ADVERTISEMENT

ಬರದಲ್ಲೂ ಖುಷಿ ತಂದ ಟೊಮೆಟೊ ಕೃಷಿ

ಸಿದ್ಧನಮಠ ಗ್ರಾಮದ ರೈತ ಮಲ್ಲಿಕಾರ್ಜುನ್ ಸಾಧನೆ

ಕೆ.ಎಸ್.ವೀರೇಶ್ ಪ್ರಸಾದ್
Published 13 ಜುಲೈ 2017, 4:55 IST
Last Updated 13 ಜುಲೈ 2017, 4:55 IST
ಬರದಲ್ಲೂ ಖುಷಿ ತಂದ ಟೊಮೆಟೊ ಕೃಷಿ
ಬರದಲ್ಲೂ ಖುಷಿ ತಂದ ಟೊಮೆಟೊ ಕೃಷಿ   

ಸಂತೇಬೆನ್ನೂರು: ಕೇವಲ ಒಂದು ಎಕರೆ ಕೃಷಿ ಭೂಮಿಯಲ್ಲಿಯೇ ಟೊಮೆಟೊ ಬೆಳೆದು ಸೈ ಅನಿಸಿಕೊಂಡವರು ಸಮೀಪದ ಸಿದ್ಧನಮಠ ಗ್ರಾಮದ ರೈತ ಮಲ್ಲಿಕಾರ್ಜುನ್.
ಒಂದು ವರ್ಷದಲ್ಲಿ ಟೊಮೆಟೊ ಕೃಷಿಯಲ್ಲಿ ₹ 10 ಲಕ್ಷದಷ್ಟು ಲಾಭ ಕಂಡಿದ್ದಾರೆ. 2 ಕೊಳವೆಬಾವಿಗಳಿಂದ ಕೇವಲ ಒಂದು ಇಂಚು ನೀರು ಸಿಗುತ್ತಿದೆ. ಹನಿ ನೀರಾವರಿ ಬಳಸಿ ಅವರು ಟೊಮೆಟೊ ಸಸಿಗಳನ್ನು ಬೆಳೆಸಿದ್ದಾರೆ. ಎರಡು ದಿನಗಳಿಗೊಮ್ಮೆ 3 ಗಂಟೆ ನೀರು ಒದಗಿಸಿ ಸಮೃದ್ಧ ಇಳುವರಿ  ಪಡೆದಿದ್ದಾರೆ. ಬರಗಾಲದಲ್ಲಿ ಅಂತರ್ಜಲ ಕುಸಿತದಿಂದ ನಲುಗಿದ ರೈತರಿಗೆ ಮಾದರಿ ಇವರು.

‘ಕಳೆದ ಮಾರ್ಚ್‌ ತಿಂಗಳಲ್ಲಿ ಅಭಿಲಾಷ ಎಂಬ ತಳಿಯ ಸಸಿ ನಾಟಿ ಮಾಡಲಾಗಿತ್ತು. ಮೇ 10ರಿಂದ ಕಟಾವು ಆರಂಭಿಸಲಾಗಿದೆ.  ಎರಡು ದಿನಕ್ಕೊಮ್ಮೆ ಸರಾಸರಿ 30 ಬಾಕ್ಸ್‌ ಟೊಮೆಟೊ ಕೊಯ್ಲು ಸಿಗುತ್ತಿದೆ. 1 ಬಾಕ್ಸ್‌ನಲ್ಲಿ 25 ಕೆ.ಜಿ. ಟೊಮೆಟೊ ತುಂಬಿಸಲಾಗುತ್ತಿದೆ. ಆರಂಭದಲ್ಲಿ ₹ 100ಕ್ಕೆ ಒಂದು ಬಾಕ್ಸ್‌ ಮಾರಾಟ ಮಾಡಲಾಗುತ್ತಿತ್ತು.

