ADVERTISEMENT

ಸಮಾಜದ ಕೆಲಸದಲ್ಲಿ ಒಗ್ಗಟ್ಟು ಇರಲಿ: ಈಶ್ವರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:40 IST
Last Updated 14 ಫೆಬ್ರುವರಿ 2011, 8:40 IST

ಶಿವಮೊಗ್ಗ: ಚುನಾವಣೆ ಸಂದರ್ಭದಲ್ಲಿ ಆಯಾ ಪಕ್ಷಗಳ ಪರವಾಗಿ ಕೆಲಸ ಮಾಡಿ. ಆದರೆ, ಸಮಾಜದ ಕೆಲಸ ಬಂದಾಗ ಒಗ್ಗಟ್ಟು ಪ್ರದರ್ಶಿಸಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷಕೆ.ಎಸ್. ಈಶ್ವರಪ್ಪ ಭೋವಿ ಜನಾಂಗದ ಮುಖಂಡರಿಗೆ ಸಲಹೆ ಮಾಡಿದರು.

ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ, ನಗರದ ಬಾಲರಾಜು ಅರಸು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕೆಲಸದಲ್ಲಿ ಒಗ್ಗಟ್ಟು ಪ್ರದರ್ಶನವಾಗದಿರುವುದು ಹಿಂದೂ ಸಮಾಜದ ಒಂದು ಕೆಟ್ಟ ಸಂಪ್ರದಾಯ. ಸಮಾಜದ ಕೆಲಸ ಮಾಡಲು ಮುಂದೆ ಬಂದವರ ಬೆನ್ನು ತಟ್ಟಬೇಕು. ಅವರನ್ನು ಆಡಿಕೊಳ್ಳುವುದು ದೊಡ್ಡ ಪಾಪ ಎಂದು ತೀಕ್ಷ್ಣವಾಗಿ ನುಡಿದರು.

ಭೋವಿ, ಶ್ರಮಜೀವಿಗಳ ಸಮಾಜ. ಆದರೆ, ಇಂದು ಶಿಕ್ಷಣ ಮತ್ತು ಸಂಘಟನೆಯಲ್ಲಿ ಹಿಂದುಳಿದಿದೆ. ಮಕ್ಕಳು ವಿದ್ಯಾವಂತರಾದಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ. ಭೋವಿ ಸಮಾಜದ ಮುಖಂಡರು ಅದನ್ನು ಮನಗಾಣಬೇಕು ಎಂದರು.

ಟೀಕೆಗಳು ಇಡೀ ಸಮಾಜದ ಕಲ್ಯಾಣಕ್ಕೆ ಹೋರಾಡಿದ ಬಸವಣ್ಣ, ಅಂಬೇಡ್ಕರ್ ಅವರನ್ನೇ ಬಿಟ್ಟಿಲ್ಲ. ಹಾಗಾಗಿ, ಸಮಾಜದ ಮುಖಂಡರು ಯಾವುದೇ ಟೀಕೆ-ಟಿಪ್ಪಣಿಗಳಿಗೆ ಹೆದರದೆ ಸಮಾಜದ ಕೆಲಸಕ್ಕೆ ಮುಂದಾಗಬೇಕು ಎಂದರು.

ದಲಿತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಲಿತರಿಗೆ, ಹಿಂದುಳಿದವರಿಗೆ ನೀಡಿದಷ್ಟು ಅನುದಾನ ಬೇರೆ ಯಾವ ಮುಖ್ಯಮಂತ್ರಿ ಇದುವರೆಗೂ ನೀಡಿಲ್ಲ. ಸಮಾಜ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಭೋವಿ ಜನಾಂಗಕ್ಕಾಗಿ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಸರ್ಕಾರ ಮೂರು ಎಕರೆ ಜಮೀನು ನೀಡಲು ಒಪ್ಪಿಗೆ ನೀಡಿದೆ. ಅದನ್ನು ಮಂಜೂರು ಮಾಡಿಸಿಕೊಳ್ಳುವುದಕ್ಕೆ ಮುಖಂಡರು ಮುಂದಾಗಬೇಕು. ಅಲ್ಲದೇ, ಸಭಾಭವನದ ಬಳಿಯ ಜಾಗ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಲು ತಾವು ರಕ್ಷಣೆ ನೀಡುವುದಾಗಿ ಈಶ್ವರಪ್ಪ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಭಾಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ್ಙ 5 ಲಕ್ಷ ಅನುದಾನ ನೀಡಿದ ಕೆ.ಎಸ್. ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಎಂ. ಪುರುಷೋತ್ತಮ ಅವರನ್ನು ಅಭಿನಂದಿಸಲಾಯಿತು. ಹಾಲಿ ಅಧ್ಯಕ್ಷ ಎಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮಾಜಿ ಸಚಿವ ಜಿ. ಬಸವಣ್ಯಪ್ಪ ಮಾತನಾಡಿದರು. ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿ.ಪಂ. ಮಾಜಿ ಅಧ್ಯಕ್ಷರಾದ ಫಕೀರಪ್ಪ, ಎಚ್.ಸಿ. ಬಸವರಾಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್, ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಣ್ಣಪ್ಪ, ಸಂಘದ ಉಪಾಧ್ಯಕ್ಷ ಡಾ.ಪಿ.ರಾಮಚಂದ್ರಪ್ಪ, ನಗರಸಭೆ ಸದಸ್ಯ ಎಂ. ರಾಜು ಉಪಸ್ಥಿತರಿದ್ದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಧೀರರಾಜ್ ಸ್ವಾಗತಿಸಿದರು. ದ್ರುವಿಪ್ರಾರ್ಥಿಸಿದರು. ಕೃಷ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.