ADVERTISEMENT

ಭದ್ರಾ ನೀರು ಕೃಷಿ ಬಳಕೆಗೆ ನಿಷೇಧ!

ಸರ್ಕಾರದ ದಿಢೀರ್‌ ನಿರ್ಧಾರ, ಆತಂಕಗೊಂಡ ರೈತರು, ಸಭೆ ಕರೆಯಲು ಮುಂದಾದ ‘ಕಾಡಾ’

ಪ್ರಕಾಶ ಕುಗ್ವೆ
Published 12 ಆಗಸ್ಟ್ 2016, 6:15 IST
Last Updated 12 ಆಗಸ್ಟ್ 2016, 6:15 IST
ಭದ್ರಾ ಜಲಾಶಯದ ಸಂಗ್ರಹ ಚಿತ್ರ.
ಭದ್ರಾ ಜಲಾಶಯದ ಸಂಗ್ರಹ ಚಿತ್ರ.   

ದಾವಣಗೆರೆ: ಭದ್ರಾ ಜಲಾಶಯದ ನೀರು ಕೃಷಿ ಬಳಕೆಗೆ ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟದ ಸಭೆ ನಿರ್ಧರಿಸಿದೆ. ಸರ್ಕಾರದ ಈ ದಿಢೀರ್‌ ನಿರ್ಧಾರ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಭತ್ತ, ಕಬ್ಬು ಮತ್ತಿತರ ಬೆಳೆಗಳಿಗೆ ಭದ್ರಾ ನೀರನ್ನೇ ಆಶ್ರಯಿಸಿರುವ ದಾವಣಗೆರೆ ಜಿಲ್ಲೆಯ ರೈತರು ಈಗ ದಿಕ್ಕು ತೋಚದಂತಾಗಿದ್ದಾರೆ. ಈಗಾಗಲೇ ಕೆಲವು ರೈತರು ಭತ್ತದ ನಾಟಿ ಮಾಡಿದ್ದರೆ, ಇನ್ನು ಹಲವರು ನಾಟಿಗೆ ಪೂರ್ವ ಸಿದ್ಧತೆ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 58,250 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ನಿರೀಕ್ಷಿಸಲಾಗಿದೆ. ಇದುವರೆಗೂ ಕೇವಲ 9,186 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಬ್ಬು 1,750 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಿದ್ದು, ಈವರೆಗೂ 1,694 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನಾಟಿ ಮಾಡಿದ ಭತ್ತ ಹಾಗೂ ಕಬ್ಬಿಗೆ ಈಗ ಪ್ರತಿ ಹಂತದಲ್ಲೂ ನೀರು ಬೇಕೇ ಬೇಕು.

ಅಲ್ಲದೇ, ದಾವಣಗೆರೆ ಇಡೀ ನಗರ ಕುಡಿಯುವ ನೀರಿಗೆ ಭದ್ರಾ ಜಲಾಶಯವನ್ನೇ ಆಶ್ರಯಿಸಿದೆ. ನಗರದ ಕುಂದವಾಡ ಹಾಗೂ ಟಿವಿ ಸ್ಟೇಷನ್‌ ಕೆರೆ ಎರಡಕ್ಕೂ ಇದೇ ನೀರು ಮೂಲಾಧಾರ. ಕೆಲವೇ ದಿನಗಳಲ್ಲಿ ಈ ಎರಡೂ ಕೆರೆಗಳು ಬತ್ತುವ ಹಂತ ತಲುಪಿದ್ದವು. ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತ ಮುಖಂಡರು ಕೆರೆಗೆ ಶೀಘ್ರ ನೀರು ಹರಿಸುವಂತೆ ‘ಕಾಡಾ’ದ ಮೇಲೆ ಈಚೆಗೆ ಒತ್ತಡ ಹಾಕಿದ್ದರು. 

ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಬಲದಂಡೆ ಮೂಲಕ ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು, ದಾವಣಗೆರೆ ಜಿಲ್ಲೆಯ ಹೊಲ ತಲುಪಿ ಎರಡು ದಿವಸವೂ ಕಳೆದಿಲ್ಲ. ಈ ಸಂರ್ಭದಲ್ಲೇ ಸರ್ಕಾರದ ಈ ಘೋಷಣೆ ಹೊರಬಿದ್ದಿದ್ದು ರೈತರ ದುಗುಡಕ್ಕೆ ಕಾರಣವಾಗಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಆಗಸ್ಟ್‌ 4ರಿಂದ ಜನವರಿ 12ರವರೆಗೆ ಒಟ್ಟು 100 ದಿವಸ ನೀರು ಬಿಡಲು ವೇಳಾಪಟ್ಟಿ ಸಿದ್ಧಪಡಿಸಿ, ಅದರಂತೆ 4ರ ಮಧ್ಯರಾತ್ರಿಯೇ ದಾವಣಗೆರೆ ಮತ್ತು ಹರಿಹರ ಶಾಖಾ ನಾಲೆಗಳಿಗೆ ನೀರು ಹರಿಸಲಾಗಿದೆ.

