ADVERTISEMENT

ಹಿರೇಕಲ್ಮಠದ ದೊಡ್ಡಕೆರೆ ಕಾಮಗಾರಿ ಕಳಪೆ

ಹೊನ್ನಾಳಿ ತಾಲ್ಲೂಕು ರೈತ ಸಂಘದ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 9:24 IST
Last Updated 13 ಜೂನ್ 2018, 9:24 IST

‌ಹೊನ್ನಾಳಿ: ಪಟ್ಟಣ ಸಮೀಪದಲ್ಲಿರುವ ಹಿರೇಕಲ್ಮಠದ ದೊಡ್ಡಕೆರೆ ಹೂಳೆತ್ತುವ ಮತ್ತು ಅಭಿವೃದ್ಧಿ ಪಡಿಸುವ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ತಾಲ್ಲೂಕು ರೈತ ಸಂಘದ ಮುಖಂಡರು ಆರೋಪಿಸಿದರು.

ಹಿರೇಕಲ್ಮಠದ ದೊಡ್ಡಕೆರೆಯ ವಿಸ್ತ್ರೀರ್ಣ 64 ಎಕರೆ ಇದೆ. ಕೆರೆ ಅಭಿವೃದ್ಧಿ ಕಾಮಗಾರಿ ನವೆಂಬರ್ 2017ರಂದು ₹ 1 ಕೋಟಿಗೆ ಟೆಂಡರ್ ಆಗಿದ್ದು, ಕಾಮಗಾರಿ ಸಾಕಷ್ಟು ಕಳಪೆಯಾಗಿದೆ ಎಂದು ರೈತ ಮುಖಂಡ ಸದಾಶಿವಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೆರೆ ಹೂಳೆತ್ತುವುದು, ಸೈಡ್ ವಾಲ್ ನಿರ್ಮಾಣ, ಕೆರೆ ಏರಿ ಅಭಿವೃದ್ಧಿ, ಕಾಲುವೆ ನಿರ್ಮಾಣ ಮತ್ತು ಕೆರೆ ಕೋಡಿ ಬಿದ್ದಾಗ ಹೋಗಲು ಚರಂಡಿ ನಿರ್ಮಾಣ ಸೇರಿ ಹಲವು ಕಾಮಗಾರಿಗಳು ಅಂದಾಜು ಪಟ್ಟಿಯಲ್ಲಿದೆ. ಆದರೆ, ಇದು ಆಗದೇ ಶೇ 50ರಷ್ಟು ಬಿಲ್‌ ಗುತ್ತಿಗೆದಾರರ ಜೇಬು ಸೇರಿದೆ ಎಂದು ಹಿರೇಮಠದ ಬಸವರಾಜಪ್ಪ ಆರೋಪಿಸಿದರು.

ADVERTISEMENT

ಕೆರೆಯ ಮಧ್ಯದಲ್ಲಿ ಕನಿಷ್ಠ 2 ಅಡಿ ಆಳ ಮತ್ತು ಕೆರೆಯ ಸುತ್ತ ಗಡಿ ಭಾಗದಲ್ಲಿ ಕನಿಷ್ಠ 6 ಅಡಿ ಆಳವಿದ್ದರೆ ನೀರು ಸಂಗ್ರಹವಾಗುತ್ತದೆ. ಆದರೆ, ಎಲ್ಲಿಯೂ ಕೆರೆ ಹೂಳು ಎತ್ತಿದ ಕುರುಹು ಕಾಣುತ್ತಿಲ್ಲ. ಕೆರೆ ತುಂಬಿದರೆ ಕನಿಷ್ಠ 150 ರಿಂದ 200 ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ಅಷ್ಟೊಂದು ಸಾಮರ್ಥ್ಯದ ನೀರು ಸಂಗ್ರಹವಾಗುತ್ತದೆ. ಮಳೆ ಬಾರದೇ ಇದ್ದರೂ ಈ ಕೆರೆಗೆ ತುಂಗಾ ನಾಲೆ ಮೂಲಕ ನೀರು ಹರಿದು ಬರಲಿದೆ. ಹೀಗಾಗಿ ಈ ಕೆರೆ ಅಭಿವೃದ್ಧಿ ರೈತರಿಗೆ ಮುಖ್ಯ ಎನ್ನುತ್ತಾರೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡಲೇ ಕೆರೆಗೆ ಭೇಟಿ ನೀಡಿ ಪರಿಶೀಲಿಸಬೇಕು. ತಪ್ಪಿತಸ್ಥ ಎಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಈಗಾಗಿರುವ ಕಳಪೆ ಕಾಮಗಾರಿ ಕುರಿತು ತನಿಖೆ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಲ್ಲೂಕಿನಾದ್ಯಂತ ರೈತರನ್ನು ಒಟ್ಟುಗೂಡಿಸಿ ಬೃಹತ್ ಪ್ರಮಾಣದ ಹೋರಾಟ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಚನ್ನೇಶ್ ಜಕ್ಕಲಿ ಎಚ್ಚರಿಕೆ ನೀಡಿದ್ದಾರೆ.

ರೈತ ಮುಖಂಡರಾದ ಹರಳಹಳ್ಳಿ ಬಸವರಾಜಪ್ಪ, ಮಾಜಿ ಸೈನಿಕ ರಮೇಶ್, ಜೋಗ ಲೋಕೇಶಪ್ಪ ಇದ್ದರು.

ಕೋಡಿ ಕಟ್ಟುವುದು, ಒಳಚರಂಡಿ ಕಾಮಗಾರಿ ಸೇರಿ ಶೇ 50ರಷ್ಟು ಹೂಳು ತೆಗೆಯುವ ಕಾಮಗಾರಿ ಮುಗಿದಿದೆ. ಅದಕ್ಕೆ ತಕ್ಕಂತೆ ಬಿಲ್ ಪಾವತಿಸಲಾಗಿದೆ. ಇನ್ನೂ ಕೆಲಸ ಬಹಳ ಇದೆ
ಜಗದೀಶ್, ಸಣ್ಣ ನೀರಾವರಿ ಇಲಾಖೆ ವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.