ADVERTISEMENT

ಬಡ ವ್ಯಾಪಾರಸ್ಥರ ಮೇಲೆ ಗದಾಪ್ರಹಾರ ಸಲ್ಲ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 5:10 IST
Last Updated 7 ಅಕ್ಟೋಬರ್ 2012, 5:10 IST

ದಾವಣಗೆರೆ: ಮನಬಂದಂತೆ ಬಾಡಿಗೆ ಹೆಚ್ಚಿಸುವ ಮೂಲಕ ಬಡ ಸಣ್ಣ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವುದು ಸಲ್ಲದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ರೇಣುಕ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ನಗರಪಾಲಿಕೆ ಮಳಿಗೆಗಳ ಬಾಡಿಗೆದಾರರ ಸಂಘ ಉದ್ಘಾಟನೆ ಹಾಗೂ ಸಮಾವೇಶದಲ್ಲಿ ಅವರು ಮಾತನಾಡಿದರು.

ತಾವು ಹಾಗೂ ಪಂಪಾಪತಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ನಗರದಲ್ಲಿ ಮಳಿಗೆಗಳನ್ನು ನಿರ್ಮಿಸಿ, ಕಡಿಮೆ ಬಾಡಿಗೆ ನಿಗದಿಪಡಿಸುವ ಮೂಲಕ ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದೆವು. ಇಂದಿನ ಬಿಜೆಪಿ ಸರ್ಕಾರ ಒಂದು ಮಳಿಗೆಯನ್ನೂ ಕಟ್ಟಿಲ್ಲ. ಆದರೂ ಬಾಡಿಗೆ ಹೆಚ್ಚಿಸಲು ಮುಂದಾಗಿರುವುದು ಖಂಡನೀಯ ಎಂದರು.

ರೂ 1,300ರಿಂದ 1,800 ಇದ್ದ ಬಾಡಿಗೆ ಪಾಲಿಕೆ ರೂ 3 ಸಾವಿರಕ್ಕೆ ಹೆಚ್ಚಿಸಿರುವುದು ಖಂಡನೀಯ. ಬೇಕಿದ್ದರೆ, ಶೇ 15ರಷ್ಟು ಏರಿಸಲಿ. ಏಕಾಏಕಿ ದ್ವಿಗುಣಗೊಳಿಸುವುದು ಸರಿಯಲ್ಲ. ಸಂಘಟನೆ ಇದನ್ನು ವಿರೋಧಿಸಬೇಕು. ಈ ಕುರಿತ ಹೋರಾಟಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದರು.

ಕಾರ್ಮಿಕ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿದರು.ಸಂಘದ ಅಧ್ಯಕ್ಷ ಎಂ. ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ, ನಗರಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಪಾಲಿಕೆ ಸದಸ್ಯ ಕೆ.ಜಿ. ಶಿವಕುಮಾರ್, ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್, ಮಿಲ್ಲತ್ ವಿದ್ಯಾಸಂಸ್ಥೆ ಅಧ್ಯಕ್ಷ ಸೈಯದ್ ಸೈಫುಲ್ಲಾ, ಪಾಲಿಕೆ ಮಳಿಗೆಗಳ ಬಾಡಿಗೆದಾರರ ಸಂಘದ ಕಾರ್ಯದರ್ಶಿ ಎಚ್. ನಾಗರಾಜ್, ಎಚ್.ಎಂ. ನಿಜಗುಣ ಸ್ವಾಮಿ, ಸಂಚಾಲಕರಾದ ಪಿ. ನಾಗಭೂಷಣ ತೌಡೂರು, ಬಿ.ವಿ. ರಾಜಶೇಖರ ಪಾಲ್ಗೊಂಡ್ದ್ದಿದರು.

ನಗರಪಾಲಿಕೆ ಮಳಿಗೆಗಳ ಬಾಡಿಗೆ ಹೆಚ್ಚಳ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಹಾಗೂ ಹೆಚ್ಚುವರಿ ಠೇವಣಿ ಹಣ ಕಟ್ಟಿಸಿಕೊಳ್ಳುವುದನ್ನು ಕೈಬಿಡಬೇಕು ಎಂದು ಸಭೆ ಒತ್ತಾಯಿಸಿತು.ಇದಕ್ಕೂ ಮುನ್ನ ಸಂಘದ ಸದಸ್ಯರು, ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಿದ್ದ `ಕರ್ನಾಟಕ ಬಂದ್~ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ್ದ್ದಿದರು.

ಪರಾಮರ್ಶಿಸಬೇಕಿತ್ತು...
ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಬಿಡಬೇಕು ಎಂದು ನಿರ್ದೇಶನ ನೀಡುವ ಮುನ್ನ, ಕೇಂದ್ರ ಸರ್ಕಾರ ಹಾಗೂ ನದಿ ನೀರು ಪ್ರಾಧಿಕಾರ ರಾಜ್ಯದಲ್ಲಿನ ವಸ್ತುಸ್ಥಿತಿ ಪರಾಮರ್ಶಿಸಬೇಕಿತ್ತು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಕಾವೇರಿ ನೀರು ನಮ್ಮ ಜನರ ಹಕ್ಕು. ನಮಗೇ ನೀರಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಇದನ್ನು ಎಲ್ಲರೂ ಬೆಂಬಲಿಸಬೇಕು. ಈ ಸಂಬಂಧ ನಡೆಯುವ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.