಅವರನ್ನು ಸ್ಮರಿಸಿದರು.

ಆಚಾರ್ಯ ಅವರು ಉಡುಪಿ ಪುರಸಭೆಯಲ್ಲಿ ಮಾದರಿ ಆಡಳಿತ ನೀಡುವ ಮೂಲಕ ದೇಶಕ್ಕೆ ಕೀರ್ತಿ ತಂದರು. ಮಲ ಹೋರುವ ಪದ್ಧತಿ ನಿಷೇಧಿಸಿದ ಪ್ರಥಮ ಪುರಸಭೆ ಎಂಬ ಹೆಗ್ಗಳಿಕೆ ತಂದುಕೊಟ್ಟರು. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬಲಿಷ್ಠಗೊಳ್ಳಲು ಶ್ರಮಿಸಿದರು. ಅವರು ಅಜಾತಶತ್ರು, ಜನನಾಯಕರಾಗಿದ್ದರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮಂಗಳವಾರ ನಡೆಯಲಿರುವ ಮೇಯರ್, ಉಪ ಮೇಯರ್ ಚುನಾವಣೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ರಾಜೀನಾಮೆ ಕುರಿತು ಚರ್ಚಿಸಲಾಯಿತು.

ಪಕ್ಷದ ಜಿಲ್ಲಾ ಅಧ್ಯಕ್ಷ ಟಿ. ಗುರುಸಿದ್ದನಗೌಡ, ಕಾರ್ಯದರ್ಶಿ ಕಲ್ಲೇಶ್, ಕೃಷ್ಣರೆಡ್ಡಿ, ಮೇಯರ್ ಎಚ್.ಎನ್. ಗುರುನಾಥ್, `ದೂಡಾ~ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮತ್ತಿತರರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.