ADVERTISEMENT

ವಿದ್ಯಾರ್ಥಿಗಳಿಗೆ ಉಚಿತ ಪ್ರಶ್ನೋತ್ತರ ಪತ್ರಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 7:20 IST
Last Updated 16 ಫೆಬ್ರುವರಿ 2011, 7:20 IST

ದಾವಣಗೆರೆ: ನಗರದ ಎಸ್‌ಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಇಲ್ಲಿನ ಸಿಎಸ್‌ಇಸಿ ಕಂಪ್ಯೂಟರ್ ಎಜುಕೇಷನ್ ವತಿಯಿಂದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಶ್ನೋತ್ತರ ಪುಸ್ತಕಗಳನ್ನು ವಿತರಣೆ ಮಾಡಲು ಮುಂದಾಗಿದೆ.

‘ರಾಜ್ಯದಲ್ಲಿ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಫಲಿತಾಂಶ ಇಳಿಮುಖಗೊಂಡಿದೆ. ಪರೀಕ್ಷೆಗೆ ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಈ ಪುಸ್ತಕ ವಿತರಣೆ ಮಾಡಲಾಗುವುದು. ಪುಸ್ತಕ ಪಡೆದ ವಿದ್ಯಾರ್ಥಿಗಳು ಕಂಪ್ಯೂಟರ್ ಕೋರ್ಸ್‌ಗೆ ಸೇರಬೇಕು ಎಂಬ ನಿಯಮವೇನು ಇಲ್ಲ. ಸಂಸ್ಥೆ ವತಿಯಿಂದ ವಿವಿಧ ರಾಜ್ಯಗಳಲ್ಲಿ ಮೂರು ಕೋಟಿ ಮೌಲ್ಯದ ಪುಸ್ತಕ ವಿತರಣೆ ಮಾಡಲಾಗುತ್ತಿದೆ’ ಎಂದು ದಾವಣಗೆರೆ ಶಾಖೆಯ ನಿರ್ದೇಶಕ ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಅನುಭವಿ ಅಧ್ಯಾಪಕರು ಬಗೆಹರಿಸಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳ ಮಾದರಿ ಒಳಗೊಂಡ ಪುಸ್ತಕ ವಿತರಣೆ ಮಾಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಪುಸ್ತಕಗಳು ಲಭ್ಯ. ಕಳೆದ ವರ್ಷ ಸಂಸ್ಥೆ 15 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವಿವಿಧ ಕಾಲೇಜಿನಲ್ಲಿ ವಿತರಣೆ ಮಾಡಿತ್ತು ಎಂದು ಹೇಳಿದರು. 

ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜಿನ ಗುರುತಿನ ಚೀಟಿ ತಂದು, ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಪುಸ್ತಕ ಪಡೆಯಬಹುದು. ವಿಳಾಸ: ಸಿಎಸ್‌ಇಸಿ ಕಂಪ್ಯೂಟರ್ ಎಜುಕೇಷನ್, ಸ್ಪೇಸ್ ಅಕಾಡೆಮಿ, 615/2, 7ನೇ ಮುಖ್ಯರಸ್ತೆ, ಪಿ.ಜೆ. ಬಡಾವಣೆ, ದಾವಣಗೆರೆ - ಇಲ್ಲಿ ಪುಸ್ತಕ ಪಡೆಯಬಹುದು. ದೂ: 233 332, ಮೊ: 99005 12135 ಸಂಪರ್ಕಿಸಬಹುದು. ಒಟ್ಟು 5 ಸಾವಿರ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅರುಣ್ ಕುಮಾರ್ ಹಾಗೂ ಕಾಶಿನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.