ADVERTISEMENT

ಮನೆ, ಗುಡಿಸಲು ಕುಸಿತ; ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 5:40 IST
Last Updated 3 ನವೆಂಬರ್ 2012, 5:40 IST
ಮನೆ, ಗುಡಿಸಲು ಕುಸಿತ; ಬೆಳೆ ಹಾನಿ
ಮನೆ, ಗುಡಿಸಲು ಕುಸಿತ; ಬೆಳೆ ಹಾನಿ   

ಚಳ್ಳಕೆರೆ: `ನೀಲಂ~ ಚಂಡಮಾರುತದ ಪರಿಣಾಮ ಎರಡು ದಿನಗಳಿಂದ ಚಳ್ಳಕೆರೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ 11 ಗ್ರಾಮಗಳಲ್ಲಿ ಸುಮಾರು 25 ಮನೆಗಳ ಮಾಳಿಗೆ ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ತಿಳಿಸಿದ್ದಾರೆ.

ಗೋಪನಹಳ್ಳಿ, ವೀರದಿಮ್ಮನಹಳ್ಳಿ, ದೊಡ್ಡೇರಿ, ಬೇಡರೆಡ್ಡಿಹಳ್ಳಿ, ಗೌರೀಪುರ, ತೊರೆಬೀರನಹಳ್ಳಿ, ಗೌಡಗೆರೆ, ಮಲ್ಲೂರಹಟ್ಟಿ, ಮಲ್ಲೂರಹಳ್ಳಿ, ಚಿಕ್ಕಹಳ್ಳಿ, ಸೂರನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿದೆ.

ನೆಲಕಚ್ಚಿದ ಬೆಳೆ
ಭರಮಸಾಗರ:
ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಜಡಿ ಮಳೆ ಸುರಿಯುತ್ತಿದ್ದು, ಶುಕ್ರವಾರ ಬೆಳಿಗ್ಗೆ ಮನೆಯೊಂದು ಕುಸಿದು ಬಿದ್ದ ಘಟನೆ ಸಂಭವಿಸಿದೆ`ನೀಲಂ~ ಚಂಡಮಾರುತದ ಪರಿಣಾಮ ಸೃಷ್ಟಿಯಾಗಿರುವ ಅಕಾಲಿಕ ಮಳೆ ಕೆಲವು ರೈತರ ಪಾಲಿಗೆ ಅನುಕೂಲವಾದರೆ, ಕೆಲವರ ಪಾಲಿಗೆ ತೊಂದರೆ ಉಂಟು ಮಾಡಿದೆ. ಕೆಲವು ಕಡೆ ಫಸಲಿಗೆ ಬಂದ ಟೊಮೆಟೊ, ಮೆಣಸಿನಕಾಯಿ ಮೊದಲಾದ ತೋಟಗಾರಿಕೆ ಬೆಳೆಗಳು ನೆಲಕಚ್ಚಿ ನಷ್ಟ ಸಂಭವಿಸಿದೆ.

ಇಲ್ಲಿನ ಪಾರ್ವತಮ್ಮ ಎಂಬುವರ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ಕುಸಿದುಬಿದ್ದಿದೆ. ಸೂರಿನ ತೊಲೆಗಳು ಮುರಿದು ಛಾವಣಿಗೆ ಹೊದಿಸಿದ್ದ ಸಿಮೆಂಟ್ ಶೀಟ್‌ಗಳು ಹೊಡೆದು ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಮನೆಯೊಳಗೆ ಇದ್ದವರು ಅಪಾಯದಿಂದ ಪಾರಾಗಿದ್ದಾರೆ.

ತಗ್ಗಿದ `ನೀಲಂ~ ಅಬ್ಬರ

ಹಿರಿಯೂರು: ಬುಧವಾರ ಸಂಜೆಯಿಂದ ಗುರುವಾರ ಬೆಳಿಗ್ಗೆವರೆಗೆ `ನೀಲಂ~ ಚಂಡಮಾರುತದ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಗುರುವಾರ ರಾತ್ರಿ ನಗರದ 13 ನೇ ವಾರ್ಡ್‌ನಲ್ಲಿ ಇಕ್ಬಾಲ್ ಎನ್ನುವವರ ಹಳೆಯ ಗುಡಿಸಲೊಂದು ಕುಸಿದು ಬಿದ್ದಿದೆ.

