ADVERTISEMENT

ರೈತರ ಕೈಸೇರಿಲ್ಲ ರಾಗಿ ಖರೀದಿ ಹಣ

ಹರಪನಹಳ್ಳಿ: ಹಣದ ನಿರೀಕ್ಷೆಯಲ್ಲಿ ಕಾಲ ದೂಡುತ್ತಿರುವ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 7:09 IST
Last Updated 16 ಜೂನ್ 2018, 7:09 IST
ರಾಗಿ ಬೆಳೆ (ಸಾಂದರ್ಭಿಕ ಚಿತ್ರ)
ರಾಗಿ ಬೆಳೆ (ಸಾಂದರ್ಭಿಕ ಚಿತ್ರ)   

ಹರಪನಹಳ್ಳಿ: ನಾಲ್ಕು ತಿಂಗಳ ಹಿಂದೆ ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಿದ್ದ ರೈತರ ಬ್ಯಾಂಕ್ ಖಾತೆಗೆ ಖರೀದಿ ಹಣ ಇನ್ನೂ ಸಂಪೂರ್ಣ ಪಾವತಿಯಾಗಿಲ್ಲ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರಾಜ್ಯ ಸರ್ಕಾರ ಒಂದು ಕ್ವಿಂಟಲ್‌ಗೆ ₹ 2,300 ಬೆಲೆ ನಿಗದಿಪಡಿಸಿ ರೈತರಿಂದ ರಾಗಿ ಖರೀದಿಸಿತ್ತು. ತಾಲ್ಲೂಕಿನ 473 ರೈತರು 18,621.26 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು. ಇದಕ್ಕೆ ₹ 4,32,80,371 ಪಾವತಿ ಮಾಡಬೇಕಿತ್ತು. ವಿಧಾನಸಭಾ ಚುನಾವಣೆ ಬಂದ ಕಾರಣ ಸರ್ಕಾರ ಹಣ ಬಿಡುಗಡೆಗೆ ನಿರ್ಲಕ್ಷ್ಯ ತಾಳಿತ್ತು. ಹೀಗಾಗಿ, ರೈತರಿಗೆ ಬೆಂಬಲ ಬೆಲೆ ಹಣ ಸಂದಾಯವಾಗಿಲ್ಲ.

ಕಳೆದ ವರ್ಷ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಆಗಿದ್ದರಿಂದ ನಿರೀಕ್ಷಿಸಿದಷ್ಟು ಫಸಲು ಬಂದಿರಲಿಲ್ಲ. ಪ್ರಮುಖ ಬೆಳೆ ಎನಿಸಿಕೊಂಡಿದ್ದ ಮೆಕ್ಕೆಜೋಳ ಸೈನಿಕ ಹುಳು ದಾಳಿಗೆ ಸಿಲುಕಿ ರೈತರು ಊಹಿಸಲಾರದಷ್ಟು ಸಂಕಷ್ಟ ಅನುಭವಿಸಿದ್ದರು. ಆಗ ರಾಗಿ ಬೆಳೆ ರೈತನ ಕೈ ಹಿಡಿದಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಬಿಟ್ಟು ಬೇರೆ ಕಡೆ ಕ್ವಿಂಟಲ್‌ಗೆ ₹ 1,700ರಿಂದ ₹ 1,800 ದರ ಇತ್ತು. ಹೀಗಾಗಿ, ರೈತರು ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಿದ್ದರು.

ADVERTISEMENT

ಸದ್ಯ ಸರ್ಕಾರದಿಂದ ಹಣವೇನೋ ಬಿಡುಗಡೆ ಆಗಿದೆ. ಆದರೆ, ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ. ಹಣ ಜಮಾ ಮಾಡಲು ನಿಗಮದ ವತಿಯಿಂದ ಬ್ಯಾಂಕಗಳಿಗೆ ನೀಡಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ರೈತರ ಹಣ ಕೈಸೇರಬಹುದು ಎಂದು ನಿಗಮದವರು ಹೇಳುತ್ತಿದ್ದಾರೆ. ಆದರೆ, ಇನ್ನೂ ಎಷ್ಟು ದಿನ ಹೀಗೆ ಕಾಯುವುದು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ ಸದ್ಯ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದೆ. ಆದರೆ, ಅಗತ್ಯ ಕೃಷಿ ಸಾಮಗ್ರಿ, ಬೀಜ, ಗೊಬ್ಬರ ಖರೀದಿಗೆ ಮುಂದಾಗಿರುವ ರೈತರ ಕೈಯಲ್ಲಿ ಹಣ ಇಲ್ಲದಂತಾಗಿದೆ. ಸಾಲ ಮಾಡಿಯೇ ಬಿತ್ತನೆ ಕಾರ್ಯಕ್ಕೆ ಅಣಿ ಆಗುವ ಪರಿಸ್ಥಿತಿ ರೈತರದ್ದಾಗಿದೆ.

