ADVERTISEMENT

ಬದುಕಿಗೆ ಸ್ಪಷ್ಟ ಗುರಿ ಇರಲಿ: ಐಜಿಪಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 5:55 IST
Last Updated 25 ಜನವರಿ 2012, 5:55 IST

ದಾವಣಗೆರೆ: ಬದುಕಿನ ಗುರಿ ಸ್ಪಷ್ಟವಾಗಿರಬೇಕು. ಅಂತಹ ಗುರಿ ಇಟ್ಟುಕೊಂಡು ಕೆಲಸ ಮಾಡಿದವರು ನೇತಾಜಿ ಸುಭಾಷ್‌ಚಂದ್ರ ಬೋಸ್. ಈ ಕಾರಣವಾಗಿಯೇ ಅವರು ಮಾದರಿಯಾಗಿದ್ದಾರೆ ಎಂದು ಪೂರ್ವ ವಲಯ ಮಾಹಾನಿರ್ದೇಶಕ ಸಂಜಯ್ ಸಹಾಯ್ ತಿಳಿಸಿದರು.

ನಗರದ ಕಾರ್ಯನಿರತ ಮಹಿಳೆಯರ ವಸತಿ ಗೃಹ `ಸ್ನೇಹಾಲಯ~ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಮತ್ತು ಸ್ನೇಹಾಲಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಭಾಷ್‌ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕೆ ಕ್ರಾಂತಿಯ ಮೂಲಕ ಹೋರಾಟ ಮಾಡಿದರು. ಆದರೆ, ಆ ಹೋರಾಟದಲ್ಲಿ ಪ್ರಜಾಪ್ರಭುತ್ವದ ಕಳಕಳಿ ಇತ್ತು.  ದೇಶ ಭಕ್ತಿ ಎಂದರೆ ಕೇವಲ ಯುದ್ಧಭೂಮಿಯಲ್ಲಿ ಹೋರಾಟ ಮಾಡುವುದಲ್ಲ. ದೇಶದಲ್ಲಿ ಪ್ರತಿಯೊಬ್ಬರು ಅವರವರ ಕೆಲಸನ್ನು ನಿಷ್ಠೆಯಿಂದ ಮಾಡುವುದು ದೇಶಭಕ್ತಿ. 21ನೇ ಶತಮಾನದಲ್ಲಿ ಜಗತ್ತು ಒಂದು ಹಳ್ಳಿಯಾಗಿ ರೂಪುಗೊಂಡಿದೆ. ಇದಕ್ಕೆ ಪೂರಕವಾಗಿ ನಾವು ನಡೆಯಬೇಕು. ಅಮೆರಿಕದ ಮೇಲೆ ಒಸಮಾ ಬಿನ್ ಲಾಡೆನ್ ದಾಳಿ ಮಾಡಿದಾಗ ಇಡೀ ದೇಶದ ಮಿಲಿಟರಿಯಲ್ಲಿ ಭದ್ರತೆ ಬಿಗಿಗೊಳಿಸುವಲ್ಲಿ ಅವರು ಸಿದ್ಧರಾದರು. ಅವರ ಮುಂದೆ ಅಂತಹ ಸ್ಪಷ್ಟ ಗುರಿ ಇತ್ತು ಎಂದು ಹೇಳಿದರು.

ಸ್ನೇಹಾಲಯ ಸಂಸ್ಥೆ ಭಕ್ತಿ ಮೂಡಿಸುವಂತ ಕೆಲಸ ಮಾಡಿರುವುದು ಆಶದಾಯಕ. ಇದು ಇತರ ಸಂಸ್ಥೆಗಳಿಗೆ ಮಾದರಿಯಾಗಬೇಕು. ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ  ಅಕ್ಟೋಬರ್ 21ರಂದು ಇಲಾಖೆಯಲ್ಲಿ ಮಡಿದವರಿಗೆ ನಮನ ಸಲ್ಲಿಸಲಾಗುತ್ತದೆ.  ನಗರದಲ್ಲಿ ಮುಂದಿನ ತಿಂಗಳು 22ರಿಂದ 24ರ ವರಗೆ ರಾಷ್ಟ್ರೀಯಮಟ್ಟದ ವಿಚಾರ ಸಂಕಿರಣ ನಡೆಸಲಾಗುವುದು ಎಂದು ತಿಳಿಸಿದರು.

ಹುತಾತ್ಮರಾದ ವೀರಯೋಧ ಅಂಜನಪ್ಪರ ನೆನಪಿಗೆ ಅವರ ತಾಯಿ ಗಿರಿಜಮ್ಮ ಮತ್ತು ತಂದೆ ಹನುಮಂತಪ್ಪ ಅವರನ್ನು ಗೌರವಿಸಲಾಯಿತು.
ಚಂದ್ರಮತಿ ಡಾ.ಶಂಕರ್, ಪ್ರಾಂಶುಪಾಲರಾದ ಪುಟ್ಟಮ್ಮ ಮಹಾರುದ್ರಯ್ಯ, ದೊಗ್ಗಳ್ಳಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.