ADVERTISEMENT

ಪಾಸ್‌ಪೋರ್ಟ್ ಪಡೆಯಲು ಸರಳ ವಿಧಾನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 10:50 IST
Last Updated 5 ಫೆಬ್ರುವರಿ 2011, 10:50 IST

ದಾವಣಗೆರೆ: ವಿದೇಶಕ್ಕೆ ಹಾರಿಹೋಗುವವರಿಗೆ ಪಾಸ್‌ಪೋರ್ಟ್ ಪಡೆಯಲು ಸರಳ ವಿಧಾನ ಹೀಗಿದೆ. ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ದಾಖಲೆಗಳು: ವಯಸ್ಸಿನ ದಾಖಲೆ ಪತ್ರ(ಜನನ ಪ್ರಮಾಣಪತ್ರ(ಅಪ್ರಾಪ್ತರಾಗಿದ್ದಲ್ಲಿ), ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಶಾಲಾ ಮುಖ್ಯಸ್ಥರ ಪ್ರಮಾಣಪತ್ರ-ಇವುಗಳಲ್ಲಿ ಯಾವುದಾದರೂ ಒಂದು). ಅಪ್ರಾಪ್ತರಾಗಿದ್ದಲ್ಲಿ ತಂದೆ-ತಾಯಿಯ ಪಾಸ್‌ಪೋರ್ಟ್ ಪ್ರತಿ. ನಿಖರ ವಿಳಾಸದ ದಾಖಲೆ: ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ನೀಡುವ ವಿಳಾಸದ ದಾಖಲೆಗಳು ನಿಖರವಾಗಿರಬೇಕು. ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಆರು ತಿಂಗಳ ಹಿಂದಿನ ಮತ್ತು ಇಂದಿನ ಗ್ಯಾಸ್ ಬಿಲ್ ಅಥವಾ ಟೆಲಿಫೋನ್ ಬಿಲ್ -ಇವುಗಳ ಪೈಕಿ ಯಾವುದಾದರೂ ಒಂದು ದಾಖಲೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಒಂದು ತಿಂಗಳ ಬಳಿಕ ವಿಳಾಸ ಪರಿಶೀಲನೆಗಾಗಿ ಪೊಲೀಸರು ತಪಾಸಣೆಗೆ ಆಗಮಿಸುತ್ತಾರೆ.

ವಿವಾಹಿತ ಮಹಿಳೆಯಾಗಿದ್ದಲ್ಲಿ: ವಿವಾಹಿತರಾಗಿದ್ದಲ್ಲಿ ಪತಿ, ಪತ್ನಿಯ ಜತೆಯಾಗಿ ತೆಗೆಸಿರುವ ಭಾವಚಿತ್ರದೊಂದಿಗೆ ಅಫಿಡವಿಟ್ ಸಲ್ಲಿಸಬೇಕು. ವಿವಾಹ ನೋಂದಣಿಯಾಗಿದ್ದರೆ ಆ ದಾಖಲೆಯನ್ನೂ ಸಲ್ಲಿಸಬಹುದು. ಅನಕ್ಷರಸ್ಥರಾಗಿದ್ದರೆ ಅದಕ್ಕೂ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ವೈಯಕ್ತಿಕ ಪಾಸ್‌ಪೋರ್ಟ್‌ಗೆ 4.5x3.5 ಅಳತೆಯ ಭಾವಚಿತ್ರವನ್ನು ಬಿಳಿ ಹಿನ್ನೆಲೆಯಲ್ಲಿ ತೆಗೆಸಿ ಸಲ್ಲಿಸಬೇಕು. ಶುಲ್ಕ: ಜಿಲ್ಲಾ ಪ್ರಧಾನ ಅಂಚೆ ಕಚೇರಿಯಲ್ಲಿ ` 25 ಪಾವತಿಸಿ ಅರ್ಜಿ ಪಡೆಯಬೇಕು. ಅದನ್ನು ಸಂಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ, `1ಸಾವಿರ ಡಿಡಿಯನ್ನು ಪಾಸ್‌ಪೋರ್ಟ್ ಪ್ರಾಧಿಕಾರದ ಕಚೇರಿಗೆ ಬೆಂಗಳೂರಿನಲ್ಲಿ ಪಾವತಿಯಾಗುವಂತೆ (ಪಿಎಒ ಎಂಇಎ ಎಂದು ಡಿಡಿಯಲ್ಲಿ ಬರೆಯಬೇಕು) ಸಲ್ಲಿಸಬೇಕು.

15 ವರ್ಷ ಕೆಳಗಿನವರಾಗಿದ್ದಲ್ಲಿ ` 600 ಶುಲ್ಕವಿದೆ. ತ್ವರಿತವಾಗಿ ಪಾಸ್‌ಪೋರ್ಟ್ ಬೇಕಾದರೆ ತತ್ಕಾಲ್ ಸೇವೆಯಡಿ ` 1,500 ಪಾವತಿಸಿ ಬೇಗನೆ ಪಡೆದುಕೊಳ್ಳಬಹುದು. ಸಾಮಾನ್ಯ ವ್ಯವಸ್ಥೆಯಡಿ ಪಡೆಯಲು ಸುಮಾರು 6 ತಿಂಗಳು ತಗಲುತ್ತದೆ ಎಂದು ಜಿಲ್ಲಾ ಪ್ರಧಾನ ಅಂಚೆ ಕಚೇರಿ ಮೂಲಗಳು ತಿಳಿಸಿವೆ. ಒಮ್ಮೆ ಪಾಸ್‌ಪೋರ್ಟ್ ಪಡೆದರೆ ಅದರ ಅವಧಿ 10 ವರ್ಷ ಇರುತ್ತದೆ. ಅಪ್ರಾಪ್ತ ವಯಸ್ಸಿನವರಾಗಿದ್ದರೆ ಅದರ ಅವಧಿ 5 ವರ್ಷಗಳಾಗಿರುತ್ತವೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಧಾನ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ದಾವಣಗೆರೆ ಜಿಲ್ಲಾ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿದಿನ ಸರಾಸರಿ 10 ಅರ್ಜಿಗಳು ಪಾಸ್‌ಪೋರ್ಟ್‌ಗಾಗಿ ಬರುತ್ತಿವೆ. ರಾಜ್ಯದ ಪಾಸ್‌ಪೋರ್ಟ್ ಪ್ರಾಧಿಕಾರದ ಕಚೇರಿಯಲ್ಲಿ ಸುಮಾರು 60 ಸಾವಿರದಷ್ಟು ಅರ್ಜಿಗಳು ವಿಲೇವಾರಿ ಆಗಬೇಕಿದೆ ಎಂದು ಅಂಚೆ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.