ADVERTISEMENT

ಹಳೆ ಕಟ್ಟಡದಲ್ಲಿ ಮಹಡಿ ನಿರ್ಮಾಣಕ್ಕೆ ಆಕ್ಷೇಪ

ನಗರದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 6:59 IST
Last Updated 16 ಜೂನ್ 2018, 6:59 IST

ದಾವಣಗೆರೆ: ನಗರದ ಚಾಮರಾಜಪೇಟೆಯಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಶುಕ್ರವಾರ ದಿಢೀರ್‌ ಭೇಟಿ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಅವ್ಯವಸ್ಥೆ ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಹಳೆಯ ಕಟ್ಟಡದ ಮೇಲೆ ಮಹಡಿಯನ್ನು ನಿರ್ಮಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

1937ರಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗಿದ್ದು, 80 ವರ್ಷಗಳಾಗಿವೆ. ಇಷ್ಟೊಂದು ಹಳೆಯ ಕಟ್ಟಡ ಮೇಲೆ ಇನ್ನೊಂದು ಮಹಡಿಯನ್ನು ನಿರ್ಮಿಸಲು ಯಾರು ಪರವಾನಗಿ ನೀಡಿದ್ದಾರೆ. ಕೆಳಗೆ ರೋಗಿಗಳಿರುತ್ತಾರೆ. ಏನಾದರೂ ಅನಾಹುತ ಆದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಸ್ಥಳದಲ್ಲಿದ್ದ ಗುತ್ತಿಗೆದಾರರು, ₹ 9 ಕೋಟಿ ವೆಚ್ಚದಲ್ಲಿ ಮಹಡಿ ನಿರ್ಮಿಸಲು ಇಲಾಖೆಯು ಪರವಾನಗಿ ನೀಡಿದೆ ಎಂದು ತಿಳಿಸಿದರು. ಕಟ್ಟಡ ನಿರ್ಮಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷೆ, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅವರ ಮೊಬೈಲ್‌ಗೆ ಕರೆ ಮಾಡಿ, ಸ್ಥಳವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೋರಿದರು.

ADVERTISEMENT

ಆಸ್ಪತ್ರೆಯ ಹೆರಿಗೆ ವಿಭಾಗ, ನವಜಾತ ಶಿಶು ವಿಭಾಗ, ಔಷಧ ದಾಸ್ತಾನು ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಣದೇ ಇರುವುದು ಹಾಗೂ ರೋಗಿಗಳಿಗೆ ಔಷಧ ಇಟ್ಟುಕೊಳ್ಳಲು ಕೊಟ್ಟ ಟೇಬಲ್‌ ಜಂಗು ಹಿಡಿದಿರುವುದನ್ನು ಕಂಡು ಸಿಡಿಮಿಡಿಗೊಂಡರು. ರೋಗಿಗಳಿಗೆ ಹಳೆಯ ಹೊದಿಕೆಗಳನ್ನು ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

‘ಹೊಸ ಏಜೆನ್ಸಿಗೆ ನೀಡಿದ್ದರೂ ತಮಗೆ ಸಂಬಳ ಹೆಚ್ಚಾಗಿಲ್ಲ. ಹಿಂದಿನ ಏಜೆನ್ಸಿಯವರು ಪಿಎಫ್‌ ಹಣವನ್ನು ಕೊಟ್ಟಿಲ್ಲ’ ಎಂದು ಹೊರಗುತ್ತಿಗೆ
ಸಿಬ್ಬಂದಿ ಅಧ್ಯಕ್ಷೆ ಬಳಿ ಅಳಲು ತೋಡಿಕೊಂಡರು.

ಅನುದಾನ ಕೊರತೆ

‘ಆಸ್ಪತ್ರೆಯ ಕಚೇರಿ ನಿರ್ವಹಣೆಗೆ ಕೇವಲ ₹ 2 ಲಕ್ಷ ಅನುದಾನ ಬರುತ್ತಿದೆ. ಸ್ಥಳೀಯವಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ಅನುದಾನದ
ಕೊರತೆ ಇದೆ. ಹೊರ ರೋಗಿ ವಿಭಾಗಗಳಿಂದ ಶುಲ್ಕ ವಸೂಲಿ ಮಾಡಿದ್ದರೆ ಅದರಿಂದ ಬಂದ ಹಣವನ್ನು ಸ್ಥಳೀಯವಾಗಿ ದುರಸ್ತಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತಿತ್ತು’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು.

ಖಾಸಗಿ ಆಸ್ಪತ್ರೆಯಿಂದ ಇಲ್ಲಿಗೆ ಸ್ನಾತಕೋತ್ತರ ವೈದ್ಯ ಪದವಿ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಿದ್ದಾರೆ. ಆದರೆ, ಅವರ ಮೇಲೆ ನಮಗೆ ಹಿಡಿತ ಇಲ್ಲದಿರುವುದರಿಂದ ಅವರಿಂದ ಸಮರ್ಪಕವಾಗಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಾಗೀಶ್‌, ಸದಸ್ಯೆ ಶೈಲಾ ಬಸವರಾಜ್‌, ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಜೆ.ಬಿ. ನೀಲಕಂಠ, ಆಡಳಿತ ಅಧೀಕ್ಷಕ ಹೇಮಣ್ಣ, ಅರವಳಿಕೆ ತಜ್ಞ ಡಾ. ಬಸವರಾಜ್‌ ಇದ್ದರು.

ಕುಡಿಯುವ ನೀರಿಗೆ ಪರದಾಟ

ಆಸ್ಪತ್ರೆಯ ಆವರಣದಲ್ಲಿನ ಕುಡಿಯುವ ನೀರಿನ ಯಂತ್ರ (ಆರ್‌.ಒ) ಕೆಟ್ಟುಹೋಗಿರುವುದನ್ನು ಕಂಡು ಆಕ್ರೋಶಗೊಂಡ ಮಂಜುಳಾ, ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಎರಡು ದಿನಗಳ ಒಳಗೆ ಯಂತ್ರವನ್ನು ಸರಿಪಡಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸೋಮವಾರ ಮತ್ತೆ ಬಂದು ಪರಿಶೀಲಿಸಲಾಗುವುದು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.