ADVERTISEMENT

ಭೂಮಿ ಉಳಿಸಿಕೊಳ್ಳದಿದ್ದಲ್ಲಿ ಉಳಿಗಾಲವಿಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 4:35 IST
Last Updated 3 ಅಕ್ಟೋಬರ್ 2012, 4:35 IST

ದಾವಣಗೆರೆ: ಇಂದು ನಮ್ಮ ಭೂಮಿ ಮತ್ತು ಬೀಜ ಉಳಿಸಿಕೊಳ್ಳದಿದ್ದಲ್ಲಿ ನಮಗೆ ಮುಂದೆ ಉಳಿಗಾಲವಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದ ಶಿವಯೋಗಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ರೈತ ಯುವಕರ ಹಾಗೂ ವಿದ್ಯಾರ್ಥಿಗಳ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

`ಹಸಿರು ಕ್ರಾಂತಿ~ ನೆಪದಲ್ಲಿ ಈಗಾಗಲೇ ನಾವು ಭೂಮಿಗೆ ವಿಷ ಉಣಿಸಿದ್ದೇವೆ. ಹಾಗಾಗಿ, ಇನ್ನು ಮುಂದೆಯಾದರೂ ನಿಸರ್ಗಕ್ಕೆ ಹಾನಿ ಮಾಡದೇ ಕೃಷಿ ಮಾಡಬೇಕಿದೆ. ಇಂದು ನನ್ನ ಭೂಮಿ, ನನ್ನ ಬೀಜ ಎಂಬ ಭಾವ ರೈತರಲ್ಲಿ ಒಡಮೂಡದ ಹೊರತು ಕೃಷಿಗೆ ಉಳಿಗಾಲವಿಲ್ಲ. ಈಗಾಗಲೇ ನಮ್ಮ ಬೀಜ, ತಳಿಗಳನ್ನು ಕಳೆದುಕೊಂಡು ಬಹುರಾಷ್ಟ್ರೀಯ ಬೀಜ ಕಂಪೆನಿಗಳಿಗೆ ಗುಲಾಮರಾಗಿದ್ದೇವೆ. ಇನ್ನಾದರೂ ರೈತರು ಭೂಮಿ, ಬೀಜ ಉಳಿಸಿಕೊಳ್ಳದಿದ್ದಲ್ಲಿ ಇಡೀ ಭೂಗೋಳಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ರೈತರಲ್ಲಿ ಒಗ್ಗಟ್ಟು ಬಂದಲ್ಲಿ ಯಾವ ಪಕ್ಷವಾಗಲೀ, ಜಾತಿಯಾಗಲೀ, ಮಠವಾಗಲೀ ಮಾತನಾಡಿಸಲಾಗದು. ಕೃಷಿ ಮೂಲಕ ನಮ್ಮ ಭವಿಷ್ಯ, ಬದುಕು ಕಟ್ಟಿಕೊಳ್ಳುವ ಜವಾಬ್ದಾರಿ ಅಷ್ಟೇ ಅಲ್ಲ. ಇಡೀ ಭೂಗೋಳ ಉಳಿಸುವ ಜವಾಬ್ದಾರಿ ರೈತರದ್ದು. ಮುಂದಿನ ದಿನಗಳಲ್ಲಿ ರೈತ ಯುವಶಕ್ತಿ, ವಿದ್ಯಾರ್ಥಿ ಶಕ್ತಿ ಸಂಘಟಿತವಾಗಲು ಈ ಸಮಾವೇಶ ಆಯೋಜಿಸಲಾಗಿದೆ. ಇನ್ನಾದರೂ ಹೊಸ ದಿಕ್ಕಿನಲ್ಲಿ ಹೊಸ ಸ್ವರೂಪ ನೀಡಲು ಯತ್ನಿಸೋಣ. ಹಳೇ ಬೇರುಗಳ ಮೂಲಕ ರೈತ ಚಳವಳಿಯನ್ನು ಮತ್ತಷ್ಟು ಬಲವಾಗಿ ಕಟ್ಟಿ ಯುವಪಡೆಯನ್ನು ರೂಪಿಸೋಣ ಎಂದು ಕರೆ ನೀಡಿದರು.

