ADVERTISEMENT

ಬದುಕಿನ ನೆರವಿಗೆ ಅಂಗವಿಕಲರ ಮೊರೆ

ಕೆಂಚಪ್ಪ, ಬಸವರಾಜಪ್ಪ ಅವರ ದಯನೀಯ ಬದುಕು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:13 IST
Last Updated 17 ಡಿಸೆಂಬರ್ 2013, 8:13 IST

ಮಾಯಕೊಂಡ: ಮೈ, ಕೈ ಗಟ್ಟಿ ಮುಟ್ಟಾಗಿದ್ದರೂ ಕಾಲು ಇಲ್ಲ, ದುಡಿಯುವ ಉತ್ಸಾಹ ಇದ್ದರೂ ನೆರವು ಇಲ್ಲ, ಟ್ರೈಸಿಕಲ್್ ಕೂಡಾ ನೀಡದ ಇಲಾಖೆ, ಸ್ವಂತ ನಿವೇಶನ ಹೊಂದಿಲ್ಲ ಎಂದು ಮನೆಯನ್ನೂ ಮಂಜೂರು ಮಾಡದ ಗ್ರಾಮ ಪಂಚಾಯ್ತಿಗಳಿಗೆ ಹಿಡಿ ಶಾಪ ಹಾಕುತ್ತಾ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಅಂಗವಿಕಲರಾದ ಕೆಂಚಪ್ಪ ಮತ್ತು ಬಸವರಾಜಪ್ಪ ಅವರ ದಯಾನೀಯ ಸ್ಥಿತಿ ಮನಕಲಕುತ್ತದೆ.

ಸರ್ಕಾರ, ಸಂಘ, ಸಂಸ್ಥೆಗಳು, ಅಂಗವಿಕಲರ ಕಲ್ಯಾಣ ಕುರಿತು ದೊಡ್ಡ ದೊಡ್ಡ ಭಾಷಣ ಬಿಗಿಯುತ್ತಿರುವಾಗ, ಕೆಲ ಪ್ರಭಾವಿಗಳ ಬೆಂಬಲಿಗರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ಸಿಗುತ್ತಿದ್ದು, ಬಡವರಿಗೆ ಸರ್ಕಾರಿ ಸೌಲಭ್ಯಗಳು ಮರೀಚಿಕೆ ಎಂಬುದಕ್ಕೆ ಇವರೇ ನಿದರ್ಶನವಾಗಿದ್ದಾರೆ.

ಸಮೀಪದ  ಹೆಬ್ಬಾಳು ಗ್ರಾಮದ  ಕೆಂಚಪ್ಪ ಮತ್ತು ಬಸವರಾಜಪ್ಪ ವಿವಿಧ ಕಾರಣಗಳಿಂದ ಕಾಲು ಕಳೆದುಕೊಂಡವರು. ಹೆಬ್ಬಾಳಿನಲ್ಲಿ ಟ್ರ್ಯಾಕ್ಟರ್್ ಚಾಲಕರಾಗಿ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದ  ಕೆಂಚಪ್ಪನ ಕಾಲಿಗೆ ಆಕಸ್ಮಿಕ ಗಾಯವಾಗಿ, ಗ್ಯಾಂಗ್ರೀನ್‌ ನಿಂದಾಗಿ ಕಾಲು ಕತ್ತರಿಸಬೇಕಾಯಿತು.

ಬಸವರಾಜಪ್ಪ ಅವರು ಸಹ ಅಪಘಾತದಲ್ಲಿ ಕಾಲು ಗಾಯ ಮಾಡಿಕೊಂಡು ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲು ಕಳೆದುಕೊಂಡಿದ್ದಾರೆ. ಇದೀಗ ಎರಡೂ ಕುಟುಂಬ ಬೀದಿಗೆ ಬಿದ್ದಿವೆ. ಕೆಂಚಪ್ಪನ ಪತ್ನಿಗೆ ಕ್ಷಯ ರೋಗ ಬಾಧಿಸುತ್ತಿದ್ದು, ಒಪ್ಪತ್ತಿನ ಗಂಜಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಸವರಾಜಪ್ಪನ ಮಕ್ಕಳಿಗೆ ಸರ್ಕಾರದ ಯಾವ ಸೌಲಭ್ಯ ದೊರೆಯದ ಕಾರಣ ಅವರ ವಿದ್ಯಾಭ್ಯಾಸ ಮೊಟಕುಗೊಂಡಿದೆ.

ಇವರು ಗೂಡಿನಂಥ ಮನೆಯಲ್ಲಿ ಅಕ್ಷರಶಃ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಸ್ವಾಭಿಮಾನದ ಬದುಕು ಸಾಗಿಸುವ ಶಕ್ತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇವರಿಗೆ ನೆರವಾಗಿಲ್ಲ. ಪಡಿತರ ಚೀಟಿ ಮಾತ್ರ ಜೀವನಕ್ಕೆ ಆಧಾರ. ಅಂಗವಿಕಲರ ವೇತನವೂ ಸಹ ದೊರಕಿಲ್ಲ. ಟ್ರೈಸಿಕಲ್್ ಇಲ್ಲದ ಕಾರಣ ಓಡಾಡಲು ಹರಸಾಹಸ ಪಡಬೇಕಿದೆ. ಪ್ರಸ್ತುತ ಗ್ರಾಮದ ಟೋಲ್್ ಸೆಂಟರ್್ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ.

ಸಹಕರಿಸಿರಿ...:  ‘ಗ್ರಾಮ ಪಂಚಾಯ್ತಿಯವರು ನಿವೇಶನ ಇದ್ದರೆ ಮನೆ ಮಂಜೂರು ಮಾಡುತ್ತೇವೆ ಎನ್ನುತ್ತಾರೆ. ಆದರೆ, ನಮ್ಮ ಹತ್ತಿರ ನಿವೇಶನ ಇಲ್ಲ. ಜೀವನ ಮಾಡಲಿಕ್ಕೆ ಜಮೀನು ಇಲ್ಲಾ, ದುಡಿಯಲಿಕ್ಕೆ ಶಕ್ತಿ ಇದೆ. ಆದರೆ, ಯಾರೂ ಸಾಲ ಕೊಡುತ್ತಿಲ್ಲ, ಆಧಾರ ಕೇಳುತ್ತಾರೆ. ಟ್ರೈಸಿಕಲ್‌ಗೆ ಹಲವು ಬಾರಿ ಅಂಗವಿಕಲರ ಇಲಾಖೆಗೆ ಅರ್ಜಿ ಹಾಕಿದರೂ ಮಂಜೂರು ಮಾಡಿಲ್ಲ.  ನಮಗೆ ಆಶ್ರಯ ಮನೆ ಮತ್ತು ಟ್ರೈಸಿಕಲ್್ ಹಾಗೂ ಕೃತಕ ಕಾಲು ಮಂಜೂರು ಮಾಡಿಸಲು ಸಂಘ–ಸಂಸ್ಥೆಗಳು ಮತ್ತು  ದಾನಿಗಳು  ಸಹಕರಿಸಬೇಕು’ ಎಂದು ಕೆಂಚಪ್ಪ ಮತ್ತು ಬಸವರಾಜಪ್ಪ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.