ಇದೇ ವೇಳೆ ಜಲಾಶಯದ ಅಧಿಸೂಚಿತ ಅಚ್ಚುಕಟ್ಟಿನ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಹೆಚ್ಚು ನೀರುಣ್ಣುವ ಬೆಳೆಗಳಾದ ಭತ್ತ ಅಥವಾ ಇನ್ನಿತರೆ ಬೆಳೆಗಳನ್ನು ಬೆಳೆಯಬಾರದು ಎಂದು ಕಾಡಾ ಸೂಚನೆ ನೀಡಿದೆ. ಕೇವಲ ಅರೆ ನೀರಾವರಿ ಬೆಳೆಗಳನ್ನು ಇದೇ ಆಗಸ್ಟ್‌ನಿಂದ 2017ರ ಜನವರಿವರೆಗೆ ಹೊಂದಿಕೊಂಡಂತೆ ಬೆಳೆಯಬೇಕು.

ನಿರ್ದಿಷ್ಟವಾಗಿ ತಿಳಿಸಿದ ಅಧಿಸೂಚಿತ ಬೆಳೆಗಳನ್ನು ಬೆಳೆಯದೆ ಬೆಳೆ ಉಲ್ಲಂಘನೆ ಮಾಡಿ ಇನ್ನಿತರೆ ಬೆಳೆಗಳನ್ನು ಬೆಳೆದರೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದೂ ಆದೇಶದಲ್ಲಿ ತಿಳಿಸಿದೆ.

ಹಾಗೆಯೇ, ಅಧಿಸೂಚಿತ ಬೆಳೆಪದ್ಧತಿಯನ್ನು ಉಲ್ಲಂಘಿಸುವವರು ಹಾಗೂ ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಪಂಪ್‌ ಮಾಡಿ ಅನಧಿಕೃತವಾಗಿ ನೀರನ್ನು ಬಳಸಿಕೊಂಡು ನೀರಾವರಿ ಬೆಳೆಗಳನ್ನು ಬೆಳೆದರೆ ಕರ್ನಾಟಕ ನೀರಾವರಿ ಕಾಯ್ದೆ 1965ರ ನಿಯಮಗಳ ಪ್ರಕಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ನಾಲಾ ವಿಭಾಗದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

‘ನೀರಾವರಿ ಸಲಹಾ ಸಮಿತಿ ಸೂಚನೆಯಂತೆಯೇ ರೈತರು ಬೆಳೆ ಪದ್ಧತಿ ಅನುಸರಿಸುತ್ತಿದ್ದು, ಈಗ ಏಕಾಏಕಿ ಸರ್ಕಾರ ನೀರು ಸ್ಥಗಿತಗೊಳಿಸುವ ನಿರ್ಧಾರ ರೈತರ ಮೇಲೆ ಬರಸಿಡಿಲಿನಂತೆ ಎರಗಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರ ಸಹಕಾರ ಸಂಘಗಳ ಮಹಾಮಂಡಲದ ನಿರ್ದೇಶಕ ತೇಜಸ್ವಿ ಪಟೇಲ್.

‘ಜಲಾಶಯದಿಂದ ನೀರು ಬಿಟ್ಟಾಗ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 143 ಅಡಿ ಇತ್ತು. ಈಗ 153 ಅಡಿ ಇದೆ. ಅಂದರೆ, ಜಲಾನಯನ ಪ್ರದೇಶದಲ್ಲಿ ಈಚೆಗೆ ಮಳೆಯಾಗುತ್ತಿದೆ.ಮುಂದೆಯೂ ಮಳೆಯಾಗಬಹುದು. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಬಿಡಲಾಗಿದೆ. ಆನ್‌ ಆಂಡ್‌ ಆಫ್‌ ಮಾಡಿ ನೀರು ಬಿಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಈ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲು ಸಭೆ ಶೀಘ್ರ ಸಭೆ ಕರೆಯಲಾಗುವುದು’ ಎನ್ನುತ್ತಾರೆ ‘ಕಾಡಾ’ ಅಧ್ಯಕ್ಷ ನಗರದ ಮಹದೇವಪ್ಪ.

‘ಕೃಷಿಗೆ ಭದ್ರಾ ನೀರು ನಿಷೇಧಿಸಿ ಇದೇ ರೀತಿ 2013 ಫೆಬ್ರುವರಿಯಲ್ಲೂ ಸರ್ಕಾರ ಆದೇಶಿಸಿತ್ತು. ಅವಾಗಲೂ ರೈತರು ನಷ್ಟ ಅನುಭವಿಸಿದ್ದರು. ಕಳೆದ ವರ್ಷವೂ ಸಕಾಲಕ್ಕೆ ನೀರು ಹರಿಸದೆ ತೊಂದರೆಯಾಗಿತ್ತು. ಈ ವರ್ಷವೂ ಅದೇ ಮುಂದುವರಿದರೆ ನಾವೂ ಆತ್ಮ ಹತ್ಯೆಯ ಹಾದಿ ಹಿಡಿಯ ಬೇಕಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೊನ್ನಾಳಿಯ ರೈತ ವೀರಭದ್ರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.