ದಾವಣಗೆರೆ: ಬೇಸಿಗೆ ಆರಂಭವಾಗುವ ಮುನ್ನವೇ ರಾಜ್ಯದ ಕೇಂದ್ರಬಿಂದು ದಾವಣಗೆರೆಯಲ್ಲಿ ಬಿಸಿಲಿನ ಝಳಕ್ಕೆ ಜನರು ಬಸವಳಿದಿದ್ದಾರೆ. ಭಾನುವಾರ ಗರಿಷ್ಠ 36 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ನಗರದ ಜನರು ಮನೆಯಿಂದ ಹೊರಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಂದರೆ ಅವರೆಲ್ಲ ಎಳನೀರು, ತಂಪುಪಾನೀಯ, ಹಣ್ಣಿನ ರಸ ಕುಡಿದು ತಮ್ಮ ದಣಿವು ತೀರಿಸಿಕೊಳ್ಳುವಂತಾಗಿದೆ. ಹೀಗಾಗಿ, ಕಲ್ಲಂಗಡಿ, ಎಳನೀರಿಗೆ ಭಾರೀ ಬೇಡಿಕೆ ಬಂದಿದೆ.
ಬೇಸಿಗೆ ಸಮಯದಲ್ಲಿ ಮಾರಾಟ ಗಾರರು ಗ್ರಾಮಗಳಿಗೆ ಹೋಗಿ ಎಳನೀರುಗಳನ್ನು ಖರೀದಿಸಿಕೊಂಡು ಬರುತ್ತಾರೆ. ಒಂದಕ್ಕೆ ₹5ರಿಂದ ₹10 ನೀಡಿ ಖರೀದಿಸಿ, ಗ್ರಾಹಕರಿಗೆ ₹20ಕ್ಕೆ ಮಾರಾಟ ಮಾಡಲಾಗುವುದು. ದಿನ ವೊಂದಕ್ಕೆ 100ರಿಂದ 200 ಕಾಯಿ ಮಾರಾಟವಾದರೇ ₹ 2 ಸಾವಿರದವರೆಗೆ ಲಾಭ ಗಳಿಸ ಬಹುದು. ಅದು ಕೇವಲ ಬೇಸಿಗೆಯಲ್ಲಿ ಮಾತ್ರ. ನಂತರ ಗ್ರಾಹಕರ ಸಂಖ್ಯೆ ಕಡಿಮೆ ಆದಂತೆ ಮಾರಾಟ ಕುಸಿತ ಕಡಿಮೆ ಆಗುತ್ತದೆ ಎನ್ನುತ್ತಾರೆ ಮಾರಾಟಗಾರ ಶಿವಪ್ಪ.
ಮತ್ತೊಂದು ವರ್ಗದ ಜನರು ತಂಪುಪಾನೀಯ, ಹಣ್ಣಿನ ರಸ, ಮಜ್ಜಿಗೆ ಹೀರುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಗರದ ಜಯದೇವ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್‌ನಿಲ್ದಾಣ, ರೈಲು ನಿಲ್ದಾಣ, ಶಾಲಾ–ಕಾಲೇಜು ಆವರಣ, ಆಸ್ಪತ್ರೆಗಳ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ತಂಪುಪಾನೀಯ ಅಂಗಡಿಗಳು ಈಗಾಗಲೇ ತಲೆ ಎತ್ತಿದ್ದು, ನಾಗರಿಕರು ಅಲ್ಲಲ್ಲಿ ದಣಿವು ನಿವಾರಿಸಿಕೊಳ್ಳಲು ಸಹಕಾರಿಯಾಗಿದೆ.
ಬೇಸಿಗೆ ಒಂದು ಕಡೆಯಾದರೆ: ಕಡ್ಡಾಯ ಹೆಲ್ಮೆಟ್ ಧರಿಸಬೇಕೆನ್ನುವ ನಿಯಮ ಮತ್ತೊಂದು ಕಡೆ. ಇದು ನಾಗರಿಕರನ್ನು ಹೈರಾಣಗೊಳಿಸುತ್ತಿದೆ. ಹೆಲ್ಮೆಟ್ ಧರಿಸಿದರೆ ಸೆಕೆ, ಧರಿಸದಿದ್ದರೆ ಪೊಲೀಸರ ಕಾಟ ಎಂದು ಶಪಿಸುತ್ತಾರೆ ಬೈಕ್ ಸವಾರ ಜಿ.ಸಿ.ಬಿ.ಪಾಟೀಲ್.
ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡುತ್ತಿದ್ದು, ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿದು ನಾಶ ಪಡಿಸಲಾಗುತ್ತಿದೆ. ಇದರಿಂದ ತಾಪಮಾನ ಹೆಚ್ಚಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಮರ, ಗಿಡಗಳನ್ನು ನೆಡೆಸುವ ಮೂಲಕ ಜನಜಾಗೃತಿ ಮೂಡಿಸಬೇಕಿದೆ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸುತ್ತಾರೆ.
ಮಾರ್ಚ್, ಏಪ್ರಿಲ್‌ನಲ್ಲಿ ಇರಬೇಕಾದ ಬೇಸಿಗೆ ಈ ಬಾರಿ ಫೆಬ್ರುವರಿಯಿಂದಲೇ ಪ್ರಾರಂಭವಾಗಿದೆ. ಜಿಲ್ಲೆಯ ಜನ ಈಗಾಗಲೇ ಭತ್ತ ನಾಟಿ ಕಾರ್ಯ ಮುಗಿದಿದ್ದು, ರೈತಾಪಿ ವರ್ಗ ಬಿಸಲಿನ ಝಳಕ್ಕೆ ಹೊಲಗದ್ದೆಗಳಿಗೆ ಹೋಗಿ ನೀರು ಹಾಯಿಸಲು ಹಿಂದೇಟು ಹಾಕುವಂತಾಗಿದೆ ಎನ್ನುತ್ತಾರೆ ರೈತ ಹನುಮಂತಪ್ಪ.
ಹೊರಬರದ ನಗರದ ಜನತೆ
ಸ್ಮಾರ್ಟ್‌ಸಿಟಿಯಲ್ಲಿ ಜನರು ಕೂಡ ಸ್ಮಾರ್ಟ್ ಆಗಿದ್ದಾರೆ. ತರಕಾರಿ, ಹಾಲು ಇನ್ನಿತರೆ ಅಗತ್ಯ ದಿನಸಿ ಪದಾರ್ಥಗಳನ್ನು ಬೆಳಿಗ್ಗೆಯೆ ಖರೀದಿಸುತ್ತಾರೆ. ಬಟ್ಟೆ ಮುಂತಾದ ವಸ್ತುಗಳನ್ನು ಖರೀದಿಸುವ ಯೋಚನೆ ಬಂದಾಗ ಈಗ ಕೆಟ್ಟ ಬಿಸಿಲು ಇದೆ. ಸಂಜೆ ಹೊತ್ತಿಗೆ ಹೋದರಾಯಿತು ಎಂದು ಮನೆಯೊಡತಿಯರು ತಮ್ಮ ಪತಿರಾಯರಿಗೆ ಸಲಹೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.