ADVERTISEMENT

ಬಿಜೆಪಿ ಬಂಡಾಯಗಾರರಿಗೆ ಅನ್ಯ ಪಕ್ಷಗಳ ಮಣೆ

ಟಿಕೆಟ್‌ ಗೊಂದಲ: ಬಸವರಾಜ್‌ ನಾಯ್ಕ ಜೆಡಿಯುಗೆ, ಕೊಟ್ರೇಶ್‌ ಜೆಡಿಎಸ್‌ಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:11 IST
Last Updated 25 ಏಪ್ರಿಲ್ 2018, 9:11 IST

ದಾವಣಗೆರೆ: ಜಿಲ್ಲೆಯಲ್ಲಿ ಬಿಜೆಪಿ ಬಂಡಾಯಗಾರರಿಗೆ ಜೆಡಿಯು ಹಾಗೂ ಜೆಡಿಎಸ್‌ ಮಣೆ ಹಾಕಿವೆ. ಟಿಕೆಟ್‌ ಸಿಗದೆ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಮಾಜಿ ಶಾಸಕ ಎಂ. ಬಸವರಾಜ್‌ ನಾಯ್ಕ ಹಾಗೂ ಮುಖಂಡ ಎನ್‌. ಕೊಟ್ರೇಶ್‌ ಅವರಿಗೆ ಕ್ರಮವಾಗಿ ಜೆಡಿಯು ಹಾಗೂ ಜೆಡಿಎಸ್‌ ಟಿಕೆಟ್‌ ಸಿಕ್ಕಿದೆ.

ಬಸವರಾಜ್‌ ನಾಯ್ಕ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಕೊಟ್ರೇಶ್, ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಬಯಸಿದ್ದರು. ಪಕ್ಷ ಇವರಿಬ್ಬರಿಗೂ ಕೊನೆಗಳಿಗೆಯಲ್ಲಿ ಟಿಕೆಟ್‌ ನಿರಾಕರಿಸಿತು. ಇದರಿಂದ ಸಿಟ್ಟಿಗೆದ್ದ ಇವರಿಬ್ಬರ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು. ಪಕ್ಷದ ವರಿಷ್ಠರ ವಿರುದ್ಧವೇ
ವಾಗ್ದಾಳಿ ನಡೆಸಿದ್ದರು. ಎಲ್ಲವೂ ಬೆಂಬಲಿಗರ ನಿರ್ಧಾರದಂತೆ ನಮ್ಮ ನಡೆ ಎಂದು ಹೇಳಿ ಈಗ ಅನ್ಯ ಪಕ್ಷಗಳ ಟಿಕೆಟ್‌ ಪಡೆದು ಕೊನೆಯ ದಿನವಾದ ಮಂಗಳವಾರ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ.

ಮಾಯಕೊಂಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನ ಇನ್ನೊಬ್ಬ ಪ್ರಬಲ ಆಕಾಂಕ್ಷಿ ಎಚ್‌. ಆನಂದಪ್ಪ ಅವರೂ ಬಂಡಾಯದ ಬಾವುಟ ಬೀಸಿದ್ದಾರೆ. ಕಳೆದ ಚುನಾವಣೆಯಂತೆ ಈ ಬಾರಿಯೂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ಬಸವರಾಜ್ ನಾಯ್ಕ ಮೂಲ ಕಾಂಗ್ರೆಸಿಗರು. 2009ರ ಚುನಾವಣೆ ವೇಳೆಯಲ್ಲಿ ಬಸವರಾಜ್‌ ನಾಯ್ಕ ಅವರನ್ನು ಎಸ್‌.ಎ. ರವೀಂದ್ರನಾಥ್‌ ಪಕ್ಷಕ್ಕೆ ಕರೆದುಕೊಂಡು ಬಂದು ಟಿಕೆಟ್‌ ಕೊಡಿಸಿ, ಗೆಲ್ಲಿಸಿಯೂ ಬಿಟ್ಟರು. ಅಲ್ಲಿಂದ ರವೀಂದ್ರನಾಥ್‌ ಅವರಿಗೆ ನಿಷ್ಠರಾಗಿದ್ದ ಬಸವರಾಜ್‌ ನಾಯ್ಕ 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸೋತಿದ್ದರು. ಈ ಚುನಾವಣೆಯಲ್ಲೂ ಆಕಾಂಕ್ಷಿಯಾಗಿದ್ದರು. ಪಕ್ಷ ಈಗ ಯಡಿಯೂರಪ್ಪ ಜತೆ ಗುರುತಿಸಿಕೊಂಡಿದ್ದ ಹಾಗೂ ಕೆಜೆಪಿಯಿಂದ ಸ್ಪರ್ಧಿಸಿದ್ದ ಪ್ರೊ.ಲಿಂಗಣ್ಣ ಅವರಿಗೆ ಟಿಕೆಟ್‌ ನೀಡಿದೆ. ಇದರಿಂದ ಅಸಮಾಧಾನಗೊಂಡ ಬಸವರಾಜ್‌ ನಾಯ್ಕ ಜೆಡಿಎಸ್‌ನಿಂದ ಸ್ಪರ್ಧೆಗೆ ಮುಂದಾಗಿದ್ದರು. ಸೋಮವಾರ ತಡರಾತ್ರಿಯವರೆಗೂ ಬೆಂಗಳೂರಿನಲ್ಲಿ ಜೆಡಿಎಸ್‌ ವರಿಷ್ಠರ ಜತೆ ಮಾತುಕತೆ ನಡೆದರೂ ಕುದುರಿಕೊಳ್ಳಲಿಲ್ಲ.

ಕೊನೆಗೆ ಜೆಡಿಯು ಕದ ತಟ್ಟಿದ ಬಸವರಾಜ್‌ ನಾಯ್ಕ ಅವರಿಗೆ ಆ ಪಕ್ಷ ಟಿಕೆಟ್‌ ನೀಡಿದೆ. ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌, ಪಕ್ಕದ ಕ್ಷೇತ್ರ ಚನ್ನಗಿರಿಯ ಅಭ್ಯರ್ಥಿಯಾಗಿದ್ದರಿಂದ ಇದರ ಲಾಭ ತಮಗೆ ಸಿಗಬಹುದೆಂಬ ಲೆಕ್ಕಾಚಾರದಲ್ಲಿ ಅವರನ್ನು ಬಹುಬೇಗ ಅಪ್ಪಿಕೊಂಡಿದ್ದಾರೆ.

ಕೊನೆ ಕ್ಷಣದವರೆಗೂ ಕುತೂಹಲ:

ಹರಪನಹಳ್ಳಿಯಲ್ಲಿ ಬಿಜೆಪಿ ಟಿಕೆಟ್‌ ಯಾರಿಗೇ ನೀಡಿದ್ದರೂ ಬಂಡಾಯ ನಿರೀಕ್ಷಿತವಾಗಿತ್ತು. ಮಾಜಿ ಸಚಿವ ಕರುಣಾಕರ ರೆಡ್ಡಿ ಹಾಗೂ ಕೊಟ್ರೇಶ್ ನಡುವೆ ಟಿಕೆಟ್‌ಗೆ ಪೈಪೋಟಿ ಜೋರಾಗಿತ್ತು. ಕೊಟ್ರೇಶ್‌ಗೆ ಬಿಜೆಪಿ ಟಿಕೆಟ್‌ ನೀಡಿದ್ದರೂ ಕರುಣಾಕರ ರೆಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಚಿತ ಎಂಬ ಮಾತುಗಳಿದ್ದವು. ಈಗ ಅದು ಉಲ್ಟಾ ಆಗಿದೆ. ಇಂತಹ ಸಂದರ್ಭಕ್ಕೆ ಕಾದು ಕುಳಿತ್ತಿದ್ದ ಜೆಡಿಎಸ್‌ ಕೊನೆ ಕ್ಷಣದವರೆಗೂ ಹರಪನಹಳ್ಳಿ ಟಿಕೆಟ್‌ ಘೋಷಿಸಿರಲಿಲ್ಲ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಬಂಡಾಯ ಎದುರಾಗಿದೆ. ಎಚ್.ಎಸ್‌. ನಾಗರಾಜ್ ಸೋಮವಾರ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಂಗಳವಾರ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ.

