ADVERTISEMENT

ಸಾಸ್ವೆಹಳ್ಳಿ ಯೋಜನೆ ಜಾರಿಗೊಳಿಸಲಿಲ್ಲ ಏಕೆ

ಸಂತೇಬೆನ್ನೂರು: ಪ್ರಚಾರ ಸಭೆಯಲ್ಲಿ ಬಿಎಸ್‌ವೈಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 11:15 IST
Last Updated 5 ಮೇ 2018, 11:15 IST

ಸಂತೇಬೆನ್ನೂರು: ರೈತನ ಮಕ್ಕಳು ಎಂದು ಹೇಳಿಕೊಳ್ಳುವ ಯಡಿಯೂರಪ್ಪ, ಕುಮಾರಸ್ವಾಮಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು ಏಕೆ ಮಂಜೂರು ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿನ ಎಸ್‍ಎಸ್‍ಜೆವಿಪಿ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್‌ ರಾಜಣ್ಣ ಪರ ಮತಯಾಚಿಸಿದ ಅವರು, ‘ರೈತರ ಹಿತಕ್ಕಾಗಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ನಾವು ರೈತರ ಮಕ್ಕಳಲ್ಲವೇ’ ಎಂದು ಪ್ರಶ್ನಿಸಿದರು.

‘ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಕಾಂಗ್ರೆಸ್‌ ಸರ್ಕಾರ ಈಡೇರಿಸಿದೆ. ಈ ವಿಷಯದಲ್ಲಿ ನಾನು ಚರ್ಚೆಗೆ ಸಿದ್ಧ. ಯಡಿಯೂರಪ್ಪ ಅವರಿಗೆ ಚರ್ಚೆಗೆ ಬರಲು ಧಮ್ ಇಲ್ಲ’ ಎಂದು ಟೀಕಿಸಿದರು.

ADVERTISEMENT

ಪ್ರತಿ ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನ ನೀಡಿದ್ದೇವೆ. ಇದರಿಂದ ನಿತ್ಯ 72 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಸರ್ಕಾರದಿಂದ ₹ 1,300 ಕೋಟಿ ಪ್ರೋತ್ಸಾಹಧನ ಕೊಟ್ಟಿದ್ದೇವೆ. ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ₹ 22,000 ಕೋಟಿ ಅನುದಾನ ನೀಡಿತ್ತು. ನಮ್ಮ ಸರ್ಕಾರ ₹ 89,000 ಕೋಟಿ ನೀಡಿದೆ’ ಎಂದು ಹೇಳಿಕೊಂಡರು.

‘ಪ್ರಧಾನಿ ಮೋದಿ ಅವರು ಅಚ್ಛೆ ದಿನ್ ಆಯೇಗಾ ಎನ್ನುವ ಪೊಳ್ಳು ಭಾಷಣ ಮಾಡುತ್ತಾರೆ. ಆದರೆ, ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಗ್ಯಾಸ್ ಸಿಲಿಂಡರ್ ಬೆಲೆ ₹ 800ಕ್ಕೆ ಏರಿದೆ. ‘ಅಚ್ಛೆ ದಿನ್ ಕಭೀ ನಹೀ ಆಯೇಗಾ’ ಎಂದು ಟೀಕಿಸಿದ ಅವರು, ‘ನೀರವ್ ಮೋದಿ, ಮಲ್ಯ, ಲಲಿತ್ ಮೋದಿ, ಮುಂತಾದವರು ಮೋದಿ ಅವರ ಕುಮ್ಮಕ್ಕಿನಿಂದ ಲೂಟಿ ಹೊಡೆದಿದ್ದಾರೆ’ ಎಂದು ಆರೋಪಿಸಿದರು.

‘ಈ ಚುನಾವಣೆ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಮಹತ್ವಪೂರ್ಣವಾಗಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸೂರ್ಯ ಪೂರ್ವದಲ್ಲಿ ಹುಟ್ಟುವಷ್ಟೇ ಸತ್ಯ. ನಿಮ್ಮ ತೀರ್ಮಾನ ಐತಿಹಾಸಿಕ ನಿರ್ಣಯವಾಗಲಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತನ್ನಿ’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ವೀಕ್ಷಕ ಜೆ.ಡಿ. ಸೀಲಂ. ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿದರು. ಕಾಂಗ್ರೆಸ್‍ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸಿದ್ದಪ್ಪ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಶಿಕಲಾ, ತಾಲ್ಲೂಕು ಘಟಕದ ಅಧ್ಯಕ್ಷೆ ಉಮಾ ಬಸವರಾಜ್, ಮುಖಂಡರಾದ ಶ್ರೀನಿವಾಸ್, ಯೋಗೀಶ್, ಜೆ.ರಂಗನಾಥ್, ಏಜಾಜ್ ಅಹಮದ್, ಜಾವೀದ್ ಸಾಬ್ ಅವರೂ ಇದ್ದರು.

‘ಟಿಪ್ಪು ಜಾತ್ಯತೀತ ವ್ಯಕ್ತಿ’

‘ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ. ಜಾತ್ಯತೀತ ವ್ಯಕ್ತಿ. ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ ವೀರ. ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ಒಡ್ಡಿದರು. ಆದರೂ ಹೆದರಲಿಲ್ಲ. 27 ಜಯಂತಿಗಳಲ್ಲಿ ಟಿಪ್ಪು ಜಯಂತಿ ಸೇರಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಕೊಂಡಾಡಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.