ಶುಕ್ರವಾರ ಬೆಳಗಿನವರೆಗೆ ಹಿರಿಯೂರಿನಲ್ಲಿ 8.2 ಮಿ.ಮೀ. ಬಬ್ಬೂರಿನಲ್ಲಿ 6.2, ಈಶ್ವರಗೆರೆಯಲ್ಲಿ 10.2, ಇಕ್ಕನೂರಿನಲ್ಲಿ 10.2 ಹಾಗೂ ಜವನಗೊಂಡನಹಳ್ಳಿಯಲ್ಲಿ 8 ಮಿ.ಮೀ. ಮಳೆಯಾಗಿರುವುದಾಗಿ ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

17 ಮನೆಗಳಿಗೆ ಹಾನಿ
ಮೊಳಕಾಲ್ಮುರು:
ತಾಲ್ಲೂಕಿನಲ್ಲಿ ಶುಕ್ರವಾರವೂ ನೀಲಂ ಚಂಡಮಾರುತ ಪರಿಣಾಮ ಮುಂದುವರಿದಿದ್ದು ಕೆಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ತಾಲ್ಲೂಕು ಆಡಳಿತ ಮೂಲಗಳ ಪ್ರಕಾರ ಶುಕ್ರವಾರ ಬೆಳಗಿನ ಜಾವದವರೆಗೆ ರಾಯಾಪುರ ಮಳೆಮಾಪನ ಕೇಂದ್ರದಲ್ಲಿ 3.5 ಸೆಂಮೀ, ಮೊಳಕಾಲ್ಮುರು ಕೇಂದ್ರದಲ್ಲಿ 2.6 ಸೆಂ.ಮೀ, ದೇವಸಮುದ್ರ ಕೇಂದ್ರದಲ್ಲಿ 3.5 ಸೆಂ.ಮೀ, ರಾಂಪುರ ಕೇಂದ್ರದಲ್ಲಿ 3 ಸೆಂ.ಮೀ ಮಳೆ ದಾಖಲಾಗಿದೆ. ಹೆಚ್ಚು ಕಡಿಮೆ ತುಂತುರು ಮಳೆ ಶುಕ್ರವಾರವೂ ಮುಂದುವರಿದಿದೆ.

ರಾಮಸಾಗರದಲ್ಲಿ 2, ರಾಂಪುರ 4, ವಿಠಲಾಪುರ ಮತ್ತು ವೆಂಕಟಾಪುರದಲ್ಲಿ ತಲಾ 2, ಕೊಂಡ್ಲಹಳ್ಳಿ ಮತ್ತು ಮುತ್ತಿಗಾರಹಳ್ಳಿಯಲ್ಲಿ ತಲಾ 2 ಮನೆ ಸೇರಿದಂತೆ ಒಟ್ಟು 17 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂದು ತಹಶೀಲ್ದಾರ್ ಎಂ.ಪಿ. ಮಾರುತಿ `ಪ್ರಜಾವಾಣಿ~ಗೆ ತಿಳಿಸಿದರು.

ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಜನಜೀವನಕ್ಕೆ ತೊಂದರೆಯಾಗಿದೆ. ಮಳೆ ಮುಂದುವರಿದಲ್ಲಿ ಬೆಳೆಗಳು ಕೊಳೆಯುವ ಆತಂಕ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಹಾನಿ: ನಷ್ಟ
ಚಿಕ್ಕಜಾಜೂರು:
`ನೀಲಂ~ ಚಂಡಮಾರುತದ ಪ್ರಭಾವದಿಂದಾಗಿ ಬಿ. ದುರ್ಗ ಹೋಬಳಿಯಲ್ಲಿ ಬೆಳೆ ಹಾನಿ ಉಂಟಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.ಮಳೆ ತೋಟಗಳಿಗೆ ವರದಾನವಾದರೆ, ಜೋಳ, ರಾಗಿ, ಹತ್ತಿ ಮತ್ತಿತರ ದವಸ ಧಾನ್ಯದ ಪೈರುಗಳಿಗೆ ಶಾಪವಾಗಿ ಪರಿಣಮಿಸಿದೆ. ಬೆಳೆದು ನಿಂತಿದ್ದ ಮೆಕ್ಕಜೋಳ ನೆಲ ಕಚ್ಚಿದೆ. ಇದು, ಬರದಿಂದ ನೊಂದಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ, ಕೆಲವು ಖಾಸಗಿ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಮಳೆಯಿಂದಾಗಿ ಮುಂದೂಡಿದವು.

ಧರ್ಮಪುರ ವರದಿ
ಸಮೀಪದ ಪಿ.ಡಿ.ಕೋಟೆ ಗ್ರಾಮದಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದ್ದು, ಯಾವುದೇ ಪ್ರಾಣಾಪಾಯವಾಗದೇ ಇರುವ ಘಟನೆ ಶುಕ್ರವಾರ ನಡೆದಿದೆ.
ಟಿ. ವರಲಕ್ಷ್ಮೀ ಎಂಬುವರಿಗೆ  ಸೇರಿದ ಮನೆ ಗೋಡೆ ಕುಸಿದಿದೆ. ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಯಾವುದೇ ಅಹಿತಕರ ಘಟನೆ ನಡೆದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.