ADVERTISEMENT

ವಿವಿಧೆಡೆ ಅಂಚೆ ಇಲಾಖೆ, ಇಲಾಖೇತರ ನೌಕರರ ಸಂಘದ ನೇತೃತ್ವ: ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:15 IST
Last Updated 17 ಅಕ್ಟೋಬರ್ 2012, 9:15 IST

ಚನ್ನಗಿರಿ: ಕೆಲಸ ಕಾಯಂ, ಬೋನಸ್ ನೀಡಿಕೆ, ಜಿಡಿಎಸ್ ನೌಕರರ ನೇಮಕ, ದಿನಗೂಲಿ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಹಲವ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪಟ್ಟಣದ ಅಂಚೆ ಕಚೇರಿಯ ಮುಂದೆ ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದವರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

1977ರ ಕೋರ್ಟ್ ಆದೇಶದ ಪ್ರಕಾರ ಮತ್ತು ತಲವಾರ್ ಸಮಿತಿ ವರದಿ ಅನುಸಾರ ಅಂಚೆ ಇಲಾಖೆಯ ಕಾಯಂ ನೌಕರರನ್ನಾಗಿ ಮಾಡುವುದು, ಇಲಾಖೆಯ ಇತರೆ ನೌಕರರಿಗೆ ನೀಡುವ ರೂ 3,500 ಬೋನಸ್ ಕೊಡುವುದು, ಜ್ಯೇಷ್ಠತೆಯ ಆಧಾರದ ಮೇಲೆ ಜಿಡಿಎಸ್ ನೌಕರರನ್ನು ನೇಮಕ ಮಾಡುವುದು, ವೇತನ ಕಡಿತವನ್ನು ನಿಲ್ಲಿಸುವುದು, ವೇತನ ಮರುಪಾವತಿ ಜಾರಿ.
 
ಸ್ವಾಸ್ಥ್ಯ ಭೀಮಾ ಯೋಜನೆ ಜಾರಿ, ದಿನಗೂಲಿ ನೌಕರನಿಗೆ 2006ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕೆಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಇಲಾಖೇತರ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಇ. ಶಾಂತಪ್ಪ ತಿಳಿಸಿದರು.ಸಂಘದ ಮುಖಂಡರಾದ ಎಂ.ಕೆ. ಬಸವರಾಜಪ್ಪ, ಡಿ.ಕೆ. ಹಿನಾಯತ್, ಕೆ. ಲಿಂಗರಾಜ್, ಇಟ್ಟಿಗೆ ಮಹೇಶ್ವರಪ್ಪ, ಪ್ರದೀಪ್ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಮುಷ್ಕರ
ಸಂತೇಬೆನ್ನೂರು:
ಇಲ್ಲಿನ ಅಂಚೆ ಕಚೇರಿ ಎದುರು ಮಂಗಳವಾರ ಗ್ರಾಮೀಣ ಅಂಚೆ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಅನಿರ್ಧಾಷ್ಟವಧಿ ಮುಷ್ಕರಕ್ಕೆ ಚಾಲನೆ ನೀಡಿದರು. ತಲವಾರ ಸಮಿತಿ ಹಾಗೂ ಸುಪ್ರೀಂ ಕೋರ್ಟ್ ಅದೇಶದಂತೆ ಸೇವೆಯನ್ನು ಕಾಯಂಗೊಳಿಸುವುದು.

ಪಿಎಲ್‌ಬಿ ಬೋನಸ್ ನೀಡುವುದು. ಅನುಕಂಪದ ಆಧಾರದಲ್ಲಿ ನೌಕರಿಗೆ ಈಗಿನ ಪದ್ಧತಿ ಬದಲಾವಣೆ ಮಾಡುವುದು. ದಿನಗೂಲಿ ನೌಕರಿಗೆ ಭತ್ಯೆ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ದೇಶದ್ಯಾಂತ ಗ್ರಾಮೀಣ ಅಂಚೆ ನೌಕರರ ಮುಷ್ಕರ ನಡೆಯುತ್ತಿದೆ. ಶಿವಮೊಗ್ಗ ವಿಭಾಗಕ್ಕೆ ಸೇರಿದ ಈ ಭಾಗದ ನಾವೂ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ ಎಂದು ಕೆ. ಲಿಂಗರಾಜು ಮಾಹಿತಿ ನೀಡಿದರು.

ಬೆಂಬಲ
ನ್ಯಾಮತಿ:
ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘ ಕರೆ ನೀಡಿರುವ ಗ್ರಾಮೀಣ ಅಂಚೆ ಸೇವಕರ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಅಂಚೆ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ವಿಭಾಗ ವಲಯಕ್ಕೆ ಸೇರಿದ ಗ್ರಾಮೀಣ ಇಲಾಖೇತರ ನೌಕರರು ಇಂದಿನ ಪೋಸ್ಟ್ ಬ್ಯಾಗ್ ಬಿಚ್ಚದೆ ಸೇವೆ ಸ್ಥಗಿತಗೊಳಿಸಿ, ಸುಪ್ರೀಂ ಕೋರ್ಟ್ ಆದೇಶ ಅನುಸಾರ ಇಲಾಖಾ ನೌಕರರನ್ನಾಗಿ ಪರಿಗಣಿಸಬೇಕು ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಮೃತ್ಯುಂಜಯಸ್ವಾಮಿ, ಬೆಳಗುತ್ತಿ ಜಗದೀಶ, ಯರಗನಾಳು ಮಲ್ಲೇಶಪ್ಪ, ನ್ಯಾಮತಿ ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ಮಾಧನಬಾವಿ ರೇಖಾ, ಶಾಂತಕುಮಾರಿ, ವೆಂಕಟೇಶ, ಬಸವರಾಜಪ್ಪ, ವೇದಮೂರ್ತಿ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಅಂಚೆ ಸೇವಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.