ADVERTISEMENT

ಹರಿಹರ ಗೆಲ್ಲಲು ಅಭ್ಯರ್ಥಿಗಳ ಹರಸಾಹಸ

ಹರಿಹರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ: ಪಕ್ಷಗಳಿಗೆ ಬಿಸಿತುಪ್ಪವಾದ ಮುಖಂಡರ ನಡೆ

ನಾಗರಾಜ ಎನ್‌
Published 8 ಮೇ 2018, 12:33 IST
Last Updated 8 ಮೇ 2018, 12:33 IST

ದಾವಣಗೆರೆ: ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗಿರುವ ಹರಿಹರ ಕ್ಷೇತ್ರದ ಮೇಲೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಹಿಡಿತ ಸಾಧಿಸಲು ಹರಸಾಹಸ ಪಡುತ್ತಿವೆ.

ಜೆಡಿಎಸ್‌ನಿಂದ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮತ್ತೆ ಆಯ್ಕೆ ಬಯಸಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಬಿ.ಪಿ. ಹರೀಶ್‌ ಈ ಬಾರಿ ಬಿಜೆಪಿ ಹುರಿಯಾಳು. ಇನ್ನು ಕಾಂಗ್ರೆಸ್‌ ಮತ್ತೆ ಎಸ್‌. ರಾಮಪ್ಪ ಅವರಿಗೆ ಮಣೆ ಹಾಕಿದೆ. ಹರಿಹರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಸಾಲು ಸಾಲಾಗಿ ಹರಿಹರ ಕ್ಷೇತ್ರಕ್ಕೆ ಭೇಟಿ ನೀಡಿ, ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ADVERTISEMENT

ಜೆಡಿಎಸ್‌ ‘ಕುಮಾರ ಪರ್ವ’ ಸಮಾವೇಶ ನಡೆಸಿದೆ. ಹರಿಹರ ತಾಲ್ಲೂಕಿನ ನಂದಿಗುಡಿಯಲ್ಲಿ ಇನ್ನೊಂದು ಸಮಾವೇಶ ಆಯೋಜಿಸಿ, ಶಿವಶಂಕರ್‌ಗೆ ಬಲ ತುಂಬಿದೆ. ಬಿಜೆಪಿ ಪರ ಅಮಿತ್‌ ಶಾ, ಸ್ಮೃತಿ ಇರಾನಿ, ಬಿ.ಎಸ್‌. ಯಡಿಯೂರಪ್ಪ... ಹೀಗೆ ಪ್ರಮುಖ ನಾಯಕರು ಪ್ರಚಾರ ನಡೆಸಿ, ‘ಮತ ಖಾತ್ರಿ’ಗಾಗಿ ಬೆವರು ಹರಿಸಿದ್ದಾರೆ. ಕಾಂಗ್ರೆಸ್‌ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಚಾರ ನಡೆಸಿ, ‘ಅಹಿಂದ’ ಮತಗಳ ಕ್ರೋಡೀಕರಣಕ್ಕೆ ತಂತ್ರ ರೂಪಿಸಿದ್ದಾರೆ. ಸಿ.ಎಂ. ಇಬ್ರಾಹಿಂ, ಗುಲಾಂ ನಬಿ ಆಜಾದ್‌ ಕೂಡ ಸಿದ್ದರಾಮಯ್ಯಗೆ ಹೆಗಲು ನೀಡಿದ್ದಾರೆ.

ಹಾಲಿ ಶಾಸಕರಾಗಿರುವ ಶಿವಶಂಕರ್‌ಗೆ ಕ್ಷೇತ್ರದ ಮೇಲೆ ಸಹಜವಾಗಿ ಹಿಡಿತವಿದೆ. ಕಳೆದ ಬಾರಿ ಸೋತಿರುವ ಅನುಕಂಪ. ‘ಸರಳ ವ್ಯಕ್ತಿ’ ಎಂಬ ಜನರ ಅಭಿಪ್ರಾಯ ಹರೀಶ್‌ ಮತಬೇಟೆಯ ಅಸ್ತ್ರಗಳು. ‘ಸೋತರೂ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿಸಿದ್ದಾರೆ’ ಎಂಬ ಮಾತು ರಾಮಪ್ಪ ಅವರ ‘ಹಸ್ತ’ಕ್ಕೆ ಅಭಯ ನೀಡಿದೆ. ಈ ಅಂಶಗಳನ್ನೇ ಮುಂದಿಟ್ಟುಕೊಂಡು ಮತ
ಬೇಟೆಗೆ ಬಾಣ ಹೂಡಿರುವ ಅಭ್ಯರ್ಥಿಗಳಿಗೆ ಮೂರೂ ಪಕ್ಷಗಳಲ್ಲಿನ ನಾಯಕರ ಪಕ್ಷಾಂತರ, ಗುರಿ ತಪ್ಪುವ ಬೀತಿ ಸೃಷ್ಟಿಸಿದೆ.

