ADVERTISEMENT

ಸಾಹಿತ್ಯ-ಸಂಗೀತದಿಂದ ಕ್ರೂರತೆ ದೂರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 8:55 IST
Last Updated 23 ಜನವರಿ 2012, 8:55 IST

ದಾವಣಗೆರೆ: `ಸಾಹಿತ್ಯ ಹಾಗೂ ಸಂಗೀತದಿಂದ ಮನುಷ್ಯನಲ್ಲಿ ಕ್ರೂರತೆ, ಭ್ರಷ್ಟತೆ ಕಡಿಮೆಯಾಗುತ್ತದೆ~ ಎಂದು ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ `ಅವಳ ಸನ್ನಿಧಿಯಲಿ~ ಹಾಗೂ `ಫಲ್ಗುಣಿಯಲಿ ಕೇಳಿಬಂದ ರುದ್ರವೀಣೆ~ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಚಿದಾನಂದಮೂರ್ತಿ ಹಿರಿಯ ಸಂಶೋಧಕರು. ಅವರ ಬಗ್ಗೆ ಗೌರವವಿದೆ. ಆದರೆ, ಇತ್ತೀಚೆಗೆ ಅವರು ಕೋಮು ಸೌರ್ಹಾದಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಅನ್ಯಾಯದ ವಿರುದ್ಧ ಹೋರಾಟ ನಡೆಸುವುದು ಜೀವಂತಿಕೆಯ ಲಕ್ಷಣ. ಇದುವರೆಗೂ ನಾವು ಏನು ಮಾಡಿದ್ದೇವೆ ಎನ್ನುವುದಕ್ಕಿಂತ ಏನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ಅಗತ್ಯ ಎಂದು ಹೇಳಿದರು.

ಕನ್ನಡ ಸಂಸ್ಕೃತಿಯ ಚರ್ಚೆ ಮೊದಲಿನಿಂದಲೂ ನಡೆಯುತ್ತಿದೆ. ನಮ್ಮಲ್ಲಿರುವ ಅಭಿವ್ಯಕ್ತಿಯನ್ನು ಸುಲಭವಾಗಿ ಅನಾವರಣಗೊಳಿಸಲು ಕನ್ನಡವೊಂದು ದೊಡ್ಡತಾಯಿ ಎಂದು ಬಣ್ಣಿಸಿದ ಅವರು, ಸಾಂಸ್ಕೃತಿಕವಾಗಿ ಕರ್ನಾಟಕ ಶ್ರೀಮಂತ ರಾಜ್ಯ. ಈಚೆಗೆ ಹಲವಾರು ಕಾರಣದಿಂದ ರಾಜ್ಯದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದ್ದು, ಪರಪ್ಪನ ಅಗ್ರಹಾರ ಸೇರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಷಾದಿಸಿದರು.

ನಮ್ಮ ಭೂತಾಯಿಯ ಒಡಲು ಬಗೆದು ಮಾರಾಟ ಮಾಡುವವರನ್ನ `ಗಣಿಧಣಿ~ಗಳೆಂದು ಕರೆಯುತ್ತಿದ್ದೇವೆ. ಇದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ಭಾಷೆ ಬಳಕೆಯಲ್ಲಿ ಎಚ್ಚರಿಕೆ ಇರಬೇಕು. ಲೇಖಕರು ಇದನ್ನು ರೂಢಿಸಿಕೊಳ್ಳಬೇಕು. ಪಂಪ, ರನ್ನ ಇಂದು ಯಾರಿಗೂ ಬೇಕಿಲ್ಲ. ಅವರ ಸಾಹಿತ್ಯ ಓದದೇ ಕವಿಗಳಾಗಬೇಕು ಎಂಬುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ ಏನು ಮಾಡಿದೆ ಎನ್ನುವುದಕ್ಕಿಂತ ಪ್ರಸ್ತುತ ಕಾಲಘಟಕ್ಕೆ ಸ್ಪಂದಿಸುವುದು ಮುಖ್ಯ ಎಂದು ಸಲಹೆ ನೀಡಿದರು.

ಬರಹ ಧ್ಯಾನವಿದ್ದಂತೆ. ನಿರಂತರ ಬರಹದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ದಾವಣಗೆರೆಯಲ್ಲೂ ಪ್ರತಿಭಾನ್ವಿತರು ಹಾಗೂ ಸೃಜಶೀಲರಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾನೂನು ತಜ್ಞ ಪ್ರೊ.ಎಸ್.ಎಚ್. ಪಟೇಲ್ ಮಾತನಾಡಿ, ಅಮೆರಿಕದ ಲಾಭ ಸಂಸ್ಕೃತಿಗೆ ನಾವು ಶರಣಾಗಿದ್ದೇವೆ ಎಂದು ವಿಷಾದಿಸಿದರು. ಪ್ರೊ.ಬಿ.ವಿ. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಬಿ. ರಾಮಚಂದ್ರಪ್ಪ ಹಾಗೂ ಡಾ.ದಾದಾಪೀರ್ ನವಿಲೇಹಾಳ್ ಕೃತಿ ಕುರಿತು ಮಾತನಾಡಿದರು. ಎಂ.ಎಸ್. ವಿಕಾಸ್ ಹಾಗೂ ಲೇಖಕ ಮಲ್ಲಿಕಾರ್ಜುನ ಕಡಕೋಳ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.