ಹರಪನಹಳ್ಳಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಕೊಟ್ರೇಶ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿ ಸ್ಪರ್ಧಿ ಕರುಣಾಕರ ರೆಡ್ಡಿಗೆ ಇವರು ಹೇಗೆ ಸವಾಲಾಗುತ್ತಾರೆ? ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಹಾಲಿ ಶಾಸಕ ಎಂ.ಪಿ. ರವೀಂದ್ರ ಅವರಿಗೆ ಇದು ಹೇಗೆ ಅನುಕೂಲವಾಗುತ್ತದೆಂಬ ಚರ್ಚೆಗಳು ಆರಂಭವಾಗಿವೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಎಚ್‌.ಎಸ್‌. ನಾಗರಾಜ್‌ ಸ್ಪರ್ಧಿಸುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಹೇಗೆ ಅಡ್ಡಗಾಲು ಆಗುತ್ತೆ? ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ಗೆ ಪ್ರಯತ್ನಕ್ಕೆ ಹೇಗೆ ತೊಡಕಾಗುತ್ತದೆಂಬ ಲೆಕ್ಕಾಚಾರಗಳೂ ನಡೆದಿವೆ.

ಬಂಡಾಯದ ಲಾಭ ಯಾರಿಗೆ?

ಬಿಜೆಪಿ ಬಂಡಾಯದಿಂದ ಆಯಾ ಕ್ಷೇತ್ರಗಳಲ್ಲಿ ಯಾರಿಗೆ ಅನುಕೂಲ? ಯಾರಿಗೆ ಅನಾನುಕೂಲ? ಎಂಬ ಲೆಕ್ಕಾಚಾರಗಳು ಈಗ ಆರಂಭವಾಗಿವೆ.

ಎಸ್ಸಿ ಮೀಸಲು ಕ್ಷೇತ್ರದ ಮಾಯಕೊಂಡದಲ್ಲಿ ಲಂಬಾಣಿ ಸಮುದಾಯದ ಬಸವರಾಜ್ ನಾಯ್ಕ ಯಾರ ಮತದ ಬುಟ್ಟಿಗೆ ಕನ್ನ ಹಾಕುತ್ತಾರೆ ಎಂಬುದು ಕುತೂಹಲಕರವಾಗಿದೆ. ಇದೇ ಸಮುದಾಯದ ಶೀಲಾ ನಾಯ್ಕ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಎಸ್ಸಿ ಸಮುದಾಯದ ಕೆ.ಎಸ್‌. ಬಸವರಾಜ್, ಬಿಜೆಪಿಯಿಂದ ಇದೇ ಸಮುದಾಯದ ಪ್ರೊ. ಲಿಂಗಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಮಧ್ಯೆ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಪ್ರಬಲ ಪೈಪೋಟಿ ನೀಡುವ, ಭೋವಿ ಸಮುದಾಯದ ಎಚ್‌. ಆನಂದಪ್ಪ ಕ್ಷೇತ್ರದಲ್ಲಿದ್ದಾರೆ. ಪರಸ್ಪರ ಜಾತಿ, ಉಪ ಜಾತಿಗಳ ಹಾಗೂ ಪಕ್ಷಗಳ ತೀವ್ರ ಸ್ಪರ್ಧೆಯಿಂದ ಮಾಯಕೊಂಡ ಕ್ಷೇತ್ರ ಜಿಲ್ಲೆಯಲ್ಲೇ ಕುತೂಹಲದ ಕಣವಾಗಿ ಮಾರ್ಪಡಲಿದೆ.

**
ಗೊಂದಲಗಳು ಸಹಜ. ಎಲ್ಲವನ್ನೂ ಸರಿಪಡಿಸಲಾಗುವುದು. ಪಕ್ಷ ಬಿಟ್ಟವರ ಬಗ್ಗೆ ಏನನ್ನೂ ಹೇಳಲಾರೆ
– ಜಿ.ಎಂ. ಸಿದ್ದೇಶ್ವರ , ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.