ಬಿಜೆಪಿಯ ಪರಶುರಾಂ ಕಾಟ್ವೆ ಕಾಂಗ್ರೆಸ್‌ ‘ಕೈ’ ಹಿಡಿದಿದ್ದಾರೆ. ಪಂಚಮಸಾಲಿ ಸಮಾಜದ ಪ್ರಭಾವಿ ಮುಖಂಡ ಎನ್‌.ಜಿ. ನಾಗನಗೌಡ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಇದು ಜೆಡಿಎಸ್‌ಗೆ ಆಘಾತ ನೀಡಿದ ಬೆಳವಣಿಗೆ. ಮಾಜಿ ಶಾಸಕ, ಕುರುಬರ ನಾಯಕ ಡಾ.ವೈ. ನಾಗಪ್ಪ ಪುತ್ರ ವೈ.ಎನ್‌. ಮಹೇಶ್‌ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸಖ್ಯ ಬೆಳೆಸಿದ್ದಾರೆ. ಇದರಿಂದ ಕಾಂಗ್ರೆಸ್‌ನ ‘ಮತಬುಟ್ಟಿ’ಗೆ ಜೆಡಿಎಸ್‌ ಕೈ ಹಾಕಿದಂತಾಗಿದೆ.

ಮಲೇಬೆನ್ನೂರು ಪುರ ಸಭೆಯಲ್ಲಿ ಬಿಜೆಪಿ ಜತೆಗೆ ಜೆಡಿಎಸ್‌ ಮಾಡಿಕೊಂಡ ಮೈತ್ರಿ, ಬಿಜೆಪಿ ಅಭ್ಯರ್ಥಿ ಹರೀಶ್‌ ಅವರ ಪಕ್ಷಾಂತರ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ರಾಮಪ್ಪ ಅವರ ಬಗೆಗಿರುವ ಅಸಮಾಧಾನಗಳು ಆಯಾ ಪಕ್ಷಗಳ ಸಾಂಪ್ರದಾಯಿಕ ಮತಗಳನ್ನೂ ಕಲಕುವ ಕಾರಣಗಳಾಗಿವೆ. ಮೇಲ್ನೋಟಕ್ಕೆ ಬಿಜೆಪಿ–ಜೆಡಿಎಸ್‌ ಜಿದ್ದಾಜಿದ್ದಿನ ಸ್ಪರ್ಧೆ ಇರುವಂತೆ ಕಾಣಿಸಿದರೂ ಹರಿಹರದಲ್ಲಿ ಕಾಂಗ್ರೆಸ್‌ ಅನ್ನು ನಿರ್ಲಕ್ಷಿಸುವಂತಿಲ್ಲ.

ಜಾತಿ ಲೆಕ್ಕಾಚಾರ: ಪಂಚಮಸಾಲಿ, ಸಾದರ ಲಿಂಗಾಯತ, ಕುರುಬ ಸಮುದಾಯಗಳ ಒಲವು ಗಳಿಸುವ ಅಭ್ಯರ್ಥಿಗೇ ‘ವಿಜಯ ಮಾಲೆ’ ಸಿಕ್ಕಬಹುದಾದರೂ, ಆ ಹಾರ ಹಾಕುವ ಕೈ ಅಲ್ಪಸಂಖ್ಯಾತ ಮತಗಳದ್ದು. ಬಿಜೆಪಿ ವಿರುದ್ಧವಾಗಿ ಗೆಲ್ಲಬಹುದಾದ ಅಭ್ಯರ್ಥಿಗೇ ಅಲ್ಪಸಂಖ್ಯಾತರ ಹೆಚ್ಚಿನ ಮತಗಳು ಚಲಾವಣೆಯಾಗಲಿವೆ. ಹೀಗಾಗಿ ಮುಸ್ಲಿಂ ಮತಗಳ ಖಾತ್ರಿಗೆ ಜೆಡಿಎಸ್‌–ಕಾಂಗ್ರೆಸ್‌ ತಂತ್ರ ಹೂಡುತ್ತಿವೆ. ಈ ಮತಗಳು ಹಂಚಿಕೆಯಾದರೆ ಬಿಜೆಪಿಗೆ ಅನುಕೂಲ. ಒಗ್ಗೂಡಿದರೆ ‘ಕಮಲ’ಕ್ಕೆ ಕಷ್ಟ ಎಂಬುದು ಕ್ಷೇತ್ರದ ರಾಜಕೀಯ ಲೆಕ್ಕಾಚಾರ.

ಹರಿಹರ ಕ್ಷೇತ್ರ

ಪುರುಷರು, 1,04,436

ಮಹಿಳೆಯರು 1,04,948

ಒಟ್ಟು 2,09,384

ಹೊಸ ಮತದಾರರು 15,303

ಎಚ್‌.ಎಸ್‌. ಶಿವಶಂಕರ್: 59,666

ಎಸ್‌. ರಾಮಪ್ಪ: 40,613

ಬಿ.ಪಿ. ಹರೀಶ್‌: 37,786

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.