ADVERTISEMENT

ಬ್ಯಾಂಕಿಂಗ್ ಸೇವೆಗಳ ಸದುಪಯೋಗಪಡಿಸಿಕೊಳ್ಳಿ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 5:51 IST
Last Updated 27 ಡಿಸೆಂಬರ್ 2012, 5:51 IST

ಹರಿಹರ: `ರಾಜ್ಯದಲ್ಲಿ 65 ಶಾಖೆಗಳಿದ್ದ  ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಒಂದೇ ವರ್ಷದಲ್ಲಿ 165 ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಕ್ಷಿಪ್ರ ಪ್ರಗತಿ ಸಾಧಿಸುತ್ತಿದೆ' ಎಂದು ಬ್ಯಾಂಕ್‌ನ ಚೆನೈ ಕೇಂದ್ರ ಕಚೇರಿಯ ಮಹಾ ಪ್ರಬಂಧಕ ಕೆ. ಸುಬ್ರಮಣ್ಯಂ ಅಭಿಪ್ರಾಯಪಟ್ಟರು.

ನಗರದ ಮುಖ್ಯ ರಸ್ತೆಯ ಕಾಟ್ವೆ ಬಿಲ್ಡಿಂಗ್ ಮೊದಲ ಮಹಡಿಯಲ್ಲಿ ಬುಧವಾರ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ವೈಯಕ್ತಿಕ ಸಾಲ ನೀಡುವ ಯೋಜನೆಯನ್ನು ಮೊದಲ ಬಾರಿಗೆ ಪರಿಚಯಿಸಿದ್ದು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದೆ. ಸದರಿ ಬ್ಯಾಂಕ್‌ನಲ್ಲಿ ಒಬ್ಬ ಗ್ರಾಹಕನಿಗೆ ಬೇಕಾದ ಎಲ್ಲ ಬಗೆಯ ಸೇವೆಗಳು ಸುಲಭವಾಗಿ, ಹೆಚ್ಚು ಗೊಂದಲಗಳಿಲ್ಲದೇ, ಬೇಗನೆ ದೊರೆಯುತ್ತವೆ. ನಗರದ ಹೃದಯ ಭಾಗದ ಉತ್ತಮ ಸ್ಥಳದಲ್ಲಿ ಬ್ಯಾಂಕ್‌ನ ಶಾಖೆ ಉದ್ಘಾಟನೆಗೊಂಡಿರುವುದು ಸಂತಸದ ವಿಷಯ. ಗ್ರಾಹಕರು ಬ್ಯಾಂಕಿಂಗ್ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಹುಬ್ಬಳ್ಳಿ ಕಚೇರಿಯ ಮುಖ್ಯ ಕ್ಷೇತ್ರೀಯ ವ್ಯವಸ್ಥಾಪಕ ಬಿ.ಎನ್. ಮಂಜುನಾಥನ್ ಮಾತನಾಡಿ, ನಮ್ಮ ಬ್ಯಾಂಕ್‌ಗೆ ದೇಶದ ಉತ್ತಮ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಉತ್ತಮ ಸೇವೆ ನೀಡುವ ಬ್ಯಾಂಕ್ ಎಂಬ ಪುರಸ್ಕಾರ ಪಡೆದಿರುವುದು ಬ್ಯಾಂಕ್‌ನ ಉತ್ತಮ ಹಾಗೂ ಗ್ರಾಹಕರ ಸ್ನೇಹಿ ಬ್ಯಾಂಕಿಂಗ್ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಒಂದು ವರ್ಷದಿಂದ ಬ್ಯಾಂಕ್ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ 2,000ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಜತೆಗೆ ಬ್ಯಾಂಕಾಕ್, ಚೀನಾ, ಕೋರಿಯಾ, ಹಾಂಕಾಂಗ್ ಮೊದಲಾದ ರಾಷ್ಟ್ರಗಳಲ್ಲಿ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಗ್ರಾಹಕರಿಗೆ ಅನುಕೂಲಕವಾಗುವ ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಸೇವೆಗಳು, ವಾಹನ, ಮನೆ ಸಾಲಗಳು ಅತ್ಯಂತ ಕಡಿಮೆ ಸೇವಾ ವೆಚ್ಚದಲ್ಲಿ ದೊರೆಯುತ್ತವೆ. ಈ ಶಾಖೆಯಲ್ಲಿ ಕೇವಲ ರೂ.2,000 ಠೇವಣಿಯೊಂದಿಗೆ ಚಾಲ್ತಿ ಖಾತೆಯನ್ನು ಹೊಂದಬಹುದಾಗಿದೆ. ಶೀಘ್ರವೇ ಎಟಿಎಂ ಘಟಕ ಉದ್ಘಾಟನೆ ಆಗಲಿದೆ ಎಂದರು. ಹುಬ್ಬಳ್ಳಿ ಶಾಖೆಯ ಮುಖ್ಯ ಪ್ರಬಂಧಕ ಶಂಕರ ಮೂರ್ತಿ, ಹರಿಹರ ಶಾಖೆಯ ಪ್ರಬಂಧಕ ಎಂ. ಉಜ್ಜಪ್ಪ ಹಾಗೂ ನಾರಾಯಣಸಾ ಕಾಟ್ವೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.