ADVERTISEMENT

ಸಮುದಾಯ ಭವನ ಜಾತಿ, ಧರ್ಮಕ್ಕೆ ಸೀಮಿತ ಅಲ್ಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:20 IST
Last Updated 2 ಜೂನ್ 2011, 6:20 IST

ದಾವಣಗೆರೆ: ಸಮುದಾಯ ಭವನಗಳು ಯಾವುದೇ ಒಂದು ಜಾತಿಗೆ ಸೀಮಿತವಾಗದೇ ಎಲ್ಲ ಜಾತಿ-ಧರ್ಮಕ್ಕೂ ಸಲ್ಲಬೇಕು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿ ಕಾಮಗಾರಿಗೆ ಅನುಮೋದನೆ ನೀಡುವ ಮುನ್ನವೇ ಈ ಬಗ್ಗೆ ಸ್ಥಳೀಯರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನ ಒಂದು ಧರ್ಮಕ್ಕೆ ಸೀಮಿತವಾಗುವುದರಿಂದ ಆವರಣದಲ್ಲಿ ಸಮುದಾಯ ಭವನ ನಿರ್ಮಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಲ್ಲದೇ, ಭವನ ನಿರ್ಮಿಸುವ ಸ್ಥಳವನ್ನು ಸರ್ಕಾರಕ್ಕೆ ಹಸ್ತಾಂತರಿಸಿದರೆ ಮಾತ್ರ ಮಂಜೂರಾತಿ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮಾಹಿತಿ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಂಸದರು, ನಿವೇಶನವನ್ನು ಗ್ರಾಮ ಪಂಚಾಯ್ತಿ ವಶಕ್ಕೆ ಪಡೆದು, ಗ್ರಾಮಸ್ಥರಿಂದ ಒಪ್ಪಂದ ಮಾಡಿಕೊಂಡು ಭವನ ನಿರ್ಮಿಸಲು ಅನುಮೋದನೆ ನೀಡಿ ಎಂದು ಸಲಹೆ ನೀಡಿದರು.

2009-10 ಹಾಗೂ 10-11ರಲ್ಲಿ ಒಟ್ಟು ್ಙ ಮೂರು ಕೋಟಿ ದೊರೆತಿದ್ದು, ಅದರಲ್ಲಿ ್ಙ ಒಂದು ಕೋಟಿ ಖರ್ಚು ಮಾಡಲಾಗಿದೆ. ಉಳಿದ ಹಣಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ್ಙ 1.82 ಕೋಟಿ ವೆಚ್ಚದ ಒಟ್ಟು 84 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನ್ಙೂ 1.8 ಕೋಟಿ ಬಿಡುಗಡೆ ಮಾಡಬೇಕಿದೆ.  21 ಕಾಮಗಾರಿಗಳು ಆರಂಭವಾಗಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ವಿವರ ನೀಡಿದರು.

ಹಲವು ಗ್ರಾಮಗಳಲ್ಲಿ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು, ತ್ವರಿತವಾಗಿ ಪೂರೈಸುವಂತೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ಹೊನ್ನಾಳಿಯಲ್ಲಿ ನೆನೆಗುದಿಗೆ ಬಿದ್ದಿರುವ ಸಮುದಾಯ ಭವನ ಪೂರ್ಣಗೊಳಿಸದ ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವಿರುದ್ಧ ಸಂಸದರು ಹರಿಹಾಯ್ದರು.

ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಇನ್ನೂ ್ಙ 5 ಲಕ್ಷ ಹೆಚ್ಚುವರಿ ನೀಡುವಂತೆ ಕೋರಿದರು.
ಅದಕ್ಕೆ ಸ್ಪಂದಿಸಿದ ಸಂಸದರು, ಈಗಾಗಲೇ 2 ಲಕ್ಷ ನೀಡಿದ್ದು, ಮತ್ತೆ ್ಙ 4.70 ಲಕ್ಷ ನೀಡಲು ಒಪ್ಪಿಗೆ ಸೂಚಿಸಿದರು.

ರಸ್ತೆಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸುವ ಮುನ್ನ ಚರಂಡಿಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.