ಸಂದಾಯ ಮಾಡಲಾಗಿದೆ

ಹರಪನಹಳ್ಳಿ ತಾಲ್ಲೂಕಿನಿಂದ 18,621.26 ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು. ಮಾರ್ಚ್ 23ರಂದು ₹ 65.60 ಲಕ್ಷ, ಮಾರ್ಚ್ 27ರಂದು ₹ 75.35 ಲಕ್ಷ, ಜೂನ್ 6ರಂದು ₹ 1.52 ಕೋಟಿ ಹಾಗೂ ₹ 1.39 ಕೋಟಿ ಸೇರಿ ಸಂದಾಯ ಮಾಡಬೇಕಾದ ಒಟ್ಟು ₹ 4.32 ಕೋಟಿ ರೂಪಾಯಿಗಳನ್ನು ರೈತರಿಗೆ ಖಾತೆಗೆ ಜಮಾ ಮಾಡಲು ಬ್ಯಾಂಕ್‌ನವರಿಗೆ ನೀಡಲಾಗಿದೆ
-ಒ. ಪುಟ್ಟಪ್ಪ. ಹಿರಿಯ ಸಹಾಯಕ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಗುರಿ ಮೀರಿ ಬಿತ್ತನೆ ಆಗಿತ್ತು

2017ರಲ್ಲಿ ತಾಲ್ಲೂಕಿನಲ್ಲಿ 2,800 ಹೆಕ್ಟೇರ್ ರಾಗಿ ಬೆಳೆ ಬಿತ್ತನೆ ಗುರಿ ಹೊಂದಲಾಗಿತ್ತು. 5,380 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿ
ಗುರಿಗಿಂತಲೂ ಹೆಚ್ಚು ರಾಗಿ ಬಿತ್ತನೆ ತಾಲ್ಲೂಕಿನಲ್ಲಿ ಆಗಿತ್ತು. ಹರಪನಹಳ್ಳಿ ಕಸಬಾ ಹೋಬಳಿಯಲ್ಲಿ 1,965, ಚಿಗಟೇರಿ ಹೋಬಳಿಯಲ್ಲಿ 504, ಅರಸೀಕೆರೆ ಹೋಬಳಿಯಲ್ಲಿ 1,500 ಹಾಗೂ ತೆಲಗಿ ಹೋಬಳಿಯಲ್ಲಿ 1,411 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪ್ರಮಾಣ ಆಗಿತ್ತು
ಆರ್.ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ

₹ 70 ಸಾವಿರ ಹಣ ಬರಬೇಕಿದೆ

ಬೆಂಬಲ ಬೆಲೆಗೆ 30 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದೆ. ನನಗೆ ₹ 70 ಸಾವಿರ ಹಣ ಬರಬೇಕಿದೆ. ಬೇಸಿಗೆ ಕಳೆದು ಮುಂಗಾರು ಹಂಗಾಮು ಆರಂಭಗೊಂಡಿದೆ. ಬಿತ್ತನೆ ಬೀಜ ಅರ್ಪಣೆಗೆ ಮುಂದಾಗಿರುವ ನಮಗೆ ರಾಗಿ ಖರೀದಿಸಿದ್ದ ಹಣ ಇನ್ನೂ ಬಾರದಿರುವುದು ಚಿಂತಾಕ್ರಾಂತರನ್ನಾಗಿ ಮಾಡಿದೆ. ಈಗ ಬರಬಹುದು ಆಗ ಬರುಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ದೂಡುತ್ತಿದ್ದೇವೆ
–  ರಾಮಾನಾಯ್ಕ, ರಾಗಿ ಮಾರಾಟ ಮಾಡಿದ ರೈತ

-ಪ್ರಹ್ಲಾದಗೌಡ ಗೊಲ್ಲಗೌಡರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.