ADVERTISEMENT

ಹದಗೆಟ್ಟ ನದಿ ಸಂಪರ್ಕ ರಸ್ತೆ

ಒಂದು ತೀರದಲ್ಲಿ ಗೋವಿನಕೋವಿ ಇನ್ನೊಂದು ತೀರದಲ್ಲಿ ರಾಂಪುರ

ಚನ್ನೇಶ ಬಿ.ಇದರಮನಿ
Published 10 ಮೇ 2013, 10:46 IST
Last Updated 10 ಮೇ 2013, 10:46 IST
ಹೊನ್ನಾಳಿ ತಾಲ್ಲೂಕು ಗೋವಿನಕೋವಿ ಗ್ರಾಮದ ಬಳಿ ತುಂಗಭದ್ರಾ ನದಿ ಸಂಪರ್ಕ ರಸ್ತೆ ಕೆಸರು ಗದ್ದೆಯಂತಾಗಿರುವುದು.
ಹೊನ್ನಾಳಿ ತಾಲ್ಲೂಕು ಗೋವಿನಕೋವಿ ಗ್ರಾಮದ ಬಳಿ ತುಂಗಭದ್ರಾ ನದಿ ಸಂಪರ್ಕ ರಸ್ತೆ ಕೆಸರು ಗದ್ದೆಯಂತಾಗಿರುವುದು.   

ಹೊನ್ನಾಳಿ: ತಾಲ್ಲೂಕಿನ ಗೋವಿನಕೋವಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಹದಗೆಟ್ಟಿದ್ದು, ಮಳೆ ಬಂದರಂತೂ ಓಡಾಡುವುದೇ ದುಸ್ತರವಾಗಿದೆ.

ತುಂಗಭದ್ರಾ ನದಿಯ ಒಂದು ತೀರದಲ್ಲಿ ಗೋವಿನಕೋವಿ ಗ್ರಾಮ ಇದ್ದು, ಮತ್ತೊಂದು ತೀರದಲ್ಲಿ ರಾಂಪುರ ಗ್ರಾಮ ಇದೆ. ರಾಂಪುರ ಗ್ರಾಮಕ್ಕೆ ಹೊನ್ನಾಳಿ, ಬೆನಕನಹಳ್ಳಿ, ಸಾಸ್ವೆಹಳ್ಳಿ ಮುಖಾಂತರ ಬಸ್‌ನಲ್ಲಿ ತೆರಳಬೇಕು. ಆದರೆ, ಗೋವಿನಕೋವಿ ಗ್ರಾಮದ ಬಳಿ ದೋಣಿಯಲ್ಲಿ ತುಂಗಭದ್ರಾ ನದಿಯನ್ನು ದಾಟಿ, ಅರ್ಧ ಕಿ.ಮೀ. ನಡುಗಡ್ಡೆಯಲ್ಲಿ ಕಾಲ್ನಡಿಗೆ ಮೂಲಕ ಸಾಗಬೇಕು. ನಂತರ ಸ್ವಲ್ಪ ದೂರ ತುಂಗಭದ್ರಾ ನದಿ ನೀರಲ್ಲಿ ನಡೆದುಕೊಂಡು ಹೋದರೆ ರಾಂಪುರ ಸಿಗುತ್ತದೆ.

ಗೋವಿನಕೋವಿ ಆಸುಪಾಸಿನ ಗ್ರಾಮಗಳ, ಹೊನ್ನಾಳಿಯ ಜನರು ರಾಂಪುರಕ್ಕೆ ನದಿ ಮೂಲಕವೇ ತೆರಳುತ್ತಾರೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಮಾತ್ರ ಹೊಳೆ ಮೂಲಕ ರಾಂಪುರಕ್ಕೆ ತೆರಳುವವರ ಸಂಖ್ಯೆ ಇರುವುದಿಲ್ಲ ಎಂದು ಹೇಳುತ್ತಾರೆ ಗೋವಿನಕೋವಿ ಗ್ರಾಮದ ಉಮೇಶ್.

ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ಗಡ್ಡೆ ರಾಮೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಅನೇಕರು ತೆರಳುತ್ತಾರೆ. ಕುರುವ ಗ್ರಾಮದ ಭಕ್ತರು ನದಿ ತುಂಬಿ ಹರಿಯುವಾಗಲೂ ಪ್ರಯಾಸದಿಂದ ದೋಣಿ ಮೂಲಕ ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ ಎಂದು ಹೇಳುತ್ತಾರೆ  ಗ್ರಾಮದ ಬಸವರಾಜ್. 

ಗೋವಿನಕೋವಿಯಿಂದ ದಿಂದ ತುಂಗಭದ್ರಾ ನದಿಗೆ ಸಂಪರ್ಕ ಕಲ್ಪಿಸುವ ಸುಮಾರು 1.5 ಕಿ.ಮೀ. ಗಳಷ್ಟು ದೂರದ ದಾರಿ ತೀವ್ರ ಹದಗೆಟ್ಟಿದೆ. ರಸ್ತೆಯನ್ನು ಡಾಂಬರೀಕರಣ ಗೊಳಿಸಿದರೆ, ಈ ಭಾಗದಲ್ಲಿ ಓಡಾಡುವ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ಗೋವಿನಕೋವಿ ಗ್ರಾಮದ ನಾಗರಾಜ್.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.