ಆಶಯ ನುಡಿಗಳನ್ನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಇಂದಿನ ಯುವಕರು, ವಿದ್ಯಾರ್ಥಿಗಳ ಮನಸ್ಸು ಕೃಷಿಯನ್ನು ನಿರ್ಲಕ್ಷಿಸುತ್ತಿದೆ. ನಗರಮುಖಿ ಆಲೋಚನೆ ತಾಳುತ್ತಿದ್ದಾರೆ.

ಯಾವುದಾದರೂ ಲಾಡ್ಜಿನಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡಲು ಸಿದ್ಧರಿದ್ದಾರೆ. ಆದರೆ, ರೈತನಾಗಲು ಒಲವಿಲ್ಲ. ಹಾಗಾಗಿ, ಕೃಷಿಕರ ಬದುಕು ಬೀದಿ ಭಿಕ್ಷಕರಿಗಿಂತ ಕಡೆಯಾಗಿದೆ. ರೈತ ಯಾವತ್ತೂ ಯಜಮಾನ. ಗುಲಾಮನಲ್ಲ. ಅದನ್ನು ಮನಗಂಡು ಯುವಕರು ಕೃಷಿಯತ್ತ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರು.

`ವಿದ್ಯಾರ್ಥಿ ಸಂಘಟನೆ ಮತ್ತು ಹೋರಾಟ~ ವಿಷಯ ಕುರಿತು ಮಾತನಾಡಿದ ಹೂವಳ್ಳಿ ನಾಗರಾಜ್, ಗಾಂಧಿ, ಅಂಬೇಡ್ಕರ್ ತಮ್ಮ ವಿದ್ಯಾರ್ಥಿದೆಸೆಯಲ್ಲೇ ಹೋರಾಟ ಮಾಡಿಕೊಂಡು ಬಂದವರು. ಆ ಮೂಲಕ ಮಹಾನ್‌ವ್ಯಕ್ತಿತ್ವ ಹೊಂದಿದರು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೋರಾಟದ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂತರರಾಷ್ಟ್ರೀಯ ರೈತ ಸಂಘದ ಕಾರ್ಯಕರ್ತೆ ಆಶ್ಲೇಷಾ ಮಾತನಾಡಿ, ಇಂದು ಎಲ್ಲೆಡೆ ಕಾರ್ಪೋರೇಟ್ ಸಂಸ್ಕೃತಿ ಬರುತ್ತಿದೆ. ಲಿಬಿಯಾ, ವಾಲ್‌ಸ್ಟ್ರೀಟ್ ಕ್ರಾಂತಿಯಂತೆ ನಮ್ಮಲ್ಲೂ ಯುವಕರು ಕ್ರಾಂತಿ ಮಾಡಬೇಕಿದೆ ಎಂದು ಆಶಿಸಿದರು.

ರೈತ ಸಂಘದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಸಿ. ಬಸವರಾಜ್, ಸೋಮಗುದ್ದು ರಂಗಸ್ವಾಮಿ, ಸುರೇಶ್ ತರೀಕೆರೆ, ಬಲ್ಲೂರು ರವಿಕುಮಾರ್, ವಿ. ಅಶೋಕ್, ಶಾಂತಸ್ವಾಮಿ ಮಠ, ಅರುಣ್‌ಕುಮಾರ್ ಕುರುಡಿ, ನಂದಿನಿ, ವಿದ್ಯಾಸಾಗರ್, ರಾಮುಚನ್ನಪಟ್ಟಣ, ಮಹೇಶ್ ಹರಿಹರ, ವೀರೇಶ ವಿವಿಧ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.