ಆಮೇಲೆ ಧಾರಣೆ ನಿರಂತರ ಹೆಚ್ಚಾಯಿತು. ಜೂನ್ ಅಂತ್ಯಕ್ಕೆ ₹ 500ರಿಂದ 1 ಸಾವಿರ ತಲುಪಿತ್ತು. ಪ್ರಸ್ತುತ ಗುಣಮಟ್ಟ ಆಧರಿಸಿ ₹ 1400ರವರೆಗೆ ಧಾರಣೆ ಇದೆ. ಸದ್ಯ ವಾರಕ್ಕೆ 100 ಬಾಕ್ಸ್‌ ಟೊಮೆಟೊ ಮಾರಾಟದಿಂದ ₹ 1ಲಕ್ಷದವರೆಗೆ ಲಭಿಸುತ್ತಿದೆ. ಪ್ರಸ್ತುತ 1 ಕೆ.ಜಿ. ಟೊಮೆಟೊ ದರ ₹ 60ರಿಂದ ₹ 80ರವರೆಗೆ ಇದೆ. ಸಂತೆಗೆ ತೆರಳಿ ನೇರ ಮಾರುಕಟ್ಟೆ ಕಂಡುಕೊಂಡಿರುವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಟೊಮೆಟೊ ಬೆಳೆಗೆ 4 ಅಡಿಗಳ ಅಂತರದ ಸಾಲು ಮಾಡಲಾಗಿದೆ. ಮರದ ಗೂಟಗಳಿಗೆ ತಂತಿ ಬಿಗಿದು ಸಸಿಗಳಿಗೆ ಆಧಾರ ನೀಡಲಾಗಿದೆ. ಒಂದೂವರೆ ಅಡಿ ಅಂತರದಲ್ಲಿ ಸಸಿ ನಾಟಿ ಮಾಡಲಾಗಿದೆ.

ಒಂದು ಎಕರೆ ಜಮೀನಿನಲ್ಲಿ 7 ಸಾವಿರ ಸಸಿಗಳನ್ನು ಪೋಷಿಸಲಾಗಿದೆ. ಆರಂಭದಲ್ಲಿ ಇಳುವರಿ ಪ್ರಮಾಣ ಅಧಿಕ. ಹಂತ ಹಂತವಾಗಿ ಇಳುವರಿ ಕುಂಠಿತವಾಗುತ್ತದೆ. ಇದುವರೆಗೆ 900 ಬಾಕ್ಸ್ ಟೊಮೆಟೊ ಮಾರಾಟ ಮಾಡಲಾಗಿದೆ. ಇನ್ನುಳಿದ ದಿನಗಳಲ್ಲಿ 600 ಬಾಕ್ಸ್‌ ಸಿಗಲಿದೆ.

ಇದುವರೆಗೆ ನಿರ್ವಹಣೆಗೆ ₹ 2 ಲಕ್ಷ ಖರ್ಚು ಮಾಡಲಾಗಿದೆ. ಅಸ್ಥಿರ ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಲಾಭ ಗಳಿಕೆಯತ್ತ ಯೋಚಿಸಿ ಯಶಸ್ಸು ಕಂಡಿರುವೆ’ ಎನ್ನುವುದು ಅವರ ಅನುಭವದ ಮಾತು.

ಮಳೆ ಕೊರತೆಯ ದಿನಗಳಲ್ಲಿ ರೋಗ ಬಾಧೆ ಹೆಚ್ಚು. ಸೂಕ್ತ ಔಷಧಗಳ ಸಿಂಪಡಣೆಯಿಂದ ಹತೋಟಿಯಲ್ಲಿಡ ಲಾಗಿದೆ. ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಲಾಗಿದೆ. ಔಷಧ ಗೊಬ್ಬರ ವ್ಯಾಪಾರಿಗಳ ಸಲಹೆ ಪಡೆಯಲಾಗಿದೆ. ಇನ್ನೂ ಅರ್ಧ ಎಕರೆಗೆ ವಿಸ್ತರಣೆ ಮಾಡಲಾಗಿದೆ. ದರ ಸ್ಥಿರತೆಯ ಕುರಿತು ಸದಾ ಆತಂಕ ಇದೆ ಎನ್ನುತ್ತಾರೆ ಮಲ್ಲಿಕಾರ್ಜುನ. ಸಂಪರ್ಕಿಸಬೇಕಾದ ಮೊಬೈಲ್: 73533 47676.

***

ಅಧಿಕ ಪ್ರಮಾಣದ ಕೊಟ್ಟಿಗೆ ಗೊಬ್ಬರ ಬಳಸಿದ ಪರಿಣಾಮ ಯಥೇಚ್ಛ ಇಳುವರಿ ಬರುತ್ತಿದೆ.
–ಕೆ.ಕೆ.ಮಲ್ಲಿಕಾರ್ಜುನ್‌,  ಸಿದ್ಧನಮಠದ ಟೊಮೆಟೊ ಕೃಷಿಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.