ADVERTISEMENT

ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 6:05 IST
Last Updated 14 ಆಗಸ್ಟ್ 2012, 6:05 IST

ದಾವಣಗೆರೆ: ತೋಟಗಾರಿಕೆ ಇಲಾಖೆಯ ರಾಜ್ಯದ `ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ~ಗೆ ಸೋಮವಾರ ಇಲ್ಲಿ ಸಚಿವ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಿದರು.

ರಾಜ್ಯವು ತೋಟಗಾರಿಕಾ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಒಟ್ಟು ರೂ. 826 ಕೋಟಿ ಅನುದಾನ ಮೀಸಲಿರಿಸಿದೆ. ಅಲ್ಲದೇ, ಕೇಂದ್ರದ ಅನುದಾನ  ಸೇರಿದರೆ ಒಟ್ಟು ರೂ. 1,200 ಕೋಟಿ ಲಭ್ಯವಾಗುತ್ತದೆ. ರೈತರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಇಡೀ ರಾಜ್ಯದಲ್ಲಿ ಬೆಳೆಯುವ ಒಟ್ಟಾರೆ ಅಡಿಕೆ ಬೆಳೆ. ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ  75 ಸಾವಿರ ಹೆಕ್ಟೇರ್ ಅಡಿಕೆ ಬೆಳೆಯಿದೆ. ಆದ್ದರಿಂದ ಅಡಿಕೆ ಬೆಳೆ ಸಾಕು. ಬದಲಾಗಿ ಹಣ್ಣಿನ ಬೆಳೆಗಳಿಗೆ ಆದ್ಯತೆ ನೀಡಬೇಕು. ಈಗ ಉತ್ತಮ ಧಾರಣೆಯೂ ಲಭ್ಯವಿದೆ ಎಂದು ಹೇಳಿದರು.

ADVERTISEMENT

ಕರ್ನಾಟಕ ತೋಟಗಾರಿಕೆ ಮಹಾಮಂಡಳದ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ ಮಾತನಾಡಿ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳ ಕಾರ್ಯಕ್ಷಮತೆಯ ಕೊರತೆಯಿದೆ. ಮಹಾಮಂಡಳದ ವತಿಯಿಂದ ಶೀತಲೀಕರಣ, ಹಣ್ಣು ಸಂಸ್ಕರಣಾ ಘಟಕಗಳನ್ನು ತೆರೆಯಲಾಗುತ್ತಿದೆ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ನಂಜನಗೂಡಿನ ರಸಬಾಳೆ ಖ್ಯಾತಿ ಪಡೆದ ರೀತಿಯಲ್ಲೇ ಅಣಜಿ ರಸಬಾಳೆ ತಳಿ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣಾ ಘಟಕ  ಆರಂಭಿಸಬೇಕು ಎಂದು ಆಶಿಸಿದರು.

ಜಿ.ಪಂ. ಅಧ್ಯಕ್ಷ ಚಿದಾನಂದ ಐಗೂರು, ಶಾಸಕರಾದ ಎಂ. ಬಸವರಾಜ ನಾಯ್ಕ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಕೆಎಚ್‌ಎಫ್ ಅಧ್ಯಕ್ಷ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಕೆ.ಎನ್. ಓಂಕಾರಪ್ಪ, ಜಿ.ಪಂ. ಉಪಾಧ್ಯಕ್ಷೆ ಯಶೋದಮ್ಮ ಹಾಲೇಶಪ್ಪ, ಅಂಬಿಕಾ ರಾಜಪ್ಪ, ಮೇಯರ್ ಸುಧಾ ಜಯರುದ್ರೇಶ್, ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ, ತೋಟಗಾರಿಕಾ ನಿರ್ದೇಶಕ ಡಾ.ಕೆ.ಜಿ. ಜಗದೀಶ, ಹೆಚ್ಚುವರಿ ತೋಟಗಾರಿಕಾ ನಿರ್ದೇಶಕ ಡಾ.ಎಸ್.ವಿ. ಹಿತ್ತಲಮನಿ, ಕೆಎಚ್‌ಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ. ಬಸವರಾಜ ಉಪಸ್ಥಿತರಿದ್ದರು.

ಇದೇ ವೇಳೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಾರ್ಟಿಕ್ಲಿನಿಕ್, ತೋಟಗಾರಿಕಾ ಸೇವಾ ಕೇಂದ್ರದ ನೂತನ ಕಟ್ಟಡ, ಹಾಪ್‌ಕಾಮ್ಸ ಮಳಿಗೆಗಳ ಉದ್ಘಾಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.